ಭಕ್ತರಿಂದ ಮಠವೇ ಹೊರತು ರಾಜಕಾರಣಿಗಳಿಂದಲ್ಲ

KannadaprabhaNewsNetwork | Published : Sep 16, 2024 1:56 AM

ಸಾರಾಂಶ

ಭಕ್ತರಿಂದ ಮಠವೇ ಹೊರತು ರಾಜಕಾರಣಿಗಳಿಂದಲ್ಲ, ಮಠದ ಘನತೆ, ಗೌರವ, ಸಂಪ್ರದಾಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದೇವೆ, ನಿಮಗೆ ಅನುಮಾನವಿದ್ದರೆ ಬನ್ನಿ ವೇದಿಕೆಗಳಲ್ಲಿ ಬಹಿರಂಗ ಚರ್ಚೆ ಮಾಡೋಣ, ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ, ರೆಸಾರ್ಟ್‍ಗಳಲ್ಲಿ ಮಠ ಮತ್ತು ಗುರುಗಳ ಬಗ್ಗೆ ಕುರಿತು ಚರ್ಚೆ ಮಾಡೋದಲ್ಲ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಮ್ಮ ಟೀಕಾಕಾರರಿಗೆ ಮುಕ್ತ ಪಂಥಾಹ್ವಾನ ನೀಡಿದರು.

ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 32ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಸಿರಿಗೆರೆ ಶ್ರೀ ಅಭಿಮತ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಭಕ್ತರಿಂದ ಮಠವೇ ಹೊರತು ರಾಜಕಾರಣಿಗಳಿಂದಲ್ಲ, ಮಠದ ಘನತೆ, ಗೌರವ, ಸಂಪ್ರದಾಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದೇವೆ, ನಿಮಗೆ ಅನುಮಾನವಿದ್ದರೆ ಬನ್ನಿ ವೇದಿಕೆಗಳಲ್ಲಿ ಬಹಿರಂಗ ಚರ್ಚೆ ಮಾಡೋಣ, ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ, ರೆಸಾರ್ಟ್‍ಗಳಲ್ಲಿ ಮಠ ಮತ್ತು ಗುರುಗಳ ಬಗ್ಗೆ ಕುರಿತು ಚರ್ಚೆ ಮಾಡೋದಲ್ಲ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಮ್ಮ ಟೀಕಾಕಾರರಿಗೆ ಮುಕ್ತ ಪಂಥಾಹ್ವಾನ ನೀಡಿದರು.

ಭಾನುವಾರ ತಾಲೂಕಿನ ಎಂ.ಹನುಮನಹಳ್ಳಿ ಗ್ರಾಮದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಸಾಧು ವೀರಶೈವ ಸಮಾಜದ ವತಿಯಿಂದ ಹಮ್ಮಿಕೊಂಡ ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 32ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಭಕ್ತಿ ಸಮರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಠದ ಎಲ್ಲಾ ಆಸ್ತಿ ಪಾಸ್ತಿಗಳು ಮಠಕ್ಕೆ ಸೇರಿದ್ದು, ಯಾವುದೇ ಖಾಸಗಿ ವ್ಯಕ್ತಿಗೆ ಅಲ್ಲ ಎಂದು ಬೈಲಾದಲ್ಲಿ ಬೆರೆದಿದ್ದೇವೆ. ಟ್ರಸ್ಟ್‌ನ ಬೈಲಾಗಳನ್ನು ಸರಿಯಾಗಿ ಓದಿ ತಿಳಿದುಕೊಳ್ಳದೇ ಮನಸ್ಸಿಗೆ ಬಂದಂತೆ ಮಾತನಾಡುವುದಲ್ಲ, ಪ್ರಜಾಪ್ರಭುತ್ವದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಇರುತ್ತವೆ. ನ್ಯೂನ್ಯತೆಗಳನ್ನು ಪ್ರಶ್ನೆ ಮಾಡುವ ಸ್ವಾತಂತ್ರ್ಯ ವಿರೋಧ ಪಕ್ಷಗಳಿಗಿದೆ. ಅದಕ್ಕೆ ಉತ್ತರ ಕೊಡುವ ಕೆಲಸವನ್ನು ಆಡಳಿತ ಪಕ್ಷ ಮಾಡುತ್ತದೆ. ಆ ತಾಕತ್ತು ತಮಗಿದೆ ಎಂದು ಸ್ವಾಮೀಜಿಯವರು ನೊಂದು ಭಾವುಕರಾಗಿ ನುಡಿದರು.

ಈಗ ಎದ್ದಿರುವ ವಿವಾದ ಭಕ್ತರು ಮತ್ತು ಮಠದ ನಡುವಿನ ಸಂಘರ್ಷವಲ್ಲ, ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ ಎಂದು ಹೇಳಿದ ಸ್ವಾಮೀಜಿ, ಗುರುಗಳು ಟ್ರಸ್ಟ್ ಹೆಸರಿನಲ್ಲಿ ಎಲ್ಲಾ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪಗಳನ್ನು ಸಾಬೀತು ಪಡಿಸಬೇಕು, ಇಲ್ಲದಿದ್ದರೆ ಆರೋಪಿಸುವವರು ಒಂಟಿ ಕಾಲಲ್ಲಿ ನಿಂತು ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಹೇಳಿದರು.

