ಕನ್ನಡದ ಸೇನಾ ದಂಡನಾಯಕರುಗಳ ಪುತ್ಥಳಿ ಪ್ರತಿಷ್ಠಾಪನೆಗೆ ಹಿಡಿದ ಗ್ರಹಣ!

KannadaprabhaNewsNetwork |  
Published : Jul 26, 2025, 01:30 AM IST
24ಡಿಡಬ್ಲೂಡಿ1,2ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿಯಲ್ಲಿರುವ ರಾಷ್ಟ್ರೀಯ ಲಾಂಛನ ಹಾಗೂ ಸೇನಾ ದಂಡನಾಯಕರುಗಳಾದ ಕೆ.ಎಂ. ಕಾರ್ಯಪ್ಪ, ಕೆ.ಎಸ್. ತಿಮ್ಮಯ್ಯ, ಗೋಪಾಲ ಬೇವೂರ ಪುತ್ಥಳಿ. | Kannada Prabha

ಸಾರಾಂಶ

ಮೂವರು ದಂಡ ನಾಯಕರುಗಳ ಪುತ್ಥಳಿ ಪ್ರತಿಷ್ಠಾಪನೆಗೆ ಪಾಲಿಕೆಗೆ ಅಲೆದಾಡಿ, ಜನಪ್ರತಿನಿಧಿಗಳ ಕಾಡಿ ಬೇಡಿದರೂ ಇನ್ನೂ ಸಮಯ ಕೂಡಿ ಬರುತ್ತಿಲ್ಲ

ಬಸವರಾಜ ಹಿರೇಮಠ ಧಾರವಾಡ

ಯುದ್ಧ ನಡೆದಾಗಲಷ್ಟೇ ಸೈನಿಕರ ಬಗ್ಗೆ ಅತ್ಯಂತ ಕಾಳಜಿ ತೋರುವ, ವೀರಾವೇಷದಿಂದ ಮಾತನಾಡುವ ನಮ್ಮ ಜನಪ್ರತಿನಿಧಿಗಳಿಗೆ ಕನ್ನಡದ ಮೂವರು ಭಾರತೀಯ ಸೇನಾ ದಂಡನಾಯಕರುಗಳ ಪುತ್ಥಳಿಗಳನ್ನು ಪ್ರತಿಷ್ಠಾಪಿಸಲು ಸಮಯ ಸಿಗದಿರುವುದು ಸೋಜಿಗದ ಸಂಗತಿ.

ಫಿಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ ಮತ್ತು ಜನರಲ್‌ ಗೋಪಾಲ ಗುರುನಾಥ ಬೇವೂರ ಅವರ 2.5 ಅಡಿ ಎತ್ತರ ಹಾಗೂ 2 ಅಡಿ ಅಗಲದ ಪುತ್ಥಳಿಗಳ ಜತೆಗೆ ಅದೇ ಗಾತ್ರದ ರಾಷ್ಟ್ರೀಯ ಲಾಂಛನವನ್ನು ಧಾರವಾಡ ಕಾರ್ಗಿಲ್ ಸ್ತೂಪದ ಆವರಣದಲ್ಲಿ ಪ್ರತಿಷ್ಠಾಪಿಸಲು ಹು-ಧಾ ಮಹಾನಗರ ಪಾಲಿಕೆ 2017ರಲ್ಲಿ ತೀರ್ಮಾನಿಸಿತ್ತು. ಅಂತೆಯೇ, ಪುತ್ಥಳಿಗಳನ್ನೂ ಸಿದ್ಧಪಡಿಸಿಕೊಂಡಿದೆ. ಆದರೆ, ಕಳೆದ ಏಳು ವರ್ಷಗಳಿಂದ ಪುತ್ಥಳಿಗಳು ವಲಯ ಕಚೇರಿಯೊಂದರಲ್ಲಿ ಧೂಳು ತಿನ್ನುತ್ತಿವೆ. ಇದು ಸೈನಿಕರಿಗೆ ತೋರುವ ಅಗೌರವ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.

