ಕನ್ನಡಪ್ರಭ ವಾರ್ತೆ ಸಿರಿಗೆರೆ
ಆ ಸಂದರ್ಭದಲ್ಲಿ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠವು ಗ್ರಾಮೀಣ ಕಲೆಗಳನ್ನು ಉಳಿಸಲು ವಿಶೇಷ ಪ್ರಯತ್ನ ನಡೆಸಿತು. ಅದರಲ್ಲಿ ವೀರಗಾಸೆಯೂ ಒಂದು ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಭಾರತಿ ವಿಭಾಗದ ಉಪನ್ಯಾಸಕ ನವೀನ್ ಮಂಡಗದ್ದೆ ತಿಳಿಸಿದರು.
ಸಿರಿಗೆರೆಯ ಗುರು ಶಾಂತೇಶ್ವರ ದಾಸೋಹ ಭವನದಲ್ಲಿ ಗುರು ಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಶ್ರದ್ಧಾಂಜಲಿ ಅಂಗವಾಗಿ ಏರ್ಪಡಿಸಿದ್ದ ಎರಡು ದಿನಗಳ ವೀರಗಾಸೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಮಾತನಾಡಿದರು.ವೀರಗಾಸೆ ನಮ್ಮ ಜನಪದ ಕಲಾಪ್ರಕಾರಗಳಲ್ಲಿ ಒಂದು ವಿಶಿಷ್ಟ ಕಲೆ. ಪೌರಾಣಿಕ ಹಿನ್ನೆಲೆಯಲ್ಲಿ ಈ ಕಲೆ ಬೆಳೆದು ನಿಂತಿದೆ ಎಂದರು.
ಕಲೆಗಳ ಕಡೆಗೆ ಮನಸ್ಸು ಕೊಡದದಿರುವ ಈ ಕಾಲಗಟ್ಟದ ಯುವಕರಲ್ಲಿ ಆಸಕ್ತಿ ಬೆಳೆಸಿ ಅವರನ್ನು ಕಲೆಗಳ ಕಡೆಗೆ ಕರೆತರಬೇಕು. ಕಲೆಯನ್ನು ನಮ್ಮೊಳಗೆ ಅನುಭವಿಸಲು ಆರಂಭಿಸಿದರೆ ತಮ್ಮಲ್ಲಿ ಸಾಂಸ್ಕೃತಿಕತೆ, ಚಾರಿತ್ರಿಕತೆ ಮತ್ತು ದೈವಿಕ ಭಾವಗಳು ಬೆಳೆಯುತ್ತವೆ ಎಂದರು.
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು ತರಳಬಾಳು ಪೀಠದ19ನೇ ಗುರುಗಳಾಗಿದ್ದರು. ಅತ್ಯಂತ ಶಾಂತಸ್ವಭಾವದ ಮೂರ್ತಿಯ ಪ್ರತಿರೂಪದಂತಿದ್ದರು. 1938 ರ ಆಸುಪಾಸಿನಲ್ಲಿ ಅವರು ಶಾಲಾ ಕಾಲೇಜು ತೆರೆಯಲಿಲ್ಲವಾದರೂ ಮಕ್ಕಳ ಅನುಕೂಲಕ್ಕಾಗಿ ಪೇಟೆಪಟ್ಟಣಗಳಲ್ಲಿ ಪ್ರಸಾದ ನಿಲಯ ಸ್ಥಾಪಿಸಿದ್ದರು ಎಂದರು.
ಕಲೆಯಲ್ಲಿ ತೊಡಗಿಸಿಕೊಳ್ಳಲು ಹೆಣ್ಣು ಗಂಡೆಂಬ ತಾರತಮ್ಮ ಇಲ್ಲ. ಎಲ್ಲರೂ ಕಲೆಯಲ್ಲಿ ಸಾಧನೆ ಮಾಡಬಹುದು. ವೀರಗಾಸೆ ಜಾನಪದ ಕಲೆಗಳಲ್ಲಿ ಅಪೂರ್ವವಾದುದು. ಇದನ್ನು ಗಂಡು ಕಲೆ ಎಂದೇ ಕರೆಯಲಾಗುತ್ತಿತ್ತು. ಕೆಲವು ವರ್ಷಗಳ ಹಿಂದಿನ ತನಕವೂ ಮಹಿಳೆಯರು ಈ ಕಲೆಯ ಪ್ರದರ್ಶನದಲ್ಲಿ ಭಾಗಿಯಾಗುತ್ತಿರಲಿಲ್ಲ. ಈಗೀಗ ಮಹಿಳೆಯರೂ ಕೂಡ ಈ ಕಲೆಯಲ್ಲಿ ತೊಡಗಿಸಿಕೊಂಡಿರುವುದು ಸಂತಸದ ವಿಷಯ ಎಂದರು.
ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ಧಯ್ಯ ಪ್ರಸ್ತಾವಿಕವಾಗಿ ಮಾತನಾಡಿದರು. ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ, ತೀರ್ಪುಗಾರರಾದ ಬಸವರಾಜಪ್ಪ ಅದ್ರಿಕಟ್ಟೆ, ನಿರಂಜನಮೂರ್ತಿ, ಪಾರ್ಥಸಾರಥಿ ವೇದಿಕೆಯಲ್ಲಿದ್ದರು.