ಗೋಕರ್ಣ: ಸಪ್ತ ಧಾತುಗಳು ಸಮಸ್ಥಿತಿಯಲ್ಲಿದ್ದರೆ ಆರೋಗ್ಯ; ಅವುಗಳಲ್ಲಿ ವೈಷಮ್ಯ ಅಥವಾ ವಿಕಾರ ಉಂಟಾದರೆ ಅದು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅನ್ನದ ಅಭಿಲಾಷೆ ಇರಬೇಕು; ಊಟ ಮಾಡಿದ್ದು ಸುಲಭವಾಗಿ ಜೀರ್ಣವಾಗಬೇಕು; ಜೀರ್ಣವಾದ ಬಳಿಕ ತ್ಯಾಜ್ಯಗಳು ದೇಹದಿಂದ ಸರಿಯಾಗಿ ಹೊರಹೋಗಬೇಕು. ದೇಹ ಹಗುರವಾಗಿರಬೇಕು; ಕಣ್ಣು, ಕಿವಿ, ಮೂಗು ಎಲ್ಲವೂ ಪ್ರಸನ್ನವಾಗಿರಬೇಕು; ಸಕಾಲಕ್ಕೆ ನಿದ್ದೆ- ಎಚ್ಚರ ಆಗಬೇಕು. ಮನಸ್ಸು ಪ್ರಫುಲ್ಲವಾಗಿರಬೇಕು; ಎಲ್ಲಕ್ಕಿಂತ ಹೆಚ್ಚಾಗಿ ದೇಹಾಗ್ನಿ ಸಮವಾಗಿರಬೇಕು. ಇದು ಆರೋಗ್ಯವಂತರ ಲಕ್ಷಣ ಎಂದು ವಿಶ್ಲೇಷಿಸಿದರು.
ಆಯುರ್ವೇದವೆಂಬ ಕಲ್ಪವೃಕ್ಷದ ಸ್ವಸ್ಥವೃತ್ತಶಾಖೆಯಲ್ಲಿ ವಿವರಿಸಿದ ದಿನಚರ್ಯ, ಋತುಚರ್ಯ, ರಾತ್ರಿಚರ್ಯಗಳನ್ನು ಪಾಲಿಸುವುದರಿಂದ ಆರೋಗ್ಯವೆಂಬ ಅಮೃತಫಲ ಲಭ್ಯವಾಗಲಿದೆ ಎಂದು ಬಣ್ಣಿಸಿದರು.ಅಂತೆಯೇ ಆತೂರು ವೃತ್ತದಲ್ಲಿ ರೋಗಗಳ ವಿವರಣೆ ಇದೆ. ವಾತ, ಪಿತ್ತ, ಕಫ ಎಂಬ ಮೂರು ಧಾತುಗಳು ಸಮಸ್ಥಿತಿಯಲ್ಲಿದ್ದರೆ ಮಾತ್ರ ಆತ್ಮಜ್ಞಾನ ಲಭ್ಯವಾಗುತ್ತದೆ ಎಂದು ಹೇಳಿದರು.
ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಯುವ ಪ್ರಧಾನ ಚಂದನಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜಿ. ಪ್ರಸನ್ನಕುಮಾರ್, ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಚಾತುರ್ಮಾಸ್ಯ ತಂಡದ ಪ್ರಧಾನ ಸಂಚಾಲಕ ಮಂಜುನಾಥ ಸುವರ್ಣಗದ್ದೆ, ಕುಮಟಾ ಮಂಡಲದ ಅಧ್ಯಕ್ಷ ಸುಬ್ರಾಯ ಭಟ್, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಮಾತೆಯರಿಂದ ಲಕ್ಷಕ್ಕೂ ಹೆಚ್ಚು ದೀಪದ ಬತ್ತ ಸಮರ್ಪಣೆ ನಡೆಯಿತು. ಅಶೋಕೆಯ ವೈಭವವನ್ನು ಬಣ್ಣಿಸುವ ಪ್ರವಾಸಿ ಪ್ರಪಂಚದ ಸಂಚಿಕೆಯನ್ನು ಶ್ರೀಗಳು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ವೇದಮೂರ್ತಿ ಪರಮೇಶ್ವರ ಮಾರ್ಕಂಡೆಯವರ ನೇತೃತ್ವದಲ್ಲಿ ಕುಮಟಾ- ಹೊನ್ನಾವರ ಮಂಡಲಗಳ ಶಿಷ್ಯರಿಂದ ಲಕ್ಷ ತುಳಸಿ ಅರ್ಚನೆ ನಡೆಯಿತು.