ಕೆಆರ್‌ಎಸ್‌ ಜಲಾಶಯ ಕೇವಲ ಭರ್ತಿಗೆ 6 ಅಡಿ ಅಷ್ಟೇ ಬಾಕಿ..!

KannadaprabhaNewsNetwork |  
Published : Jun 21, 2025, 12:49 AM IST
(ಕೃಷ್ಣರಾಜಸಾಗರ ಜಲಾಶಯ) | Kannada Prabha

ಸಾರಾಂಶ

ಕಳೆದೊಂದು ವಾರದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಪರಿಣಾಮ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದ್ದು, ಅಣೆಕಟ್ಟು ಭರ್ತಿಯಾಗಲು ಕೇವಲ 6 ಅಡಿ ಮಾತ್ರ ಬಾಕಿ ಇದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದೊಂದು ವಾರದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಪರಿಣಾಮ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದ್ದು, ಅಣೆಕಟ್ಟು ಭರ್ತಿಯಾಗಲು ಕೇವಲ 6 ಅಡಿ ಮಾತ್ರ ಬಾಕಿ ಇದೆ.

ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಪ್ರಸ್ತುತ ಜಲಾಶಯದ ನೀರಿನ ಮಟ್ಟ 118.40 ಅಡಿ ಇದೆ. ಅಣೆಕಟ್ಟೆಯಲ್ಲಿ 23473 ಕ್ಯುಸೆಕ್‌ ಒಳಹರಿವು ದಾಖಲಾಗಿದ್ದು, 1281 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಹಾಲಿ ಜಲಾಶಯದಲ್ಲಿ ಈಗ 31.468 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಕಾವೇರಿ ಉಗಮ ಸ್ಥಾನ ಕೊಡಗು ಮತ್ತು ಹೇಮಾವತಿ ಜಲಾನಯನ ಪ್ರದೇಶದಲ್ಲಿ ಭಾರೀ ಪ್ರಮಾಣದ ಮಳೆಯಾದ್ದರಿಂದ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದುಬಂದಿತ್ತು.

ಈ ಬಾರಿ ಮುಂಗಾರು ಆರಂಭದಲ್ಲೇ ಚುರುಕನ್ನು ಪಡೆದುಕೊಂಡಿತ್ತು. ನಿಗದಿಗಿಂತ ಮೊದಲೇ ಆರಂಭಗೊಂಡ ಮುಂಗಾರು ಎಲ್ಲೆಡೆ ಭರ್ಜರಿ ವರ್ಷಧಾರೆಯಾಯಿತು. ಇದರ ಪರಿಣಾಮ ಮೇ ಅಂತ್ಯಕ್ಕೆ ಜಲಾಶಯದ ನೀರಿನ ಮಟ್ಟ ಮೇ 26ರಂದು 89.35ಅಡಿಗೆ ತಲುಪಿತ್ತು. ಕೊಡಗಿನಲ್ಲಿ ಒಂದೇ ದಿನ 100 ಮಿ.ಮೀ.ನಷ್ಟು ಮಳೆಯಾಗಿ ಜಲಾಶಯಕ್ಕೆ ಒಂದೇ ದಿನ 3 ಅಡಿ ನೀರು ಹರಿದುಬಂದಿತು. ನಂತರದಲ್ಲಿ ಸುರಿದ ನಿರಂತರ ಮಳೆಯಿಂದ ಮೇ 30ಕ್ಕೆ ಜಲಾಶಯದ ನೀರಿನ ಮಟ್ಟ 100 ಅಡಿ ದಾಟಿತ್ತು. ನಂತರದ ದಿನಗಳಲ್ಲಿ ಕಾವೇರಿ ಹಾಗೂ ಹೇಮಾವತಿ ಜಲಾನಯನ ಪ್ರದೇಶದಲ್ಲಿ ಸುರಿದ ಉತ್ತಮ ಮಳೆಯಿಂದ ಜಲಾಶಯದ ನೀರಿನ ಮಟ್ಟ ದಿನೇ ದಿನೇ ಏರಿಕೆಯಾಯಿತು. ಇದೀಗ 118 ಅಡಿ ಗಡಿಯನ್ನು ತಲುಪಿದ್ದು,ಯೀ ಬಾರಿ ಜೂನ್‌ ತಿಂಗಳಲ್ಲೇ ಜಲಾಶಯ ಭರ್ತಿಯಾಗುವ ಸಾಧ್ಯತೆಗಳಿವೆ.

ಕೆಆರ್‌ಎಸ್ ನಿಂದ ಕಾವೇರಿ ನದಿಗೆ ನೀರು ಬಿಡುಗಡೆ ಸಾಧ್ಯತೆ

ಶ್ರೀರಂಗಪಟ್ಟಣ: ಕಾವೇರಿ ಕೊಳ್ಳದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣರಾಜಸಾಗರ ಜಲಾಶಯವು 118 ಅಡಿ ತುಂಬಿದ್ದು, ಒಳ ಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆ ಕಂಡು ಬಂದರೆ ಯಾವುದೇ ಕ್ಷಣದಲ್ಲಾದರೂ ಅಣೆಕಟ್ಟೆಯಿಂದ ಕಾವೇರಿ ನದಿಗೆ ನೀರು ಬಿಡಲಾಗುವುದು ಎಂದು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ತಿಳಿಸಿದ್ದಾರೆ.

ಕೆಆರ್ ಎಸ್ ಜಲಾಶಯ ಭರ್ತಿಯಾಗಲು 6 ಅಡಿ ಬಾಕಿ ಇದೆ. ಇನ್ನು ಒಂದು ವಾರದಲ್ಲಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದರೇ ಪೂರ್ಣ ಪ್ರಮಾಣದಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಕಾವೇರಿ ನದಿ ತೀರ ಪ್ರದೇಶಗಳಿಗೆ ಈಗಾಗಲೇ ಎಚ್ಚರಿಕೆ ನೋಟಿಸ್‌ ಜಾರಿ ಮಾಡಲಾಗಿದೆ. ಯಾವುದೇ ಕ್ಷಣದಲ್ಲಾದರೂ ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

PREV

Recommended Stories

ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ
12.69 ಲಕ್ಷ ಶಂಕಾಸ್ಪದ ಬಿಪಿಎಲ್‌ ಚೀಟಿ ರಾಜ್ಯದಲ್ಲಿ ಪತ್ತೆ: ಮುನಿಯಪ್ಪ