ಮುನಿರಾಬಾದ : ಸೋಮವಾರ ಒಂದೇ ದಿನ ತುಂಗಭದ್ರಾ ಜಲಾಶಯಕ್ಕೆ 1 ಟಿಎಂಸಿಗಿಂತ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಜಲಾಶಯಕ್ಕೆ 12,735 ಕ್ಯುಸೆಕ್ಸ್ ನೀರು ಹರಿದು ಬಂದಿದೆ. ಇದು ಪ್ರಸಕ್ತ ಸಾಲಿನಲ್ಲಿ ತುಂಗಭದ್ರಾ ಜಲಾಶಯಕ್ಕೆ ಹರಿದು ಬಂದ ಅತ್ಯಧಿಕ ಪ್ರಮಾಣದ ಒಳಹರಿವು ಆಗಿದೆ. ಜಲಾಶಯದಲ್ಲಿ 6.78 ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ. ಜಲಾಶಯದ ನೀರಿನ ಮಟ್ಟವು 1584 ಅಡಿಗಳಷ್ಟು ಇದೆ.
ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ ನೀರಿನ ಮಟ್ಟವು 1576 ಅಡಿಗಳಿತ್ತು. ಜಲಾಶಯದಲ್ಲಿ ನೀರಿನ ಶೇಖರಣೆ ಪ್ರಮಾಣವು 3.9 ಟಿಎಂಸಿ ಇತ್ತು. ಜಲಾಶಯಕ್ಕೆ ಕೇವಲ 134 ಕ್ಯುಸೆಕ್ಸ್‌ನಷ್ಟು ಒಳಹರಿವು ಇತ್ತು.
ರವಿವಾರದಂದು ತುಂಗಭದ್ರಾ ಜಲಾಶಯಕ್ಕೆ 6,308 ಸಾವಿರ ಕ್ಯುಸೆಕ್ಸ್ ನೀರು ಹರಿದು ಬಂದಿದ್ದು, 2 ದಿನದಲ್ಲಿ ಜಲಾಶಯಕ್ಕೆ 19,043 ಸಾವಿರ ಕ್ಯುಸೆಕ್ಸ್ ನೀರು ಹರಿದು ಬಂದಿದೆ.
ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗೆ 10 ವರ್ಷ ಜೈಲು:
ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹30,000 ದಂಡ ವಿಧಿಸಿ ಕೊಪ್ಪಳ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೋ)ದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಆದೇಶಿಸಿದ್ದಾರೆ.ಕುಕನೂರ ತಾಲೂಕಿನ ದ್ಯಾಂಪುರು ಗ್ರಾಮದಲ್ಲಿ ನಿರ್ಮಾಣವಾಗುತ್ತಿದ್ದ ಮನೆ ಕೂಲಿ ಕೆಲಸಕ್ಕೆಂದು ತನ್ನ ಕುಟುಂಬದೊಂದಿಗೆ ಬಂದ ಬಾಲಕಿಗೆ ಆರೋಪಿತನು ಪರಿಚಯ ಮಾಡಿಕೊಂಡು ಸಲುಗೆಯಿಂದ ಮಾತನಾಡಿಸುತ್ತ ಪ್ರೀತಿಸುವುದಾಗಿ ಹೇಳಿದ್ದು, ಪ್ರೀತಿಸದಿದ್ದರೆ ಸಾಯಿಸಿ ತಾನು ಸಾಯುವುದಾಗಿ ಹೆದರಿಕೆ ಹಾಕಿರುತ್ತಾನೆ.
