- ಯಾವುದೇ ಚಿರತೆ ಇಲ್ಲ: ಹೊನ್ನಾಳಿ ವಲಯ ಅರಣ್ಯ ಅಧಿಕಾರಿ ಕಿಶೋರ್ ನಾಯ್ಕ ಹೇಳಿಕೆ
- ವಾಟ್ಸಪ್‌ಗೆ ಭೀತಿ ಹುಟ್ಟಿಸುವ ಇಂಥ ಪೋಟೋ-ವಿಡಿಯೋ ಹರಿಯಬಿಟ್ಟರೆ ಕ್ರಮದ ಎಚ್ಚರಿಕೆ - - - ಕನ್ನಡಪ್ರಭ ವಾರ್ತೆ ನ್ಯಾಮತಿ
ಪಟ್ಟಣ ಸಮೀಪದ ಆರುಂಡಿ ಗ್ರಾಮದ ಬಸ್ ನಿಲ್ದಾಣ ಬಳಿ ಚಿರತೆ ಓಡಾಡಿದಂತೆ ಕಾಣುವ ನಕಲಿ ಚಿತ್ರವನ್ನು ಕೆಲ ಯುವಕರು ಸೃಷ್ಟಿಸಿ ಜಾಲತಾಣಗಳಲ್ಲಿ ಹರಿಬಿಟ್ಟದ್ದಾರೆ. ಚಿರತೆ ಎಂಬ ವಿಚಾರದಿಂದ ಗ್ರಾಮಸ್ಥರು ಆತಂಕಗೊಂಡ ಘಟನೆ ಶುಕ್ರವಾರ ನಡೆದಿದೆ.ಕೆಲ ಕಿಡಿಗೇಡಿ ಯುವಕರು ಆರುಂಡಿ ಗ್ರಾಮದ ಬಸ್ ನಿಲ್ದಾಣ ಬಳಿ ಚಿರತೆ ಹೋಲುವಂಥ ಗೊಂಬೆಯನ್ನು ತಂದಿಟ್ಟು, ಮುಂಜಾನೆ ಸಮಯದಲ್ಲಿ ಪೋಟೋ ತೆಗೆದು ವಾಟ್ಸಪ್‌ನಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಚಾರವು ಬೆಳಗಾಗುತ್ತಿದ್ದಂತೆ ಗ್ರಾಮದಲ್ಲೆಲ್ಲ ಹರಡಿ ಗ್ರಾಮದ ಜನತೆಯಲ್ಲಿ ಆತಂಕ ಮನೆ ಮಾಡಿತ್ತು.
ಹೊನ್ನಾಳಿ ವಲಯ ಅರಣ್ಯ ಅಧಿಕಾರಿ ಕಿಶೋರ್ ನಾಯ್ಕ ಈ ಕುರಿತು ಪ್ರತಿಕ್ರಿಯಿಸಿದ್ದು, ಜನರಲ್ಲಿ ಭೀತಿ ಹುಟ್ಟಿಸುವ ಇಂಥ ಫೋಟೋ- ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೊದಲು ಪರಿಶೀಲನೆ ನಡೆಸಬೇಕು. ಜನರು ಸಹ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಆರುಂಡಿ ಗ್ರಾಮದಲ್ಲಿ ಯಾವುದೇ ಚಿರತೆಯಿಲ್ಲ, ಗ್ರಾಮಸ್ಥರು ಆತಂಕಪಡಬಾರದು. ಕಿಡಿಗೇಡಿಗಳು ಮಾಡುವ ಕೀಟಲೆಗೆ ಗ್ರಾಮಸ್ಥರು ಆತಂಕ ಪಡುವಂತಾಗಿದೆ. ಇನ್ನೊಮ್ಮೆ ಈ ರೀತಿ ನಕಲಿ ಫೋಟೋ- ವಿಡಿಯೋ ಗಳನ್ನು ಅಪ್‌ಲೋಡ್ ಮಾಡುವವರ ವಿರುದ್ಧ ದೂರು ದಾಖಲಿಸಿ, ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.