ಶಿವರಾತ್ರಿ ಹಿಂದಿನ ದಿನದಿಂದಲೇ ಸಿದ್ಧಾರೂಢ ಜಾತ್ರೆದ ರಾಜ್ಯ, ಹೊರ ರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ರಥೋತ್ಸವ ಮುಗಿದ ಬಳಿಕವೇ. ಕೈಲಾಸ ಮಂಟಪ, ಸಮಾಧಿ ಮಂದಿರದ ಹೊರಗೆ, ಯಾತ್ರಿ ನಿವಾಸದ ಅಕ್ಕ-ಪಕ್ಕ ಹೀಗೆ ಎಲ್ಲಿ ಜಾಗೆ ಕಾಣಿಸುತ್ತದೆಯೋ ಅಲ್ಲಿ ವಾಸ್ತವ್ಯ ಹೂಡುತ್ತಾರೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ
ಉತ್ತರ ಕರ್ನಾಟಕದ ಆರಾಧ್ಯ ದೈವ ಶ್ರೀ ಸಿದ್ಧಾರೂಢರ ಜಾತ್ರೆಗೆ ಕೇವಲ ಎರಡು ದಿನ ಬಾಕಿ ಉಳಿದಿದೆ. ಲಕ್ಷಾಂತರ ಭಕ್ತರು ಸೇರುವ ಜಾತ್ರೆಯಲ್ಲಿ ಸಮುದಾಯದ ಆರೋಗ್ಯ ಹಾಗೂ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಸಿದ್ಧಾರೂಢ ಮಠದ ಜಾತ್ರೆಯೆಂದರೆ ಶಿವರಾತ್ರಿ ಹಾಗೂ ಅದರ ಮರುದಿನ ನಡೆಯುವ ರಥೋತ್ಸವ. ಇದರಂಗವಾಗಿ ವಾರದಿಂದಲೇ ತ್ರಿವಿಧ ದಾಸೋಹದ ಕಾರ್ಯಕ್ರಮಗಳು ಆರಂಭವಾಗಿವೆ. ಜಾತ್ರೆಯ ಸಿದ್ಧತೆಯನ್ನೂ ಮಠದ ಟ್ರಸ್ಟ್ ಕಮಿಟಿ ಮಾಡಿಕೊಳ್ಳುತ್ತಿದೆ.
ಶಿವರಾತ್ರಿ ಹಿಂದಿನ ದಿನದಿಂದಲೇ ಜಾತ್ರೆಗೆ ಭಕ್ತಗಣ ಬರಲಿದೆ. ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಜನರು ಬರುತ್ತಾರೆ. ಜನತೆ ಮತ್ತೆ ತಮ್ಮೂರಿನತ್ತ ಹೆಜ್ಜೆ ಹಾಕುವುದು ರಥೋತ್ಸವ ಮುಗಿದ ಬಳಿಕವೇ. ಕೈಲಾಸ ಮಂಟಪ, ಸಮಾಧಿ ಮಂದಿರದ ಹೊರಗೆ, ಯಾತ್ರಿ ನಿವಾಸದ ಅಕ್ಕ-ಪಕ್ಕ ಹೀಗೆ ಎಲ್ಲಿ ಜಾಗೆ ಕಾಣಿಸುತ್ತದೆಯೋ ಅಲ್ಲಿ ವಾಸ್ತವ್ಯ ಹೂಡುತ್ತದೆ. ಹಗಲು ರಾತ್ರಿಯೆನ್ನದೇ ಭಜನೆಯಲ್ಲಿ ನಿರತವಾಗಿರುತ್ತದೆ. ಭಕ್ತರಿಗೆ ನಿದ್ದೆಯ ಚಿಂತೆ ಇಲ್ಲ. ಊಟದ ಪರಿವೇ ಇಲ್ಲ ಎಂಬಂತೆ ಇರುತ್ತಾರೆ. ಭಕ್ತರಿಗಾಗಿ ಮಠದಲ್ಲೂ ಅನ್ನದಾಸೋಹ ನಿರಂತರವಾಗಿದ್ದರೆ, ಅಜ್ಜನ ಭಕ್ತರು ಗುಂಪು ಕಟ್ಟಿಕೊಂಡು ಅಲ್ಲಲ್ಲಿ ಪ್ರಸಾದದ ವ್ಯವಸ್ಥೆಯನ್ನೂ ಮಾಡಿರುತ್ತವೆ.
