ರಿಯಾಜಅಹ್ಮದ ಎಂ. ದೊಡ್ಡಮನಿ
ಡಂಬಳ ಹೋಬಳಿಯ ಮೇವುಂಡಿ ಗ್ರಾಮದ ಹಗಲು ವೇಷಗಾರರು ತಲೆತಲಾಂತರದಿಂದ ಈ ವೃತ್ತಿ ನಡೆಸಿಕೊಂಡು ಬಂದಿದ್ದಾರೆ. ಹಗಲು ವೇಷದ ಮೂಲಕ ಊರು ಊರು ಅಲೆಯುವ ರಾಮಣ್ಣ ವೇಷಗಾರ ಮತ್ತು ಅವರ ಮಕ್ಕಳು ಬಣ್ಣ ಬಣ್ಣದ ವೇಷಭೂಷಣ, ಮುಖವರ್ಣಿಕೆ, ಕೃಷ್ಣ, ರಾಮ, ಸೀತೆ, ಹನುಮಂತ ಹೀಗೆ ವಿಭಿನ್ನ ಪಾತ್ರಗಳ ಮೂಲಕ ಜಾನಪದ ಹಾಡುಗಳನ್ನು ಹಾಡುವ ಮೂಲಕ ಜನಮನ ರಂಜಿಸುತ್ತಾರೆ. ಅಲ್ಲದೆ ಜಾಗೃತಿಯನ್ನೂ ಮೂಡಿಸುತ್ತಾರೆ.
ಹಗಲಿನಲ್ಲೇ ಊರು ಊರು ಸಂಚರಿಸಿ ದೇವರು, ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಪಾತ್ರಗಳನ್ನು ನಿರ್ವಹಿಸುವ ಮೂಲಕ ಜನರಿಗೆ ಮನರಂಜನೆಯ ಜತೆಗೆ ನೀತಿ ಪಾಠ ಹೇಳುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಎಲ್ಲರೂ ಕುತೂಹಲದಿಂದ ವೀಕ್ಷಿಸುವ ಹಗಲುವೇಷಗಾರರ ಕಲಾ ಪ್ರದರ್ಶನ ಜನಪದ ಪರಂಪರೆಯ ಉಳಿವಿಗೆ ಸಹಕಾರಿಯಾಗಿದೆ.ಸೂರು, ಮಾಸಾಶನ ಇಲ್ಲ: ಹಗಲುವೇಷಗಾರರು ಊರೂರು ಅಲೆದು ಕಲೆಯನ್ನು ಪ್ರಸ್ತುತಪಡಿಸುತ್ತಾರೆ. ಆದರೆ ಇವರಿಗೆ ವಾಸಿಸಲು ಸಮರ್ಪಕವಾದ ಸೂರು ಇಲ್ಲ. ಅಲ್ಲದೇ ಜಾನಪದ ಕಲಾವಿದರಿಗೆ ನೀಡುವ ಮಾಸಾಶನವನ್ನೂ ನೀಡಿಲ್ಲ. ಇದಕ್ಕಾಗಿ ಕಚೇರಿಗಳಿಗೆ ಅಲೆದು ಅರ್ಜಿ ಸಲ್ಲಿಸಿದರೂ ಮಾಸಾಶನ ನೀಡಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಮತ್ತಷ್ಟು ತೊಂದರೆಯಾಗುತ್ತಿದೆ ಎಂಬುದು ಕಲಾವಿದರ ಅಳಲಾಗಿದೆ.
ಕಡುಬಡವರು: ತಲೆತಲಾಂತರದಿಂದ ಹಗಲುವೇಷಗಾರರಾಗಿ ಕಲೆ, ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುತ್ತ ಬಂದಿದ್ದೇವೆ. ನಾವು ಕಡುಬಡವರಾಗಿದ್ದು, ಸರ್ಕಾರ ನಮಗೆ ಸೂರು, ಮಾಸಾಶನ ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿಕೊಡಲು ಮುಂದಾಗಬೇಕು ಎಂದು ಮೇವುಂಡಿ ಗ್ರಾಮದ ರಾಮಣ್ಣ ವೇಷಗಾರ ತಿಳಿಸಿದರು.