ಲಕ್ಷ್ಮೇಶ್ವರ: ಶರಣರ ಬದುಕಿನ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಕಾಯಕವೇ ಕೈಲಾಸ, ಸತ್ಯಶುದ್ಧ ನಡತೆ, ಸಮಾನತೆ ಮತ್ತು ದಯೆಯ ತತ್ವಗಳ ಮೇಲೆ ಆಧರಿತವಾಗಿವೆ. ನಡೆ-ನುಡಿ ಒಂದಾಗಿರಬೇಕು ಎಂಬ ಮೂಲಮಂತ್ರದೊಂದಿಗೆ ಅವರು ಸರಳ ಸ್ವಾರ್ಥರಹಿತ ಜೀವನವನ್ನು ನಡೆಸಿದರು ಎಂದು ನಿವೃತ್ತ ಶಿಕ್ಷಕ ಎಸ್.ಎಫ್. ಆದಿ ತಿಳಿಸಿದರು.ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಬಸವರಾಜ ಚನ್ನಪ್ಪ ನೆಲವಿಗಿ ಹಾಗೂ ಸಾವಂತ್ರವ್ವ ಗುರುಬಸಪ್ಪ ಹೂವಿನ ಕೊಡಮಾಡಿರುವ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಣಿ-ಪಕ್ಷಿ, ಮನುಷ್ಯರು ಸೇರಿದಂತೆ ಸಕಲ ಜೀವರಾಶಿಗಳ ಮೇಲೆ ದಯೆ, ಕರುಣೆ ತೋರುವುದು. ಪರಮಾತ್ಮನ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಶರಣರ ಗುರಿಯಾಗಿತ್ತು. ಶರಣರು ಎಲ್ಲೂ ಸಂಸಾರಿಕ ಜವಾಬ್ದಾರಿ ಮತ್ತು ಕಾಯಕದಿಂದ ಅವರು ವಿಮುಕ್ತರಾಗಿರಲಿಲ್ಲ. ಕಾಯಕವೇ ಕೈಲಾಸ ಎಂದು ಜೀವನ ನಡೆಸಿದರು. ಶರಣರ ತತ್ವ ಮತ್ತು ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ದತ್ತಿ ದಾನಿ ಲೋಹಿತ ನೆಲವಿಗಿ ಮಾತನಾಡಿ, ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ದುಡಿದು ಬದುಕಬೇಕು. ಕಾಯಕದಲ್ಲಿ ಚಿಕ್ಕದು ದೊಡ್ಡದು ಎಂಬ ಭೇದವಿಲ್ಲದೆ ಪ್ರತಿ ಕೆಲಸವೂ ದೇವರ ಕೃಪೆ ಎಂಬುದು ಅವರ ನಂಬಿಕೆಯಾಗಿತ್ತು. ಅದರಂತೆ ಅವರು ಬದುಕು ಸಾಗಿಸಿದರು ಎಂದರು.
ಅಧ್ಯಕ್ಷತೆಯನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ ವಹಿಸಿದ್ದರು. ಶತಾಯುಷಿ ಸಾವಂತ್ರವ್ವ ಹೂವಿನ, ಡಾ. ಶಿವಾನಂದ ಹೂವಿನ, ದಿಗಂಬರ ಪೂಜಾರ, ಮಾಲಾದೇವಿ ದಂದರಗಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ, ಪೂರ್ಣಾಜಿ ಖರಾಟೆ, ಎಸ್.ಬಿ. ಕೊಣ್ಣೂರ, ನಿಂಗಪ್ಪ ಗೊರವರ, ಎಂ.ಕೆ. ಕಳ್ಳಿಮಠ, ಎನ್.ಆರ್. ಸಾತಪೂತೆ, ಸೋಮಶೇಖರ ಕೆರಿಮನಿ, ಮಹಾನಂದಾ ಕೊಣ್ಣೂರು, ಕವಿತಾ ಅರಳಹಳ್ಳಿ, ಬಸವರಾಜ, ಸಂಗಪ್ಪಶೆಟ್ಟರ, ಶಂಕರ ಶಿಳ್ಳಿನ್, ಬಸಣ್ಣ ಬೆಂಡಿಗೇರಿ ಇದ್ದರು.