ಪ್ರತಿ ಮನುಷ್ಯ ಭಗವಂತನ ಪರೀಕ್ಷೆಗೊಳಗಾಗುತ್ತಾನೆ, ಪಾಪ ಪುಣ್ಯದ ಅರಿವು ಈಗಲಾದರೂ ಬೇಕಾಗಿದೆ. ನಮ್ಮ ಬುದ್ಧಿ, ಮನಸ್ಸುಗಳು ಸಕಾರಾತ್ಮಕ ಚಿಂತನೆಗಳನ್ನು ಒಳಗೊಂಡಿರಬೇಕು, ಬದುಕಿನ ಕೊನೆಯಲ್ಲಿ ಪಶ್ಚಾತ್ತಾಪಪಡುವಂತಹ ಜೀವನ ಸ್ಥಿತಿ ತಂದುಕೊಳ್ಳುವುದಕ್ಕಿಂತ, ತಮ್ಮ ಜೀವಿತಾವಧಿಯಲ್ಲಿ ಪರೋಪಕಾರದ ಜೀವನ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹಾನಗಲ್ಲ: ಪ್ರತಿ ಮನುಷ್ಯ ಭಗವಂತನ ಪರೀಕ್ಷೆಗೊಳಗಾಗುತ್ತಾನೆ, ಪಾಪ ಪುಣ್ಯದ ಅರಿವು ಈಗಲಾದರೂ ಬೇಕಾಗಿದೆ. ನಮ್ಮ ಬುದ್ಧಿ, ಮನಸ್ಸುಗಳು ಸಕಾರಾತ್ಮಕ ಚಿಂತನೆಗಳನ್ನು ಒಳಗೊಂಡಿರಬೇಕು, ಬದುಕಿನ ಕೊನೆಯಲ್ಲಿ ಪಶ್ಚಾತ್ತಾಪಪಡುವಂತಹ ಜೀವನ ಸ್ಥಿತಿ ತಂದುಕೊಳ್ಳುವುದಕ್ಕಿಂತ, ತಮ್ಮ ಜೀವಿತಾವಧಿಯಲ್ಲಿ ಪರೋಪಕಾರದ ಜೀವನ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹಾನಗಲ್ಲಿನ ಲಿಂ.ಕುಮಾರಶಿವಯೋಗಿಗಳವರ ೯೬ನೇ ಪುಣ್ಯಸ್ಮರಣೋತ್ಸವದ ಎರಡನೇ ದಿನದ ಧರ್ಮಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ೨೧ನೇ ಶತಮಾನ ಜ್ಞಾನವಂತರ ಶತಮಾನ. ಈಗ ಕಲಿಯುಗದಲ್ಲಿದ್ದೇವೆ. ಇಲ್ಲಿ ಕಲಿಯಬೇಕಾದುದು ಬಹಳ ಇದೆ. ಮನುಷ್ಯನಿಗೆ ಭಕ್ತಿ ಮಾರ್ಗದ ಅಗತ್ಯ ಈಗ ಹೆಚ್ಚಿದೆ. ಹಸಿವು, ಅರಿವು, ಮರೆವು, ಸಾವು ಭಗವಂತ ನೀಡಿದ ವರಗಳು. ಆದರೆ ಮಾನವನಾಗಿ ಹುಟ್ಟಿದ ಮೇಲೆ ಒಳ್ಳೆಯ ಆಚಾರ ವಿಚಾರಗಳನ್ನು ಒಳಗೊಂಡು ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ಇರುವ ಬದುಕಿನಲ್ಲಿ ಇನ್ನೊಬ್ಬರಿಗಾಗಿ ಬದುಕುವುದೇ ನಿಜವಾದ ಸಾಧನೆ. ನಮ್ಮ ಮನಸ್ಸನ್ನು ಪರಿಶುದ್ಧವಾಗಿಟ್ಟುಕೊಂಡು ಆತ್ಮಸಾಕ್ಷಿಯಿಂದ ಬದುಕುಬೇಕಾಗಿದೆ. ಗುರುವಿನ ಸಾನಿಧ್ಯ ಅತ್ಯವಶ್ಯವಾಗಿ ಬೇಕಾಗಿದೆ. ಆಧ್ಯಾತ್ಮದ ಅರಿವು ಕೂಡ ನಮಗೆ ಬೇಕು ಎಂದರು.ಬೆಂಗಳೂರಿನ ಆಯುರ್ವೇದ ತಜ್ಞ ಡಾ. ಗಿರಿಧರ ಖಜೆ ಮುಖ್ಯ ಅತಿಥಿಯಾಗಿ ಮಾತನಾಡಿ, ಭಾರತದ ಆಹಾರ ಪದ್ಧತಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದುದು. ನಮ್ಮ ದೇಶದ ಜನರಲ್ಲಿನ ಸಾಂಸ್ಕೃತಿಕ ನಡುವಳಿಕೆ, ಅದಕ್ಕೆ ತಕ್ಕುದಾದ ಆಹಾರ ಸೇವನೆಯಿಂದಾಗಿ ಗಟ್ಟಿಮುಟ್ಟಾದ ಆರೋಗ್ಯವನ್ನು ಹೊಂದಿದ್ದರು. ನಮ್ಮ ಆಹಾರದಲ್ಲಿ ಆಯುರ್ವೇದವೇ ಇದೆ. ಇಡೀ ನಾಡಿನಲ್ಲಿ ಪ್ರಾದೇಶಿಕವಾಗಿ ಆಹಾರ ಪದ್ಧತಿಗಳು ಬದಲಾಗಿದ್ದರೂ ಕೂಡ ಅವೆಲ್ಲ ಪ್ರಾದೇಶಿಕ ಆರೋಗ್ಯ ಸೂತ್ರಗಳಾಗಿದ್ದವು. ಬದಲಾದ ಆಹಾರದಿಂದಾಗಿ ಈಗ ದೇಹ ಕಾಯಿಲೆಗಳ ಗೂಡಾಗುತ್ತಿದೆ. ಜೀರ್ಣ ಶಕ್ತಿ ಕುಂಠಿತವಾಗುತ್ತಿದೆ. ಈಗಲಾದರೂ ನಮ್ಮ ಮೂಲ ಆಹಾರ ಆರೋಗ್ಯ ಪದ್ಧತಿಗಳನ್ನು ಅನುಸರಿಸುವ ಅಗತ್ಯವಿದೆ. ಹಾನಗಲ್ಲ ಲಿಂ.ಕುಮಾರಶಿವಯೋಗಿಗಳು ಆಯುರ್ವೇದ ಜ್ಞಾನದ ಪರಮೋಚ್ಛ ಸಾಧಕರಾಗಿದ್ದರು. ಇಂತಹ ಜ್ಞಾನದ ಪುನರುತ್ಥಾನವಾಗುವ ತೀರ ಅಗತ್ಯವಿದೆ ಎಂದರು.ಚಿಕಲಪರವಿ ರುದ್ರಮುನೀಶ್ವರಮಠದ ಸದಾಶಿವಮಹಾಸ್ವಾಮಿಗಳು ನೇತೃತ್ವವಹಿಸಿ ಮಾತನಾಡಿ, ಮಹಾತ್ಮರ ಚರಿತ್ರೆ ಓದಿದರೆ ಸಾಲದು. ಅದನ್ನು ಅನುಸರಿಸುವ ಮನಸ್ಸು ಬೇಕಾಗಿದೆ. ಅವರ ಸನ್ಮಾರ್ಗಗಳನ್ನು ಆಚರಣೆಗೆ ತಂದುಕೊಳ್ಳಬೇಕು. ಹಾನಗಲ್ಲ ಕುಮಾರಶಿವಯೋಗಿಗಳು ಹಾಲು ಬೆಲ್ಲದಂತೆ ಸಮಾಜಕ್ಕೆ ಬೋಧನೆ ಮಾಡಿ ಸಮಾಜ ಸೇವೆಯ ಸಂಕಲ್ಪವನ್ನು ಸಾರ್ಥಕಗೊಳಿಸಿದ್ದರು ಎಂದರು.ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ.ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ತಿಪಟೂರು ರುದ್ರಮುನಿ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಕುಮಾರಕೆಂಪಿನ ಸಿದ್ಧವೃಷಭೇಂದ್ರ ಮಹಾಸ್ವಾಮಿಗಳು, ಗೋಡಗೆರೆ ಪ್ರಭುಲಿಂಗಮಹಾಸ್ವಾಮಿಗಳು, ಅಬಲೂರು ಗಂಗಾಧರೇಶ್ವರ ದೇವರು ಸಮ್ಮುಖವಹಿಸಿದ್ದರು. ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮಿ ಗೇಟಿಯವರ ಉಪನ್ಯಾಸ ನೀಡಿದರು. ಮಾಜಿ ಶಾಸಕ ಶಿವರಾಜ ಸಜ್ಜನರ, ಶಾಸನ ತಂತ್ರ ರಾಮಚಂದ್ರಾಪುರಮಠದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಅತಿಥಿಗಳಾಗಿದ್ದರು.ಗೋಪಾಲ ಹುನಗನಹಳ್ಳಿ ಸ್ವಾಗತಿಸಿದರು. ಡಾ. ವಿಶ್ವನಾಥ ಬೋಂದಾಡೆ, ಉಮೇಶ ನಂದಿಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ರಾಜಕಾರಣಿಗಳ ವಿಷಯದಲ್ಲಿ ಆತ್ಮಸಾಕ್ಷಿ ಬಗ್ಗೆ ಮಾತನಾಡುವುದೇ ಕಷ್ಟ. ರಾಜಕಾರಣಿಗಲ್ಲಿಯೂ ಆತ್ಮಸಾಕ್ಷಿ ಕೆಲಸ ಮಾಡಬೇಕು. ನಾವೀಗ ಕಲಿಯುಗದಲ್ಲಿದ್ದೇವೆ. ಪರಿಶುದ್ಧ ಮನಸ್ಸಿನಿಂದ ಅಂತರಂಗ ಶುದ್ಧ ನಡೆ ನುಡಿಯೂ ಬೇಕಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.