ವರಕವಿ ಬೇಂದ್ರೆ, ಎಚ್. ನರಸಿಂಹಯ್ಯ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಡಾ. ಕೋಡಿರಂಗಪ್ಪ
ಜ್ಞಾನಪೀಠ ಪುರಸ್ಕೃತ ಕವಿ ದ ರಾ ಬೇಂದ್ರೆ ಹಾಗೂ ಶಿಕ್ಷಣ ತಜ್ಞ ಎಚ್. ನರಸಿಂಹಯ್ಯ ಅವರು ಕಡುಬಡತನದಲ್ಲಿ ಹುಟ್ಟಿ ಬೆಳೆದು ನಿರಂತರ ಪರಿಶ್ರಮದಿಂದ ಉನ್ನತ ಜೀವನ ಹಾಗೂ ಜ್ಞಾನಕ್ಕೆ ದಾರಿದೀಪಗಳಾಗಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಕೋಡಿರಂಗಪ್ಪ ಅಭಿಪ್ರಾಯಪಟ್ಟರು.
ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ವಾಪಸಂದ್ರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ವರಕವಿ ಬೇಂದ್ರೆ ಮತ್ತು ಶಿಕ್ಷಣ ತಜ್ಞ ಎಚ್ ಎನ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಮಹನೀಯರ ಜೀವನ ಸಾಧನೆ ಮತ್ತು ಆದರ್ಶಗಳನ್ನು ತಿಳಿಯುವುದಲ್ಲದೆ ನಾವು ಅಳವಡಿಸಿ ಕೊಳ್ಳಬೇಕೆಂದು ವಿನಂತಿಸಿದರು.ಶಿಕ್ಷಣ ಮತ್ತು ಸಾಹಿತ್ಯ ಹಾಗೂ ವೈಚಾರಿಕ ಮನೋಭಾವವನ್ನು ತಮ್ಮ ಜೀವನ ಧರ್ಮವನ್ನಾಗಿ ಪಾಲಿಸಿದ ದ ರಾ ಬೇಂದ್ರೆ ಹಾಗೂ ಎಚ್ ನಸಿಂಹಯ್ಯನವರ ಆಲೋಚನೆಗಳು ಸರ್ವಕಾಲಿಕ. ಇವರು ಪಡೆದ ಶಿಕ್ಷಣ, ವೈಚಾರಿಕತೆ ಮತ್ತು ಸರಳ ಜೀವನದಿಂದ ದೊಡ್ಡ ಮಟ್ಟಕ್ಕೆ ಬೆಳೆದು ನಮ್ಮ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಹೆಸರು ತಂದಿದ್ದಾರೆ. ಎಚ್.ಎನ್. ಅವರು ಬೆಂಗಳೂರು ವಿಶ್ವವಿದ್ಯಾಲಯವನ್ನು ಬಹುದೊಡ್ಡ ಜ್ಞಾನಭಾರತಿಯನ್ನಾಗಿ ಆಧುನಿಕರಿಸಿ ನೂರಾರು ಕೋರ್ಸುಗಳನ್ನು ತಂದು ವಿಶ್ವವಿದ್ಯಾಲಯವನ್ನು ಜ್ಞಾನ, ವೈಚಾರಿಕತೆ ಹಾಗೂ ಸಂಶೋಧನೆಯ ಕೇಂದ್ರವಾಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಬೇಂದ್ರೆಯವರು ತಮ್ಮ ಸೃಜನಶೀಲ ಸಾಹಿತ್ಯ ಸೃಷ್ಟಿ ಮತ್ತು ಸರಳ ಸಜ್ಜನಿಕೆಯ ಜೀವನದಿಂದ ಕನ್ನಡ ಸಾಹಿತ್ಯ ಪರಂಪರೆಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.
ನಿವೃತ್ತ ಅಧ್ಯಾಪಕ ಸರ್ದಾರ್ ಚಾಂದ್ ಪಾಷಾ ಮಾತನಾಡಿ, ಎಚ್.ಎನ್. ಬಾಲ್ಯದಲ್ಲಿಯೇ ಗಾಂಧಿ ಆದರ್ಶಗಳಿಂದ ಪ್ರಭಾವಿತರಾಗಿ ಜೀವನವಿಡಿ ಅವರ ತತ್ವ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡು ಅವಿಭಜಿತ ಕೋಲಾರ ಜಿಲ್ಲೆಯ ಗಾಂಧಿಯಾಗಿ ರೂಪಗೊಂಡಿದ್ದರು. ಬೆಂಗಳೂರಿನ ನ್ಯಾಷನಲ್ ಪ್ರೌಢಶಾಲೆಯಲ್ಲಿ ಓದುವಾಗ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟಗಳಿಂದ ಪ್ರೇರಣೆಗೊಂಡು ನಂತರ ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮುಂದುವರಿದು ಅಮೆರಿಕಾದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಗುಣ ಪಡೆದು ಪಡೆದು ತಾನು ಓದಿದ ನ್ಯಾಷನಲ್ ಕಾಲೇಜನ್ನು ಪ್ರತಿಷ್ಠಿತ ಸಂಸ್ಥೆಯನ್ನಾಗಿ ಬೆಳೆಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಹಾಗೂ ಡೀನ್ ಡಾ. ಬಾಹುಬಲಿ, ಪ್ರಾಧ್ಯಾಪಕ ಡಾ.ಎಂ.ಶಂಕರ್, ವಾಪಸಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸೂರ್ಯಪ್ರಕಾಶ್ ಜಿಲ್ಲಾ ಸಾಪ ಕೋಶಾಧ್ಯಕ್ಷ ಚೆನ್ನಮಲ್ಲಿಕಾರ್ಜುನಯ್ಯ, ತಾಲೂಕು ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ, ಅಣ್ಣಮ್ಮ, ಪಟೇಲ್ ನಾರಾಯಣಸ್ವಾಮಿ, ವಿಜ್ಞಾನ ಅಧ್ಯಾಪಕ ಡಿ ವೆಂಕಟೇಶ್, ಸಂಗೀತ ಶಿಕ್ಷಕ ಮಹಾಲಿಂಗಯ್ಯ ರಾಜಣ್ಣ, ಅಜ್ಜಪ್ಪ, ವಿದ್ಯಾರ್ಥಿಗಳು ಇದ್ದರು.