2018ರಲ್ಲೇ ಸ್ಥಾಪಿಸಬೇಕಿತ್ತು:

ಈ ಮೂವರು ಗಣ್ಯರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಹು-ಧಾ ಮಹಾನಗರ ಪಾಲಿಕೆಯು ₹10 ಲಕ್ಷ ಅನುದಾನ ನೀಡಿದೆ. ಅದರಂತೆ ಮುಂಬೈ ಖ್ಯಾತ ಕಲಾವಿದರು ಇವುಗಳನ್ನು ರಚಿಸಿ ಪಾಲಿಕೆಗೆ ಒಪ್ಪಿಸಿದ್ದಾರೆ. ಅವುಗಳನ್ನು ಪ್ರತಿಷ್ಠಾಪಿಸಿ 2018 ಜನವರಿ 28ಕ್ಕೆ ಲೋಕಾರ್ಪಣೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಮಹಾನ್‌ ನಾಯಕರುಗಳ ಪುತ್ಥಳಿಯನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪನೆಗೆ ಸರ್ಕಾರದ ಅನುಮತಿ ಕಡ್ಡಾಯವಾದ ಹಿನ್ನೆಲೆಯಲ್ಲಿ ಸರ್ಕಾರದ ಪರವಾನಗಿ ಪಡೆಯಲು ಇಷ್ಟು ವರ್ಷಗಳ ಕಾಲ ಕಾಯುವ ಸ್ಥಿತಿ ಬಂದಿದೆ. ಇಷ್ಟು ವರ್ಷವಾದರೂ ಈ ಬಗ್ಗೆ ಸರ್ಕಾರದ ಬಳಿ ಪ್ರಸ್ತಾವನೆಯೇ ಹೋಗಿಲ್ಲ ಎಂಬುದು ಅಚ್ಚರಿ ತರಿಸಿದೆ.

ಇವರ ಪ್ರಯತ್ನಕ್ಕೆ ಏನು ಬೆಲೆ?

ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಅಧ್ಯಕ್ಷರು, ಧಾರವಾಡದ ಕಾರ್ಗಿಲ್‌ ಸ್ತೂಪದ ಸಂಸ್ಥಾಪಕರೂ ಆದ ಚಂದ್ರಶೇಖರ ಅಮೀನಗಡ, ಈ ಮೂವರು ದಂಡ ನಾಯಕರುಗಳ ಪುತ್ಥಳಿ ಪ್ರತಿಷ್ಠಾಪನೆಗೆ ಪಾಲಿಕೆಗೆ ಅಲೆದಾಡಿ, ಜನಪ್ರತಿನಿಧಿಗಳ ಕಾಡಿ ಬೇಡಿದರೂ ಇನ್ನೂ ಸಮಯ ಕೂಡಿ ಬರುತ್ತಿಲ್ಲ ಎಂಬುದು ಖೇದಕರ ಸಂಗತಿ.

ಯೋಧರ ಪುತ್ಥಳಿ ಪ್ರತಿಷ್ಠಾಪನೆ ಬೇಡವೆಂದಾದರೆ ಅದಕ್ಕೆ ₹10 ಲಕ್ಷ ನಾಗರಿಕರ ದುಡ್ಡು ಖರ್ಚು ಮಾಡಿದ್ದಾದರೂ ಏಕೆ?, ಪುತ್ಥಳಿ ರಚಿಸಿ ಪಾಲಿಕೆ ವಲಯ ಕಚೇರಿಯಲ್ಲಿ ಇಟ್ಟಿದ್ದೇಕೆ? ಕನಿಷ್ಠ ಪಕ್ಷ ಆ ಪುತ್ಥಳಿಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಾದರೂ ಇಟ್ಟು ಕನಿಷ್ಠ ಗೌರವ ಕೊಡುವ ತಿಳುವಳಿಕೆಯೂ ಮಹಾನಗರ ಪಾಲಿಕೆಗೆ ಇಲ್ಲವೇ? ಎಂದು ಚಂದ್ರಶೇಖರ ಅಮೀನಗಡ ಪ್ರಶ್ನಿಸುತ್ತಾರೆ.

ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿಯಲ್ಲಿ ನಾನು ಸೇರಿದಂತೆ ಪದಾಧಿಕಾರಿಗಳು ಸೈನಿಕರು ಅಲ್ಲ, ಮಾಜಿ ಸೈನಿಕರೂ ಅಲ್ಲ. ದೇಶಭಕ್ತರು. ಈ ಹಿನ್ನೆಲೆಯಲ್ಲಿ 2002ರಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಧಾರವಾಡದಲ್ಲಿ ಕಾರ್ಗಿಲ್‌ ಸ್ತೂಪ ಸ್ಥಾಪನೆ ಮಾಡಿ ಅಲ್ಲಿ ಸೈನಿಕರ, ಮಾಜಿ ಸೈನಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಪ್ರಸ್ತುತ ವರ್ಷ ಕಾರ್ಗಿಲ್‌ ಯುದ್ಧದ 26ನೇ ವಿಜಯೋತ್ಸವವನ್ನು ಜುಲೈ 26ರಂದು ಮಾಡುತ್ತಿದ್ದೇವೆ. ಈಗಾಗಲೇ ₹28 ಲಕ್ಷ ವೆಚ್ಚದಲ್ಲಿ ಸ್ತೂಪದ ಆವರಣದಲ್ಲಿ ಕೈತೋಟ, ವಿದ್ಯುತ್ ಅಲಂಕಾರ, ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ 533 ಯೋಧರ ಹೆಸರುಗಳುಳ್ಳ ಫಲಕ ಸ್ಥಾಪಿಸಿದ್ದು, ಇದರೊಂದಿಗೆ ಪ್ರಮುಖವಾಗಿ ದಂಡ ನಾಯಕರುಗಳ ಪುತ್ಥಳಿ ಸ್ಥಾಪಿಸಿದ್ದರೆ, ಈ ಸ್ಥಳ ಐತಿಹಾಸಿಕವಾಗಿ ಗುರುತಿಸಿಕೊಳ್ಳುತ್ತಿತ್ತು. ಆದರೆ, ಸರ್ಕಾರದಿಂದ ಪರವಾನಗಿ ಪಡೆದು ಯಾವಾಗ ಪ್ರತಿಷ್ಠಾಪನೆ ಮಾಡುತ್ತಾರೋ ನಾ ಕಾಣೆ ಎಂದು ಕಳವಳ ವ್ಯಕ್ತಪಡಿಸಿದರು.

ಸಾಮಾನ್ಯ ಸಭೆಯಲ್ಲಿ ಚರ್ಚೆ:

ಸೇನಾ ದಂಡನಾಯಕರುಗಳ ಕಂಚಿನ ಪುತ್ಥಳಿಗಳು ಸಿದ್ಧವಾಗಿದ್ದು, ಅವುಗಳನ್ನು ಪ್ರತಿಷ್ಠಾಪಿಸಲು ಸರ್ಕಾರದ ಅನುಮತಿ ಹಿನ್ನೆಲೆಯಲ್ಲಿ ವಿಳಂಬವಾಗಿದೆ. 2017ರಲ್ಲಿ ಸರ್ಕಾರದ ಪರವಾನಗಿ ಪಡೆದು ಪುತ್ಥಳಿ ನಿರ್ಮಾಣ ಮಾಡಬೇಕಿತ್ತು. ಇದೀಗ ಜುಲೈ ತಿಂಗಳ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಕೂಡಲೇ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಶೀಘ್ರ ಪುತ್ಥಳಿಗಳನ್ನು ಪ್ರತಿಷ್ಠಾಪಿಸಿ ಸೇನಾ ದಂಡನಾಯಕರುಗಳಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಲಾಗುವುದು ಎಂದು ಹು-ಧಾ ಮಹಾನಗರ ಪಾಲಿಕೆ ಮೇಯರ್‌ ಜ್ಯೋತಿ ಪಾಟೀಲ ತಿಳಿಸಿದ್ದಾರೆ.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