ಒಳಮೀಸಲಾತಿಗೆ ಅಪಸ್ವರ ಕೂಗುತ್ತಿರುವರು ಸಂವಿಧಾನ ವಿರೋಧಿಗಳು

KannadaprabhaNewsNetwork |  
Published : Aug 12, 2025, 02:02 AM IST
ಪೋಟೊ 11ಎಚ್‌ಎಸ್‌ಡಿ7: ಚಿತ್ರದುರ್ಗದಲ್ಲಿ ಸೋಮವಾರ ನಡೆದ  ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿದರು. | Kannada Prabha

ಸಾರಾಂಶ

ಚಿತ್ರದುರ್ಗದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಒಳಮೀಸಲಾತಿ ಜಾರಿ ಸಂಬಂಧ ನ್ಯಾ.ನಾಗಮೋಹನ್ ದಾಸ್ ಆಯೋಗ ಸಲ್ಲಿಸಿರುವ ವರದಿ ಅತ್ಯಂತ ವೈಜ್ಞಾನಿಕವಾಗಿದ್ದು ಈ ಕುರಿತು ಅಪಸ್ವರ ಕೂಗು ಹಾಕುತ್ತಿರುವವರು ಸಂವಿಧಾನದ ವಿರೋಧಿಗಳು ಎಂದು ಮಾಜಿ ಸಚಿವ ಎಚ್.ಆಂಜನೇಯ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಕಾರಣಕ್ಕೂ ಉಪ ಸಮಿತಿ ರಚನೆ ಅಥವಾ ಮತ್ತೊಂದು ಸಚಿವ ಸಂಪುಟದ ಸಭೆಗೆ ಮುಂದೂಡದೆ ಆ.16ರಂದು ಮಾದಿಗರು ಮತ್ತಿತರ ನೊಂದ ಜನರಿಗೆ ಸ್ವತಂತ್ರ ನೀಡುವ ಕ್ರಮಕೈಗೊಳ್ಳಬೇಕು ಈ ವಿಷಯದಲ್ಲಿ ಸಂಶಯವೇ ಬೇಡ ಎಂದರು.

ಮೊದಲು ಒಳಮೀಸಲಾತಿ ಜಾರಿಗೊಳಿಸುವ ಬದ್ಧತೆ ಇಲ್ಲವೆಂದರು ನಾಗಮೋಹನ್ ದಾಸ್ ಆಯೋಗ ರಚನೆ ವೇಳೆ ವಿರೋಧಿಸಿದರು. ಜಾತಿಗಣತಿ ಸಮೀಕ್ಷೆ ಕೈಗೊಳ್ಳುತ್ತಿದ್ದಂತೆ ಷಡ್ಯಂತ್ರ ಎಂದು ಕುಹುಕುವಾಡಿದರು ಈಗ ವರದಿ ಸರ್ಕಾರದ ಕೈ ಸೇರಿ ಸಚಿವ ಸಂಪುಟದಲ್ಲಿ ಮಂಡನೆ ಆಗುತ್ತಿದ್ದಂತೆ ಕೆಲವರು ಭೀತಿಗೆ ಒಳಗಾಗಿ ಜ್ಞಾನ ಸಂವಿಧಾನದ ಅರಿವು ಇಲ್ಲದೆ ಟೀಕಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಏಕತೆ ಬದ್ಧತೆಯಿಂದ ಮುನ್ನಡೆಯುತ್ತಿದೆ ಚಿತ್ರದುರ್ಗದಲ್ಲಿ ಈ ಹಿಂದೆ ಎಸ್‌ಸಿ, ಎಸ್‌ಟಿ ಸಮಾವೇಶದಲ್ಲಿ ಘೋಷಣೆ ಮಾಡಿದಂತೆ ಹಾಗೂ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಿದ್ದೇವೆ ಎಂದರು.

ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರ ಪ್ರಯತ್ನ ಕೈಗೊಂಡಿತ್ತು. ಆದರೆ ಒಳ ಮೀಸಲಾತಿ ಜಾರಿ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲವೆಂಬ ತೀರ್ಪು ಅಡ್ಡಿಯಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಆ.1, 2024ರಂದು ನೀಡಿದ ತೀರ್ಪು ಅಡ್ಡಿಗೆ ತೆರೆ ಎಳೆದಿದ್ದು ಇದನ್ನು ಸಿಎಂ ಸಿದ್ದರಾಮಯ್ಯ ಸೇರಿ ಎಲ್ಲರೂ ಸ್ವಾಗತಿಸಿದ್ದಾರೆ. ಆ.7ರಂದು ಸಚಿವ ಸಂಪುಟದಲ್ಲಿಯೇ ತೀರ್ಮಾನ ಕೈಗೊಳ್ಳಲು ವರದಿ ಕುರಿತು ಸಚಿವರಿಗೆ ಮಾಹಿತಿ ದೊರೆಯಲಿ 1700 ಪುಟಗಳ ವರದಿಯನ್ನು ಅಧ್ಯಯನ ಮಾಡಲಿ ಎಂಬ ಕಾರಣಕ್ಕೆ ಪ್ರತಿಗಳನ್ನು ಕೊಡಲಾಗಿದೆ. ಬರುವ ಆ.16 ರಂದು ವಿಶೇಷ ಸಚಿವ ಸಂಪುಟದ ಸಭೆ ಕರೆಯಲಾಗಿದ್ದು ಈ ಸಭೆಯಲ್ಲಿ ಅಂತಿಮ ತೆರೆ ಎಳೆಯಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ಕೆಲವರು ಗುರುತಿಸಿಕೊಂಡಿದ್ದು ಅವರಿಗೆ ಶೇ.1ರಷ್ಟು ಮೀಸಲಾತಿ ನೀಡಿರುವುದನ್ನು ಕೆಲವರು ವಿರೋಧಿಸುತ್ತಿದ್ದಾರೆ. ಆದರೆ ಸಂವಿಧಾನತ್ಮಕವಾಗಿ ಎಎ, ಎಕೆ, ಎಡಿ ಎಂದು ಗುರುತಿಸಿಕೊಳ್ಳಲು ಹಕ್ಕು ನೀಡಲಾಗಿದೆ. ಆದ್ದರಿಂದ ಈ ಗುಂಪನ್ನು ಉಳಿಸಿಕೊಳ್ಳಬೇಕು ಜತೆಗೆ ಅವರೆಲ್ಲರಿಗೂ ಗುರುತಿನ ಚೀಟಿ ನೀಡಿ ಶೇ.1ರ ಮೀಸಲಾತಿಯಡಿಯೇ ಸೌಲಭ್ಯ ಪಡೆಯಲು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಛಲವಾದಿಯನ್ನು ಮಾದಿಗರ ಗುಂಪಿಗೆ ನುಸಳಲು ಅವಕಾಶ ನೀಡಬಾರದು

ಎಂದು ತಿಳಿಸಿದರು.

ರಾಜ್ಯದಲ್ಲಿ ಮಾದಿಗರ ಸಂಖ್ಯೆ ಹೆಚ್ಚು ಇರುವುದರ ಜತೆಗೆ ಉದ್ಯೋಗ ಶಿಕ್ಷಣ ಆಸ್ತಿ ಗಳಿಸಿ ಸಾಮಾಜಿಕ ಸ್ಥಾನದ ಸೇರಿ ವಿವಿಧ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದಿದ್ದಾರೆಂಬ ನಿಖರ ಮಾಹಿತಿ ಸಮೀಕ್ಷೆ ವೇಳೆ ದೊರೆತಿದೆ. ಆದ್ದರಿಂದ ಶೇ.6ರಷ್ಟು ಮೀಸಲಾತಿ ನೀಡಲಾಗಿದೆ. ಇದು 7ಕ್ಕೆ ಏರಿಸಬೇಕಾಗಿತ್ತು ಆದರೂ ನಾವು ವರದಿಯನ್ನು ಸ್ವಾಗತಿಸಿದ್ದೇವೆ ಆದರೆ ಕೆಲವರು ಅನಗತ್ಯ ಗೊಂದಲ ಏರ್ಪಡಿಸುವ ಹುನ್ನಾರು ನಡೆಸುತ್ತಿದ್ದಾರೆ ಇದಕ್ಕೆ ಸರ್ಕಾರ ಕಿವಿಕೊಡಬಾರದು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಲಿಡ್ಕರ್ ಮಾಜಿ ಅಧ್ಯಕ್ಷ ಒ.ಶಂಕರ್, ವಕೀಲ ಶರಣಪ್ಪ, ರವೀಂದ್ರ ತಾಪಂ ಮಾಜಿ ಸದಸ್ಯ ಸಮರ್ಥರಾಯ, ಅನಿಲ್ ಕೋಟಿ, ಎಂ.ಜೆ.ಪ್ರಸನ್ನ ಇತರರಿದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್