ನಿರ್ಮಾಣ ಹಂತದಲ್ಲಿರುವ ಮನೆಯ ಹತ್ತಿರದಲ್ಲಿ ಕೂಲಿ ಕಾರ್ಮಿಕರಿಗೆ ವಾಸಿಸಲು ಹಾಕಿದ್ದ ಶೆಡ್ಡಿನಲ್ಲಿ ಆರೋಪಿತನು ವಾಸವಾಗಿದ್ದು, ಅಪ್ರಾಪ್ತಳು ಎಂದು ಗೊತ್ತಿದ್ದರೂ 2019ರ ಮೇ 4ರಂದು ಯಾರೂ ಇಲ್ಲದ ಸಮಯದಲ್ಲಿ ಬಾಲಕಿಗೆ ಬಲವಂತವಾಗಿ ಶೆಡ್ಡಿನಲ್ಲಿ ಕರೆದುಕೊಂಡು ಹೋಗಿ ಹೆದರಿಸಿ ಮೊದಲ ಬಾರಿ ಅತ್ಯಾಚಾರ ಮಾಡಿದ್ದಾನೆ.
ನಂತರ ಸಮಯ ಸಿಕ್ಕಾಗಲೆಲ್ಲ ತನ್ನ ಶೆಡ್ ಹಾಗೂ ನಿರ್ಮಾಣ ಹಂತದಲ್ಲಿರುವ ಮನೆಯ ರೂಮಿನಲ್ಲಿ 4ರಿಂದ ಸಲ ಬಲಾತ್ಕಾರ ಮಾಡಿದ್ದಾನೆ. ನಿರ್ಮಾಣ ಹಂತದಲ್ಲಿರುವ ಮನೆಯ ಕೆಲಸ ಮುಗಿಯುತ್ತಿದ್ದಂತೆ ಬಾಲಕಿ ತಮ್ಮ ಗ್ರಾಮಕ್ಕೆ ಹೋಗುತ್ತಾಳೆಂಬ ವಿಷಯ ಗೊತ್ತಾಗಿ ಆರೋಪಿ ಬಾಲಕಿಯನ್ನು ಅಪಹರಿಸಿಕೊಂಡು ಮಹಾರಾಷ್ಟ್ರದ ಸತಾರ ನಗರಕ್ಕೆ ಹೋಗಿ ಅಲ್ಲಿ ತನ್ನ ಗೆಳೆಯನು ಕೊಡಿಸಿದ ರೂಮಿನಲ್ಲಿ ಸುಮಾರು 20 ದಿನಗಳವರೆಗೆ ವಾಸವಾಗಿದ್ದು, ಆ ದಿನಗಳಲ್ಲಿ ಸಮಯ ಸಿಕ್ಕಾಗಲೆಲ್ಲ ಬಾಲಕಿ ಮೇಲೆ ಬಲಾತ್ಕಾರ ಮಾಡಿರುವ ಆರೋಪದ ಹಿನ್ನೆಲೆ ಕುಕನೂರು ಪೋಲಿಸರು ದೂರು ಸ್ವೀಕರಿಸಿದ್ದು, ಯಲಬುರ್ಗಾ ಗ್ರಾಮೀಣ ವೃತ್ತದ ಸಿಪಿಐ ರಮೇಶ ರೊಟ್ಟಿ ಪ್ರಕರಣದ ತನಿಖೆ ನಿರ್ವಹಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ಶಫಿಕ ಭೀರಸಾಬ ಮೇಲ್ಗಡೆ ಮಾಟಲದಿನ್ನಿ ಮೇಲಿನ ಆರೋಪ ಸಾಬೀತಾಗಿವೆ ಎಂದು 10 ವರ್ಷಗಳ ಜೈಲು ಶಿಕ್ಷೆ ಹಾಗೂ ₹ 30,000 ದಂಡ ಭರಿಸುವಂತೆ ಮತ್ತು ದಂಡದ ಮೊತ್ತದಲ್ಲಿ ₹10,000 ಯನ್ನು ಬಾಲಕಿಗೆ ಪರಿಹಾರ ರೂಪದಲ್ಲಿ ನೀಡವಂತೆ ಆದೇಶಿಸಿ, ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶ ಕುಮಾರ ಡಿ.ಕೆ. ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ಪ್ರಕರಣ ನಡೆಸಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.