ಹಾರೋಹಳ್ಳಿ: ಜನಪದ ಕಲೆ ಎಲ್ಲಾ ಕಲೆಗಳ ತಾಯಿ ಬೇರಿನಂತಿದೆ. ಎಲ್ಲಾ ಕಲೆಗಳ ಮೂಲವೂ ಜನಪದದಿಂದ ಮೂಡಿದೆ ಎನ್ನಬಹುದು. ಮನುಷ್ಯನ ನಿತ್ಯ ಜೀವನದಲ್ಲಿಯೂ ತನಗೆ ಅರಿವಿಲ್ಲದಂತೆಯೇ ಜನಪದ ಅಡಗಿದೆ ಎಂದು ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದರು.ತಾಲೂಕಿನ ಕೊಟ್ಟಗಾಳು ಗ್ರಾಮದ ಮಾರಮ್ಮದೇವಿ ದೇವಾಲಯದ ಆವರಣದಲ್ಲಿ ದುರ್ಗಾ ಪರಮೇಶ್ವರಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್ ಏರಂಗೆರೆ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜನಪದ ಸಂಭ್ರಮ- 2024- 25 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಲಿಂಗಯ್ಯ ಮಾತನಾಡಿ, ಜನಪದ ಕಲೆಯು ನಮ್ಮ ಪೂರ್ವಜರಿಂದ ನಮಗೆ ದೊರೆತ ಬಳುವಳಿಯಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೂಜಾ ಕುಣಿತ, ಪಟಕುಣಿತ, ವೀರಗಾಸೆ, ಚಿಲಿಪಿಲಿ ಗೊಂಬೆ, ತಮಟೆವಾದನ ಸೇರಿ ವಿವಿಧ ಜಾನಪದ ಕಲಾತಂಡಗಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆ ನಡೆಸಲಾಯಿತು.ವಕೀಲ ಸಿ.ಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜನಪದ ಕಲಾವಿದರಾದ ಮುನಿಯಪ್ಪ, ನಿಂಗರಾಜು, ಪರಶುರಾಮ್ ನಾಯ್ಕ ಸೇರಿ ಹಲವರಿಗೆ ಜಾನಪದ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಕಾಶವಾಣಿ ಕಲಾವಿದ ಚಿಕ್ಕಮರಿಗೌಡ, ಕೊಟ್ಟಗಾಳು ಸರ್ಕಾರಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ಚೇತನ್ ಕುಮಾರ್ , ನಿರ್ದೇಶಕ ಶಿವಕುಮಾರ್, ಮುಖ್ಯ ಶಿಕ್ಷಕ ಶಂಕರ್ ಮೂರ್ತಿ, ವಕೀಲ ದೇವುರಾವ್ ಜಾದವ್, ಶಿಕ್ಷಕ ಗೋವಿಂದರಾಜು, ಮುಖಂಡರಾದ ಬಿಜ್ಜಳ್ಳಿ ಶ್ರೀನಿವಾಸ್, ಆಲನತ್ತ ರಮೇಶ್, ಚನ್ನಬೊರಯ್ಯ, ಕೆ.ರಾಜು, ಶಿವರಾಮು, ಗೌರಮ್ಮ ಉಪಸ್ಥಿತರಿದ್ದರು.