ರಾಮನಗರ: ಸಮಾಜ ಸುಧಾರಕರು-ಕ್ರಾಂತಿಕಾರರು, ಶೋಷಿತರು ಮತ್ತು ಬಡವರಿಗೆ ಸಾಮಾಜಿಕ ಸಮಾನತೆ ಹಾಗೂ ರಾಜಕೀಯ ಅವಕಾಶ ಕೊಡಬೇಕೆಂದು ಪ್ರತಿಪಾದನೆ ಮಾಡುತ್ತಿದ್ದರು. ಆದರೆ, ಅದನ್ನು ಪ್ರಾಯೋಗಿಕವಾಗಿ ಕಾರ್ಯಗತಗೊಳಿಸಿದ ಕೀರ್ತಿ ದಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ(ಶಶಿ) ಹೇಳಿದರು.
ಈಗ ರಾಜಕಾರಣದಲ್ಲಿ ಮಹಾ ನಾಯಕರಾಗಿ ಬೆಳೆದಿರುವ ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯ್ಲಿ , ದಿ.ಎಸ್.ಎಂ.ಕೃಷ್ಣ. ದಿ.ಧರ್ಮಸಿಂಗ್ ಅವರಂತಹ ಅನೇಕ ನಾಯಕರನ್ನು ಅರಸು ಸೃಷ್ಟಿ ಮಾಡಿದರು. ರಾಮನಗರದಲ್ಲಿ ಶಿಕ್ಷಕರಾಗಿದ್ದ ಡಿ.ಟಿ.ರಾಮು, ಅಲ್ಪಸಂಖ್ಯಾತರಾಗಿದ್ದ ಸಮದ್ ಅವರನ್ನು ಶಾಸಕರನ್ನಾಗಿ ಮಾಡಿದ ಕೀರ್ತಿ ಅರಸುಗೆ ಸಲ್ಲುತ್ತದೆ ಎಂದು ತಿಳಿಸಿದರು.
ಬಂಡವಾಳ ಶಾಹಿಗಳ ಶಾಸನ ಸಭೆ ಆಗಿದೆ:ಅರಸು ಉದ್ಯಮಿಗಳನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಅವಕಾಶ ನೀಡಲಿಲ್ಲ. ಎಂದೂ ಉದ್ಯಮಿಗಳನ್ನು ರಾಜಕೀಯಕ್ಕೆ ತರಬಾರದು. ಶೋಷಿತರು, ಜನಸಾಮಾನ್ಯರು, ಬಡವರ ಕಷ್ಟ ಅರಿತವರಿಗೆ ಮಾತ್ರ ರಾಜಕೀಯ ಅಧಿಕಾರದ ಅವಕಾಶ ಸಿಗಬೇಕೆಂದು ಹೇಳುತ್ತಿದ್ದರು. ಆಗ ನೂರಾರು ಕೋಟಿ ಆಸ್ತಿ ಉಳ್ಳವರಿಗೆ ಪಕ್ಷದಲ್ಲಿ ಟಿಕೆಟ್ ಪಡೆಯುವುದು ಕಷ್ಟವಾಗುತ್ತಿತ್ತು ಎಂದು ಹೇಳಿದರು.
ಸಣ್ಣ ಸಮುದಾಯಗಳ ನಾಯಕರಿಗೆ ರಾಜಕೀಯ ಅಧಿಕಾರ ನೀಡಿದ ಕಾರಣದಿಂದಲೇ ಅರಸು ಅವಧಿಯಲ್ಲಿಶಾಸನ ಸಭೆ ನೊಂದವರ ಪರವಾಗಿತ್ತು. ಆದರಿಂದು ಶಾಸನ ಸಭೆ ಉದ್ಯಮಿಗಳು ಹಾಗೂ ದರೋಡೆಕೋರರಿಂದ ತುಂಬಿದೆ. ಚುನಾವಣೆ ಒಂದೆರೆಡು ವರ್ಷ ಇರುವಂತೆ ಬಂದು 50 - 100 ಕೋಟಿ ಬಂಡವಾಳ ಹಾಕುತ್ತಾರೆ. ಆನಂತರ ಜನರಿಗೆ ಗಿಫ್ಟ್ ಕೊಟ್ಟು ಶಾಸಕರಾಗುತ್ತಿದ್ದಾರೆ. ಇದು ದೇಶಾದ್ಯಂತ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಂಡವಾಳ ಶಾಹಿಗಳು ಶಾಸಕರಾದ ಮೇಲೆ ಹಣದಲ್ಲಿಯೇ ಆಡಳಿತ ನಡೆಸುತ್ತೇನೆ ಎನ್ನುತ್ತಾರೆ. ಇಂತಹ ಪರಿಪಾಠ ಹೆಚ್ಚಾಗಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಇಂತಹ ಬೆಳವಣಿಗೆಗಳನ್ನು ತಡೆಗಟ್ಟುವ ಕೆಲಸವನ್ನು ಜನರು ಮಾಡಬೇಕಿದೆ. ಚುನಾವಣೆಗಳಲ್ಲಿ ಬಂಡವಾಳ ಶಾಹಿಗಳನ್ನು ತಿರಸ್ಕರಿಸಿ ಬಡವರು, ಶೋಷಿತರು ಹಾಗೂ ರೈತರ ಧ್ವನಿಯಾಗಿರುವ ನಾಯಕರನ್ನು ಬೆಂಬಲಿಸಬೇಕಿದೆ ಎಂದರು.ಅರಸು ಆಡಳಿತ ಮಾದರಿ:
ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಮತ್ತು ಸಣ್ಣ ಜಾತಿಗಳ ಅಭಿವೃದ್ಧಿಗೆ ಒತ್ತು ನೀಡಿದ ಧೀಮಂತ ನಾಯಕ. ಅವರು ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗಗಳಿಗಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ, ಭೂ ಸುಧಾರಣೆಗಳು ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಇಂತಹ ಕ್ರಾಂತಿಕಾರಿ ನಿರ್ಧಾರವನ್ನು ಇಡೀ ದೇಶದಲ್ಲಿ ದೇವರಾಜ ಅರಸು ಅವರನ್ನು ಹೊರತು ಪಡಿಸಿ ಬೇರೆ ಯಾರೂ ಮಾಡಲಿಲ್ಲ. ಹೀಗಾಗಿ ಅರಸುರವರ ಆಡಳಿತ ಎಲ್ಲರಿಗೂ ಮಾದರಿ ಎಂದು ಬಣ್ಣಿಸಿದರು.ಅರಸುರವರು "ಉಳುವವನೇ ಭೂಮಿ ಒಡೆಯ " ಎಂಬ ಘೋಷಣೆಯೊಂದಿಗೆ 1974ರಲ್ಲಿ ಭೂ ಸುಧಾರಣಾ ಕಾಯಿದೆಯನ್ನು ಜಾರಿಗೊಳಿಸಿದರು. ಈ ಕಾಯಿದೆಯು ಗೇಣಿದಾರರಿಗೆ ಭೂಮಿಯ ಮಾಲೀಕತ್ವವನ್ನು ನೀಡಿತು, ಇದರಿಂದ ಲಕ್ಷಾಂತರ ಕೃಷಿಕರು ಜಮೀನಿನ ಮಾಲೀಕರಾದರು. ಎಲ್ಲ ಜಾತಿಯಲ್ಲಿರುವ ಮಧ್ಯಮ ವರ್ಗ ಫಲಾನುಭವಿಗಳಾದರು. ಇದು ಭೂಮಾಲೀಕರ ಪ್ರಾಬಲ್ಯವನ್ನು ಕಡಿಮೆ ಮಾಡಿ, ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗೆ ದಾರಿ ಮಾಡಿಕೊಟ್ಟಿತು ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಎಲ್.ಜಿ. ಹಾವನೂರು ಆಯೋಗವನ್ನು ರಚಿಸಿ, ಅದರ ವರದಿ ಆಧಾರದ ಮೇಲೆ ಮೀಸಲಾತಿ ನೀತಿಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದರು. ಇದು ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿತು ಎಂದು ಹೇಳಿದರು.ರಾಜ್ಯದಲ್ಲಿ ಚಾಲ್ತಿಯಲ್ಲಿದ್ದ ಜೀತಪದ್ಧತಿಯನ್ನು ನಿರ್ಮೂಲನೆ ಮಾಡಿದರು. ಇದು ಅಂಚಿನಲ್ಲಿರುವ ಸಮುದಾಯಗಳಿಗೆ ಸ್ವಾತಂತ್ರ್ಯ ಮತ್ತು ಘನತೆಯನ್ನು ತಂದುಕೊಟ್ಟಿತು. ಅಲ್ಲದೆ, ಮಲಹೊರುವ ಅಮಾನವೀಯ ಪದ್ಧತಿಯನ್ನು ನಿಷೇಧಿಸುವಲ್ಲಿ ದೇವರಾಜ ಅರಸು ಪ್ರಮುಖ ಪಾತ್ರ ವಹಿಸಿದ್ದರು ಎಂದು ಶೇಷಾದ್ರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರಾದ ನರಸಿಂಹ, ಮಂಜುನಾಥ್, ನಿಜಾಮುದ್ದೀನ್ ಷರೀಫ್, ಆರೀಫ್ , ಪಾರ್ವತಮ್ಮ, ಸಮದ್, ಬೈರೇಗೌಡ, ಗಿರಿಜಮ್ಮ, ನಾಗಮ್ಮ, ವಿಜಯ ಕುಮಾರಿ, ಆಯುಕ್ತ ಜಯಣ್ಣ, ಮುಖಂಡರಾದ ಶಿವಕುಮಾರ ಸ್ವಾಮಿ, ಅಲೀಂ, ದೇವರಾಜು ಮತ್ತಿತರರು ಉಪಸ್ಥಿತರಿದ್ದರು.20ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಐಜೂರು ಬಡಾವಣೆಯಲ್ಲಿನ ಸರ್ಕಾರಿ ಉರ್ದು ಶಾಲೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಪುಷ್ಪ ನಮನ ಸಲ್ಲಿಸಿದರು.