ಶಿರಸಿ: ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿಲ್ಲ. ಸಾರ್ವಜನಿಕರಿಗೆ ಸೂಕ್ತ ಸೇವೆ ಒದಗಿಸುವ ಬದಲು ಅನಗತ್ಯ ಕಾರಣ ನೀಡಿ, ತೊಂದರೆ ನೀಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ತಾಲೂಕು ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಮಾ ಉಗ್ರಾಣಕರ ಎಚ್ಚರಿಸಿದರು.
ಅವರು ಶುಕ್ರವಾರ ನಗರದ ತಾಪಂನ ಅಬ್ದುಲ್ ನಜೀರಸಾಬ್ ಸಭಾಂಗಣದಲ್ಲಿ ತಾಲೂಕಾ ಗ್ಯಾರಂಟಿ ಯೋಜನಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೇಜವಾಬ್ದಾರಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.ಶಿರಸಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಪುರುಷನೊಬ್ಬ ಅಸಭ್ಯವಾಗಿ ವರ್ತಿಸಿ, ಆಕೆ ತನ್ನ ರಕ್ಷಣೆಗೋಸ್ಕರ ಅವನಿಗೆ ಹೊಡೆದಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ರಾಜ್ಯ ಮಟ್ಟದಲ್ಲಿ ಚರ್ಚೆಯಾಗಿದೆ. ರಾತ್ರಿ ಮತ್ತು ಹಗಲು ವೇಳೆ ಕಡ್ಡಾಯವಾಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ವಹಿಸಬೇಕು. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ಓಡಿಸಿ, ಅವರ ಜತೆ ಸಮಾಧಾನದಿಂದ ವರ್ತಿಸಬೇಕು ಎಂದು ತಾಕೀತು ಮಾಡಿದರು.
ಸದಸ್ಯ ಪ್ರಸನ್ನ ಶೆಟ್ಟಿ ಮಾತನಾಡಿ, ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ ವೀಡಿಯೊದಲ್ಲಿ ಚಾಲಕ-ನಿರ್ವಾಹಕರು ಕಾಣಿಸಿದ್ದಾರೆ. ಅವರು ತಪ್ಪಿಸುವ ಬದಲು ನಿಂತು ನೋಡುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿ ಶಿರಸಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವೇ ಎಂಬ ಸಂದೇಶಗಳು ರವಾನೆಯಾಗುತ್ತಿದೆ. ಕೇಂದ್ರೀಯ ಮತ್ತು ಗಣೇಶನಗರದ ಬಸ್ ನಿಲ್ದಾಣದಲ್ಲಿ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಭದ್ರತಾ ಸಿಬ್ಬಂದಿ ನೇಮಿಸಬೇಕು ಎಂದರು.ಸಂಚಾರ ನಿಯಂತ್ರಕ ರಾಮಚಂದ್ರ ಶೆಟ್ಟಿ ಮಾತನಾಡಿ, ಶಕ್ತಿ ಯೋಜನೆಯಲ್ಲಿ ಸುಮಾರು ೧೬ ಲಕ್ಷ ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದು, ₹೪.೧೬ ಕೋಟಿ ಆದಾಯ ಬಂದಿದೆ. ಪ್ರತಿದಿನ ೫೫,೪೩೨ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ₹೧೩ ಲಕ್ಷ ಆದಾಯ ಬಂದಿದೆ ಎಂದು ಮಾಹಿತಿ ನೀಡಿದಾಗ ಸಾರಿಗೆ ಸಂಸ್ಥೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ, ಬಸ್‌ಗಳು ಕಂಡ ಕಂಡಲ್ಲಿ ಹಾಳಾಗಿ ನಿಲ್ಲುತ್ತಿವೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ತರಗತಿ ಸರಿಯಾದ ಸಮಯಕ್ಕೆ ಹಾಜರಾಗಲು ಸಾಧ್ಯವಾಗದೇ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಸಂಜೆ ವೇಳೆ ಸರಿಯಾದ ಸಮಯಕ್ಕೆ ಗ್ರಾಮೀಣ ಭಾಗಕ್ಕೆ ಬಸ್‌ಗಳು ತೆರಳುತ್ತಿಲ್ಲ ಎಂದು ದೂರು ಬಂದಿದೆ ಎಂದು ಹೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ಸಂಚಾರ ನಿಯಂತ್ರಣಾಧಿಕಾರಿ, ಕೆಲ ಬಸ್‌ಗಳು ೧೫ ಲಕ್ಷ ಕಿ.ಮೀ. ಸಂಚರಿಸಿವೆ. ಪದೇಪದೇ ದುರಸ್ತಿಗೆ ಬರುತ್ತಿರುವುದರಿಂದ ಸ್ವಲ್ಪ ಸಮಸ್ಯೆಯಾಗುತ್ತಿದ್ದು, ಹೊಸ ಬಸ್ಸುಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಹೊಸ ಬಸ್ಸುಗಳ ಪೂರೈಕೆಯಾದ ನಂತರ ಸಮಸ್ಯೆ ಬಗೆಹರಿಯಲಿದೆ ಎಂದರು.
ಮೆಕ್ಯಾನಿಕಲ್ ಮತ್ತು ಚಾಲಕ-ನಿರ್ವಾಹಕರ ಕೊರತೆಯೂ ಸ್ವಲ್ಪ ಪ್ರಮಾಣದಲ್ಲಿದ್ದು, ಸಭೆಯಲ್ಲಿ ಚರ್ಚಿತವಾದ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದಾಗ ಸದಸ್ಯರು ಆಕ್ರೋಶಗೊಂಡು, ಸರಿಯಾದ ಮಾಹಿತಿ ಪಡೆದುಕೊಂಡು ಸಭೆಗೆ ಹಾಜರಾಗಬೇಕು. ಮುಂದಿನ ಸಭೆಗೆ ಕಡ್ಡಾಯವಾಗಿ ಸಾರಿಗೆ ವ್ಯವಸ್ಥಾಪಕರು ಹಾಜರಿರುವಂತೆ ತಿಳಿಸಿ ಎಂದು ಆಗ್ರಹಿಸಿದರು.ಆಹಾರ ನಿರೀಕ್ಷಕಿ ಕವಿತಾ ಪಾಟಣಕರ ಸಭೆಗೆ, ಸರ್ಕಾರದ ಅನ್ನಭಾಗ್ಯ ಯೋಜನೆಯ ವರದಿಯನ್ನು ಸಭೆಗೆ ಮಂಡಿಸಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಚನ್ನಬಸಪ್ಪ ಹಾವಣಗಿ, ತಾಲೂಕು ಸಮಿತಿಯ ಶಶಿಕಲಾ ನಾಯ್ಕ, ಬಸವರಾಜ ಸಿದ್ದೇಶ, ಕಿರಣ ಮರಾಠಿ, ರಮೇಶ ಗೌಡ, ರಾಘವೇಂದ್ರ ಶೆಟ್ಟಿ, ಶ್ರೀಧರ ಹೆಗಡೆ, ಫಹಾದ್ ಖಾನ್ ಉಪಸ್ಥಿತರಿದ್ದರು.