ಪುತ್ತೂರು: ಅಂತರಂಗದ ಕೊಳಕನ್ನು ಹೊರ ತೆಗೆದಾಗ ಅತ್ಯುತ್ತಮ ವಿಚಾರಧಾರೆಗಳು ನಮ್ಮೊಳಗೆ ತುಂಬಿಕೊಳ್ಳಲು ಸಾಧ್ಯ. ಸಂಸ್ಕಾರದ ಬೆಳಕನ್ನು ಒಡಮೂಡಿಸಿಕೊಂಡಾಗ ಮಾತ್ರ ನಮ್ಮೆದುರಿನ ದಾರಿ ಸ್ಪಷ್ಟವಾಗುತ್ತಾ ಸಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾಸಂಸ್ಥೆಯಲ್ಲಿ ಪಠ್ಯದೊಂದಿಗೆ ಸಿಗುವ ಇತರ ವಿಚಾರಗಳನ್ನು ಕಡೆಗಣಿಸದೆ ಆದ್ಯತೆ ಮೇರೆಗೆ ಸ್ವೀಕರಿಸಬೇಕು ಎಂದು ಪ್ರೇರಣಾದಾಯಿ ಮಾತುಗಾರ ಡಾ. ರಾಹುಲ್ ದೇವರಾಜ್ ಹೇಳಿದರು.ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶನಿವಾರ ಮಾತನಾಡಿದರು.
ನಮ್ಮ ದೇಶಕ್ಕೆ ಭವ್ಯವಾದ ಇತಿಹಾಸವಿದೆ. ಆಧುನಿಕ ಜ್ಞಾನ ವಿಜ್ಞಾನಗಳು ಕಂಡು ಹಿಡಿದಿರುವ ನೂರಾರು ಸಂಗತಿಗಳನ್ನು ನಮ್ಮ ಪೂರ್ವಜರು ತಮ್ಮ ಜ್ಞಾನದೃಷ್ಟಿಯಿಂದ ಕಂಡುಕೊಂಡಿದ್ದರು. ಅಂತಹ ಸಮರ್ಥ ಪೂರ್ವಜರ ಉತ್ತರಾಧಿಕಾರಿಗಳಾಗಿ ನಾವಿದ್ದೇವೆ ಎಂಬ ಹೆಮ್ಮೆ ನಮ್ಮೊಳಗೆ ಅಡಕವಾಗಿರಬೇಕು. ನಮ್ಮ ಇತಿಹಾಸವನ್ನು ತಿಳಿದುಕೊಳ್ಳದೆ ನಾವು ಉತ್ಕೃಷ್ಟತೆಯನ್ನು ಸಾಧಿಸಲಾರೆವು ಎಂದರು.
ವಿದ್ಯಾರ್ಥಿಗಳು ಹತ್ತು ಗ್ರಾಂನ ಪೆನ್ನಿನ ಮೂಲಕ ಹೆತ್ತವರ ತಲೆಯ ಮೇಲಿರುವ ಟನ್‌ಗಟ್ಟಲೆ ಭಾರವನ್ನು ಇಳಿಸಬಹುದು. ಆದರೆ ಅದಕ್ಕೆ ಇಚ್ಚಾಶಕ್ತಿ ಬೇಕು. ಛಲ ನಮ್ಮೊಳಗಿರಬೇಕು. ಸಮಾಜಮುಖಿ ಜೀವನ ನಡೆಸುವುದಕ್ಕೆ ನಮ್ಮ ಶಿಕ್ಷಣ, ನಮ್ಮ ಸಂಸ್ಕಾರ ಅನುವು ಮಾಡಿಕೊಡಬೇಕು. ದೇಶದ ಬಗೆಗೆ ಅಭಿಮಾನವನ್ನು ಹೊಂದಿ ನಾವು ಕಾರ್ಯತತ್ಪರರಾಗಬೇಕು ಎಂದು ನುಡಿದರು.ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ, ಬಲಿ ಕೊಡುವ ಸಂದರ್ಭದಲ್ಲಿ ಕುರಿ-ಕೋಣಗಳನ್ನೇ ಆಯ್ಕೆ ಮಾಡಲಾಗುತ್ತದೆ. ಯಾವ ನಂಬಿಕೆಯೂ ಹುಲಿ-ಸಿಂಹದ ಬಲಿಯನ್ನು ಬಯಸುವುದಿಲ್ಲ. ಹಾಗಾಗಿ ಧೈರ್ಯಶಾಲಿಗಳಾಗಿ ಬದುಕಬೇಕು ಮತ್ತು ರಾಷ್ಟ್ರಪ್ರೇಮಿಗಳಾಗಿರಬೇಕು ಎಂದು ಹೇಳಿದರು.