ಶಿವಮೊಗ್ಗ: ನೇಯ್ಗೆಯ ಮೂಲಕ ಮನುಕುಲಕ್ಕೆ ಕಾಯಕದ ದಾರಿ ತೋರಿದ ಮಹಾನ್ ಪುರುಷ ಶ್ರೀ ದೇವರ ದಾಸಿಮಯ್ಯನವರು. ನೇಯ್ಗೆಯಲ್ಲಿಯೇ ದೇವರನ್ನು ಕಾಣುತ್ತಿದ್ದರು ಎಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಬಣ್ಣಿಸಿದರು.
ದಾಸಿಮಯ್ಯನವರು 10 - 11ನೇ ಶತಮಾನದ ಮೊಟ್ಟ ಮೊದಲ ವಚನಕಾರರು. ಇವರನ್ನು ವಚನಗಳ ಸಂಸ್ಥಾಪಕರು ಅಥವಾ ವಚನಗಳ ತಂದೆ ಎಂದೆನ್ನಬಹುದು. ಇವರು ದೇವರ ಅಂಗದಿಂದ ಜನಿಸಿದವರೆಂಬ ನಂಬಿಕೆಯಿಂದ ದೇವಾಂಗ ಎಂದು ಕರೆಯಲಾಗುತ್ತದೆ. ದೇವಲ ಮಹರ್ಷಿ ಎಂದೂ ಕರೆಯಲಾಗುತ್ತದೆ ಎಂದರು.
ಯಾರೇ ಆಗಲೀ ದುಡಿಯದೆ ಬದುಕಬಾರದು ಎನ್ನುತ್ತಿದ್ದ ಅವರು ನೇಯ್ಗೆಯಲ್ಲಿಯೇ ದೇವರನ್ನು ಕಾಣುತ್ತಿದ್ದರು. ಬದುಕಿನ ಬಂಡಿ ಸಾಗಿಸುವ ಪ್ರಕ್ರಿಯೆಯಲ್ಲಿ ಸುಳ್ಳು ಹೇಳಬಾರದು, ವಂಚನೆ ಮಾಡಬಾರದು. ಆಸೆ, ಆಮಿಷಗಳಿಗೆ ಗುರಿಯಾಗಬಾರದು. ಮಾನವನ 9 ರಂಧ್ರಗಳನ್ನು ಹತೋಟಿಯಲ್ಲಿಟ್ಟುಕೊಂಡು ಜೀವನ ನಡೆಸಬೇಕು ಎನ್ನುತ್ತಿದ್ದರು ಎಂದು ತಿಳಿಸಿದರು.ಕಾಯಕವನ್ನೇ ನಂಬಿ ಬದುಕುತ್ತಿರುವ ಹಿಂದುಳಿದ ನೇಕಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಿದೆ. ಆಗ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹೀಗೆ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಟಿ.ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ನೇಕಾರ ಸಮಾಜದವರು ಸಂಘಟಿತರಾಗಬೇಕು. ನಮ್ಮದು ತುಳಿತಕ್ಕೆ ಒಳಗಾದ ಸಮಾಜವಾಗಿದ್ದು ನಮ್ಮ ಸಮುದಾಯಕ್ಕೆ ಇದುವರೆಗೆ ಯಾವುದೇ ಮೀಸಲಾತಿ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಟ್ಟಸಾಲಿ ಸಂಘದ ಅಧ್ಯಕ್ಷ ಕಾಂತೇಶ ಕದರಮಂಡಲಗಿ, ಶಿವಮೊಗ್ಗ ತಹಸೀಲ್ದಾರ್ ರಾಜೀವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್, ಮಲೆನಾಡು ದೇವಾಂಗ ಸಂಘದ ಅಧ್ಯಕ್ಷ ಪಿ.ಆರ್.ಗಿರಿಯಪ್ಪ, ಜಿಲ್ಲಾ ಪದ್ಮಸಾಲಿ ಸಂಘದ ಅಧ್ಯಕ್ಷ ಜೆ.ರಾಮಕೃಷ್ಣಪ್ಪ, ಬನಶಂಕರಿ ಮಹಿಳಾ ಸಂಘದ ಅಧ್ಯಕ್ಷೆ ಜಯಮ್ಮ, ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಶಿವಾನಂದ ಶೆಟ್ಟಿ, ಸಮಾಜದ ಮುಖಂಡರಾದ ಸತೀಶ್ ಕುಮಾರ್, ವಿನಾಯಕ್, ನೇಕಾರ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು, ಇತರೆ ಮುಖಂಡರು ಪಾಲ್ಗೊಂಡಿದ್ದರು.