ತೆರಿಗೆ ವಿನಾಯಿತಿಗಾಗಿ ದೊಡ್ಡ ಗುರುಗಳು ಮಾಡಿದ ಹೋರಾಟದಿಂದ ಮಠಕ್ಕೆ ವಾರ್ಷಿಕ ಒಂದೂವರೆ ಕೋಟಿ ಆದಾಯ ಉಳಿಯುತ್ತಿದೆ. ಅದನ್ನೇ ತಾವು ಮುಂದುವರೆಸಿಕೊಂಡು ಹೋಗುವ ಸಂಬಂಧ ಹೊಸ ಕಾನೂನಿನಡಿ ಒಂದಿಷ್ಟು ಪತ್ರ ವ್ಯವಹಾರ ನಡೆದಿದೆ. ಇದರಿಂದ ನಮ್ಮ ಮಠಕ್ಕೆ ಕೇಂದ್ರ ಸರ್ಕಾರದಿಂದ ಆದಾಯ ತೆರಿಗೆ ವಿನಾಯಿತಿ ಮುಂದುವರಿಕೆ ಆದೇಶ ಸಿಕ್ಕಿದೆ. ಇದರಿಂದ ಅನುಕೂಲವಾಗಿದ್ದು ನನಗೋ ಅಥವಾ ಮಠಕ್ಕೋ ಎಂದು ಭಕ್ತರನ್ನು ಪ್ರಶ್ನಿಸಿದರು.

ಇದನ್ನು ಅರಿಯದ ಕೆಲವರು ಮಠದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ, ನಾವು ಏನನ್ನೂ ಮುಚ್ಚಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಗುರುಗಳು ಸಮಾಜದ ಉದ್ಧಾರಕ್ಕಾಗಿ ದುಡಿಯುತ್ತಿದ್ದಾರೆಯೇ ವಿನಹಃ ಅವರು ಏನನ್ನೂ ತಿಂದಿಲ್ಲ, ಇಂಥ ಗುರುಗಳನ್ನು ಟೀಕಿಸುತ್ತೀರಾ ಎಂದು ಪ್ರಶ್ನಿಸಿದರು. ಮುಂದಿನ ವರ್ಷದ ಅಕ್ಕಿ ಸಮರ್ಪಣೆಯನ್ನು ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಇಟ್ಟುಕೊಳ್ಳಲು ಅಲ್ಲಿನ ಗ್ರಾಮಸ್ಥರು ಮನವಿ ಮಾಡಿದ್ದರಿಂದ ಗುರುಗಳ ಅಪ್ಪಣೆ ಪಡೆದು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ವೇಳೆ ಸಾಧು ವೀರಶೈವ ಸಮಾಜದ ರಾಜ್ಯಾಧ್ಯಕ್ಷ ಬಸವರಾಜಪ್ಪ ಮಾತನಾಡಿದರು. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಶಾಸಕ ಬಿ.ಪಿ.ಹರೀಶ್, ಶಿಮುಲ್ ನಿರ್ದೇಶಕ ಬಿ.ಜಿ. ಬಸವರಾಜಪ್ಪ, ಹೊನ್ನಾಳಿ ತಾಲೂಕಿನ ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್. ಎ. ಗದ್ದಿಗೇಶ್ ಮಾತನಾಡಿದರು. ಉಪನ್ಯಾಸಕಿ ಸುಮತಿ ಜಯಪ್ಪ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ನ್ಯಾಮತಿ ತಾ. ಸಾಧು ವೀರಶೈವ ಸಮಾಜದ ಅಧ್ಯಕ್ಷರಾದ ಶಿವಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ವಿಶ್ವನಾಥ್, ಜಿ.ಪಂ. ಮಾಜಿ ಸದಸ್ಯ ಕೆ.ಎಚ್. ಗುರುಮೂರ್ತಿ, ಕೆಂಗಲಹಳ್ಳಿ ಷಣ್ಮುಖಪ್ಪ, ಶಿವ ಬ್ಯಾಂಕಿನ ಅಧ್ಯಕ್ಷ ಉಸ್ಥಿತರಿದ್ದರು.

-------ಕೋಟ್‌:ಮಠದ ಉತ್ತರಾಧಿಕಾರಿ ನೇಮಕ ನಾನು ಮಾಡಲು ಬರುವುದಿಲ್ಲ, ಮಠದ ಆಡಳಿತ ಮಂಡಳಿ ಮತ್ತು ಭಕ್ತರು ಸೇರಿ ಉತ್ತರಾಧಿಕಾರಿ ಆಯ್ಕೆ ಮಾಡಬೇಕು, ಅದಕ್ಕೆ ನನ್ನ ಅನುಮೋದನೆ ಪಡೆದುಕೊಳ್ಳಬೇಕು, ಇದರಲ್ಲಿ ನನ್ನ ಪಾತ್ರವಿಲ್ಲ, ಉತ್ತರಾಧಿಕಾರಿ ನೇಮಕ ವಿಚಾರ ನ್ಯಾಯಾಲಯದಲ್ಲಿದೆ.

-ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು

Share this article