ಕನ್ನಡಪ್ರಭ ವಾರ್ತೆ ಕುಣಿಗಲ್ ನಾನು ಸೋತರು ಗೆದ್ದರೂ ಕೂಡ ಕುಣಿಗಲ್ ನ ಜವಾಬ್ದಾರಿ ನನ್ನ ಮೇಲಿದೆ ನಾನು ಹೇಳಿದ ಎಲ್ಲಾ ಕಾಮಗಾರಿಗಳನ್ನು ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಕೂಡ ನಡೆಯಲಿವೆ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ತಿಳಿಸಿದ್ದಾರೆ ಕುಣಿಗಲ್ ಪಟ್ಟಣದ ಖಾಸಗಿ ಬಸ್ ನಿಲ್ದಾಣಕ್ಕೆ ಗುದ್ದಲಿ ಪೂಜೆ ನಡೆಸಿ ಮಾತನಾಡಿದ ಅವರು, ಕುಣಿಗಲ್ ಜನತೆ ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಚಿರ ಋಣಿ ಆಗಿದ್ದೇನೆ. ಕುಣಿಗಲ್ ತಾಲೂಕಿಗೆ ನಾನು ನೀಡಿದ ಎಲ್ಲಾ ಭರವಸೆಗಳನ್ನು ಕೂಡ ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ಕೂಡ ಪೂರೈಸುವ ಕೆಲಸವನ್ನು ಮಾಡುತ್ತಿದ್ದೇನೆ ಎಂದರು .
ಕುಣಿಗಲ್ ನೀರಾವರಿಗೆ ವೈ ಕೆ ರಾಮಯ್ಯ ಅವರ ಕನಸಿನ ಯೋಜನೆ ಅನುಷ್ಠಾನ ಅನಿವಾರ್ಯ. ಆದರೆ ಅದನ್ನು ಒಪ್ಪದ ಕೆಲವರು ಮಾಗಡಿ ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುತ್ತಾರೆ ಎಂಬ ಸುದ್ದಿಯನ್ನು ಹಬ್ಬಿಸಿ ತೊಂದರೆ ಮಾಡಿದರು. ಇವರ ಕಳಪೆ ರಾಜಕೀಯವನ್ನು ಎಷ್ಟು ದಿನ ಕುಣಿಗಲ್ ಜನತೆ ನೋಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತಾರೆ ಎಂದರು. 30 ವರ್ಷಗಳ ಕಾಲ ಅಭಿವೃದ್ಧಿ ಶೂನ್ಯವಾಗಿದ್ದ ಕುಣಿಗಲ್ ಅನ್ನು ನಾವು ಅಭಿವೃದ್ಧಿ ಅತ್ತ ತೆಗೆದುಕೊಂಡು ಹೋಗುತ್ತಿದ್ದೇವೆ. ಅದಕ್ಕಾಗಿ ಲಿಂಕ್ ಕೆನಾಲ್ ಕಾಮಗಾರಿಯನ್ನು ಪ್ರಾರಂಭಿಸಿದ್ದು ಪೂರೈಸುವುದು ನಮ್ಮ ಜವಾಬ್ದಾರಿ ಎಂದರು.ಇದಕ್ಕೂ ಮುನ್ನ ಕುಣಿಗಲ್ ತಾಲೂಕಿನ ಬೇಗೂರು ಕೆರೆಗೆ ಬಾಗಿನ ಅರ್ಪಿಸಿದ ಸಂಸದ ಡಿ ಕೆ ಸುರೇಶ್ ಮುಂದಿನ ದಿನಗಳಲ್ಲಿ ತಾಲೂಕಿನ ಹಲವಾರು ಕೆರೆಗಳು ಇದೇ ರೀತಿ ತುಂಬುತ್ತವೆ. ನೀರಾವರಿ ಯೋಜನೆಗಳು ಕುಣಿಗಲ್ ತಾಲೂಕಿನಲ್ಲಿ ಹೆಚ್ಚು ಆಗುತ್ತವೆ ಎಂದು ಭರವಸೆ ನೀಡಿದರು. ಕುಣಿಗಲ್ ಶಾಸಕ ಡಾ. ರಂಗನಾಥ್ ಮಾತನಾಡಿ ಕುಣಿಗಲ್ ಅಭಿವೃದ್ಧಿಗೆ ನನಗೆ ಬೆನ್ನೆಲುಬಾಗಿ ನಿಂತಿರುವ ಸಂಸದ ಡಿ ಕೆ ಸುರೇಶ್ ಅವರಿಗೆ ನಾನು ಅಭಿನಂದಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ಮಂಜುಳಾ ಮಲ್ಯ ನಾಗರಾಜ್, ಉಪಾಧ್ಯಕ್ಷ ಮಲ್ಲಿಪಾಳ್ಯ ಶ್ರೀನಿವಾಸ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಸ್ಮಾ ಜಬಿ, ಪುರಸಭಾ ಮುಖ್ಯ ಅಧಿಕಾರಿ ಕೃಷ್ಣ, ಸೇರಿದಂತೆ ಹಲವರು ಪುರಸಭಾ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರು ಇದ್ದರು.