ಗಜೇಂದ್ರಗಡ: ಸರ್ಕಾರದ ಸೌಲಭ್ಯಗಳು ನೇರ ಮತ್ತು ತ್ವರಿತವಾಗಿ ಜನರಿಗೆ ತಲುಪಲಿ ಎಂಬ ಆಶಯದಿಂದ ಆಡಳಿತವನ್ನು ವಿಕೇಂದ್ರಿಕರಣ ಮಾಡುತ್ತಾ ಬರುತ್ತಿದೆ. ಆದರೆ ಆಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸರಗೊಂಡ ವ್ಯಕ್ತಿಯೊಬ್ಬರು ಗ್ರಾಪಂಗೆ ಬೀಗ ಹಾಕಿ ಪ್ರತಿಭಟಿಸಿ ಉತಾರ ಪಡೆದ ಘಟನೆ ಬುಧವಾರ ಸಂಜೆ ನಡೆದಿದೆ.
ಸಮೀಪದ ರಾಮಪೂರ ಗ್ರಾಪಂ ವ್ಯಾಪ್ತಿಯ ಚಿಲ್‌ಝರಿ ಗ್ರಾಮದಲ್ಲಿ ಕಳೆದ ವರ್ಷ ಸೈಟ್ ಖರೀದಿ ಮಾಡಿದ್ದಕ್ಕೆ ದಾಖಲೆಗಳನ್ನು ಪಂಚಾಯ್ತಿಗೆ ನೀಡಿ ಕಂಪ್ಯೂಟರ್ ಉತಾರಕ್ಕೆ ಅರ್ಜಿ ನೀಡಿದ್ದ ಸಂಗಮೇಶ ನಲತವಾಡ ಅವರಿಗೆ ಸಕಾಲದಲ್ಲಿ ಉತಾರ ನೀಡುವಲ್ಲಿ ಆಡಳಿತ ಹಾಗೂ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಪಂ ಕಚೇರಿಗೆ ಬೀಗ ಜಡಿದು ಕೆಲಕಾಲ ಪ್ರತಿಭಟಿಸಿದ್ದಾರೆ. ಘಟನೆ ತಿಳಿದು ಸ್ಥಳಕ್ಕಾಗಮಿಸಿ ಪಿಡಿಒ ಬಿ.ಎನ್. ಇಟಗಿಮಠ ಪ್ರತಿಭಟನಕಾರರನ ಮನವೊಲಿಸಿ ಉತಾರ ನೀಡಿದ್ದಾರೆ.ಘಟನೆ ವಿವರ:
ರಾಮಾಪೂರ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ವರ್ಷ ನಿವೇಶನ ಖರೀದಿ ಮಾಡಿದ್ದ ಸಂಗಮೇಶ ನಲತವಾಡ ಗ್ರಾಪಂಗೆ ತೆರಳಿ ಸಂಬಂಧಿಸಿದ ದಾಖಲೆ ನೀಡಿ ಕಂಪ್ಯೂಟರ್ ಉತಾರಕ್ಕೆ ಅರ್ಜಿ ನೀಡಿದಾಗ ಒಂದು ವಾರ ಬಿಟ್ಟು ಬನ್ನಿ ಎಂದಿದ್ದಾರೆ. ವಾರ ಬಿಟ್ಟು ತೆರಳಿದರೆ ಖಾತಾ ಬದಲಾವಣೆಗೆ ಅರ್ಜಿ ನೀಡಿ ಎನ್ನುವದರ ಜತೆಗೆ ಸರ್ಕಾರಕ್ಕೆ ತುಂಬಬೇಕಾದ ತೆರಿಗೆ ಹಣ ೨೮ ಅಗಸ್ಟ್ ತಿಂಗಳಲ್ಲಿ ತುಂಬಿಸಿಕೊಂಡು ೪೫ ದಿನ ಬಿಟ್ಟು ಬರಲು ತಿಳಿಸಿದ್ದಾರೆ. ಅದಾದ ಬಳಿಕ ಗ್ರಾಪಂ ಕಾರ್ಯಾಲಯಕ್ಕೆ ತೆರಳಿದ ಸಂಗಮೇಶ ಅವರಿಗೆ ಕೈ ಬರಹ ಉತಾರ ನೀಡಿದ್ದನ್ನು ಪ್ರಶ್ನಿಸಿದ ಅರ್ಜಿದಾರ ನನಗೆ ಈ ಆಸ್ತಿ ಉತಾರ ನೀಡಿ ಎಂದ್ದಿದ್ದಾರೆ. ಹೀಗಾಗಿ ಕೆಲ ದಿನಗಳನ್ನು ಬಿಟ್ಟು ಬರಲು ಸೂಚಿಸಿದ ಅಧಿಕಾರಿಗಳು ತೆರಳಿದಾಗೊಮ್ಮೆ ಒಂದೊಂದು ದಿನ ನೀಡುತ್ತಾ ಬಂದಿದ್ದಾರೆ. ಬಳಿಕ ಡಿ. ೨೭ಕ್ಕೆ ಕೊಡುವದಾಗಿ ಅಂತಿಮವಾಗಿ ಹೇಳಿದ್ದರು. ಬಳಿಕ ಪಿಡಿಒ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಹೊಸದಾಗಿ ಬಂದ ಪಿಡಿಒ ಸಹ ಕಾಲಾವಕಾಶ ನೀಡಿ ಎಂದಿದ್ದರಿಂದ ಮತ್ತೆ ಒಂದು ವಾರ ಬಿಟ್ಟು ತೆರಳಿದ್ದಾರೆ. ಅಲ್ಲದೆ ಗ್ರಾಪಂನಲ್ಲಿ ನಡೆದ ಸಾಮಾನ್ಯ ಸಭೆಗೂ ತೆರಳಿ ಉತಾರ ನೀಡಲು ಮನವಿ ಮಾಡಿದ್ದರೂ ಸಹ ಸಕಾಲದಲ್ಲಿ ಉತಾರ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಅರ್ಜಿದಾರ ಸಂಗಮೇಶ ಬುಧವಾರ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆಗೆ ಕುಳಿತಿದ್ದಾರೆ.