ಸ್ವಚ್ಛತೆಯದೇ ಸಮಸ್ಯೆ:
ನಾಲ್ಕೈದು ಲಕ್ಷ ಭಕ್ತರು ಸೇರುವುದರಿಂದ ಸ್ವಚ್ಛತೆ ಸಮಸ್ಯೆ ಎದುರಾಗುವುದು ಸಹಜ. ಎಲ್ಲೆಂದರಲ್ಲಿ ರಾಶಿ ರಾಶಿ ತ್ಯಾಜ್ಯ ಕಾಣಿಸುವುದು ಮಾಮೂಲಿ. ಭಕ್ತಗಣ ಎದುರಿಸುವ ಪ್ರಮುಖ ಸಮಸ್ಯೆಯೆಂದರೆ ಶೌಚಾಲಯದ್ದು. ಮಠದ ಟ್ರಸ್ಟ್ ಕಮಿಟಿ ತಕ್ಕ ಮಟ್ಟಿಗೆ ಸಾಮೂಹಿಕ ಶೌಚಾಲಯ ನಿರ್ಮಿಸಿದೆ. ಸ್ವಚ್ಛತೆಗೆ ಸ್ವಯಂ ಸೇವಕರು ಕೆಲಸ ಮಾಡುತ್ತಾರೆ. ಆದರೆ, ಇವೆರಡನ್ನು ನಿರ್ವಹಿಸಬೇಕಾದ ಮಹಾನಗರ ಪಾಲಿಕೆ ಮಾತ್ರ ಈ ವರೆಗೂ ಯಾವುದೇ ನಿರ್ಧಾರವನ್ನೇ ಕೈಗೊಂಡಿಲ್ಲವಂತೆ. ಕೇಳಿದರೆ ನಾಲ್ಕು ಪೌರಕಾರ್ಮಿಕರನ್ನು ಹೆಚ್ಚುವರಿಯಾಗಿ ನಿಯೋಜಿಸುತ್ತೇವೆ ಎಂದು ಹಾರಿಕೆ ಉತ್ತರ ಪಾಲಿಕೆ ಆಡಳಿತ ಮಂಡಳಿಯದ್ದು.
ಮೊಬೈಲ್ ಶೌಚಾಲಯ:
ಲಕ್ಷಾಂತರ ಭಕ್ತರಿಗೆ ಅನುಕೂಲವಾಗುವಂತೆ ಕನಿಷ್ಠ ನೂರಾರು ಸಂಖ್ಯೆಯಲ್ಲಿ ಮೊಬೈಲ್ ಶೌಚಾಲಯ, ಅಲ್ಲಲ್ಲಿ ಡಸ್ಟ್ ಬಿನ್, ಅವುಗಳ ವಿಲೇವಾರಿಗೆ ಪೌರಕಾರ್ಮಿಕರ ನಿಯೋಜನೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹ. ಆದರೆ, ಸಮುದಾಯ ಆರೋಗ್ಯ, ಶಿಕ್ಷಣ ಹಾಗೂ ನ್ಯಾಯ ಸ್ಥಾಯಿ ಸಮಿತಿಯಂತೂ ಇದಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತಿದೆ. ಏನು ಮಾಡಬೇಕೆಂಬುದರ ಬಗ್ಗೆ ನಿರ್ಧರಿಸಿಲ್ಲ. ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳುತ್ತದೆ ಸಮಿತಿ. ಊರಲ್ಲಿ ಇಷ್ಟೊಂದು ದೊಡ್ಡ ಜಾತ್ರೆ ನಡೆಯುತ್ತಿರುವಾಗ ಸಮುದಾಯದ ಆರೋಗ್ಯ ಹಾಗೂ ಸ್ವಚ್ಛತೆ ಪಾಲಿಕೆಯ ಕರ್ತವ್ಯವಲ್ಲವೇ? ಇಂದೋರ್ ಪ್ರವಾಸದಿಂದ ಅಧ್ಯಯನ ಮಾಡಿಕೊಂಡು ಬಂದಿದ್ದೇನು? ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಇನ್ನಾದರೂ ಆರೋಗ್ಯ ಸ್ಥಾಯಿ ಸಮಿತಿ ಮೇಲಷ್ಟೇ ಜವಾಬ್ದಾರಿ ಹಾಕದೇ ಮೇಯರ್-ಉಪಮೇಯರ್, ಆಯುಕ್ತರು ಕೊಂಚ ಗಮನಹರಿಸಬೇಕು ಎಂಬುದು ಆರೂಢರ ಭಕ್ತರ ಆಗ್ರಹ.ಸಿದ್ಧಾರೂಢ ಜಾತ್ರೆಯಲ್ಲಿ ನಾವೇನು ಮಾಡಬೇಕು ಎಂಬುದನ್ನು ಇನ್ನು ಯೋಚನೆ ಮಾಡಿಲ್ಲ. ಇನ್ನೂ ಅದರ ಬಗ್ಗೆ ಮಾತನಾಡಿಲ್ಲ. ಸದಸ್ಯರೊಂದಿಗೆ ಮಾತನಾಡಿ ನಿರ್ಧರಿಸುತ್ತೇವೆ.
ಮಹಾದೇವಪ್ಪ ನರಗುಂದ, ಅಧ್ಯಕ್ಷರು, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ನ್ಯಾಯ ಸ್ಥಾಯಿ ಸಮಿತಿಮಠದಿಂದಲೂ ಸ್ವಚ್ಛತೆಗೆ ತಕ್ಕ ಮಟ್ಟಿಗೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಮೊಬೈಲ್ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದೇವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.