ಕೂಡ್ಲಿಗಿ: ಬಯಲುಸೀಮೆಯ ನೆಲದಲ್ಲಿ ನಡೆದ ಮೊದಲ ಉತ್ಸವಕ್ಕೆ ಸೇರಿದ ಅಪಾರ ಜನಸ್ತೋಮ ಮುಂದೆ ಪಾಳೆಗಾರ ಸಂಸ್ಥಾನದ ಗತವೈಭವನ್ನು ನೆನಪಿಸುವಂಥ ಕಲಾಸಿರಿವಂತಿಕೆ ವೈಭವಕ್ಕೆ ಗುಡೇಕೋಟೆ ಉತ್ಸವದ ಒನಕೆ ಓಬವ್ವನ ವೇದಿಕೆಯಲ್ಲಿ ಶನಿವಾರ ರಾತ್ರಿ ನಡೆದ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳು ಸಾಕ್ಷಿಯಾದವು.
ಕುದರೆಡೆವು ರಾಜಪ್ಪ ಮತ್ತು ತಂಡವು ವೇದಿಕೆ ಮೇಲೆ ಕಹಳೆವಾದನ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಆರಂಭ ನೀಡಿದರು. ಅಂಧ ಕಲಾವಿದೆ ಕಾವ್ಯಬಾಯಿ ಅವರ ಸಂಗೀತ ಗಾಯನಕ್ಕೆ ಗುಡೇಕೋಟೆ ಉತ್ಸವಕ್ಕೆ ಸೇರಿದ ಸಾವಿರಾರೂ ಜನ ಕಿವಿಯಾದರೆ, ಇನ್ನೊಬ್ಬ ಕಲಾವಿದ ಶ್ರೀಧರ್ ಅಕ್ಕಸಾಲಿ ಅವರ ವಯಲಿನ್ ವಾದನಕ್ಕೆ ಗ್ರಾಮ ಪರಿಸದ ಹೆಬ್ಬಂಡೆಗಳು ಧ್ವನಿಯಾಗಿದ್ದು ಮಾತ್ರವಲ್ಲ ಸಪ್ತಸ್ವರ ಚಿಮ್ಮಿದ ರೀತಿ ಭಾಸವಾಯಿತು. ಹೊಸಪೇಟೆಯ ಶ್ರೀ ಅಂಜಿಲಿ ಭರತನಾಟ್ಯ ಕಲಾ ಕೇಂದ್ರ ತಂಡದ ನೃತ್ಯ, ಮಂಗಳೂರಿನ ಕಿರಣ ಮತ್ತು ತಂಡ ನೀಡಿದ ಸಿಂಗಾರಿ ಮೇಳಂ(ನಂದಿನಿ ಕೇರಳ ಚಂಡೆ) ಮತ್ತು ತರೀಕೆರೆ ಮಂಜುಶ್ರೀ ಮಹಿಳಾ ವೀರಗಾಸೆ ಕಲಾ ತಂಡವು ನೀಡಿದ ವಾದ್ಯಗಳ ಲಯಕ್ಕೆ ತಕ್ಕ ನೃತ್ಯವು ಜನಸ್ತೋಮ ಕುಣಿಯುವಂತೆ ಮಾಡಿತ್ತು. ಅಲ್ಲದೆ, ತಿಮ್ಮನಹಳ್ಳಿ ಡಿ.ಬಿ. ನಿಂಗಪ್ಪ ಮತ್ತು ನಾಗರಹುಣಿಸೆ ದುರುಗೇಶ್ ಅವರ ವಚನಗಾಯಕ್ಕೆ ಭಾವಭಕ್ತಿಯಿಂದ ಪ್ರೇಕ್ಷಕರು ತಲೆದೂಗಿದರು. ಬುಡ್ಡಜಂಗಮ ಹಗಲುವೇಷ ಕಲಾವಿದರು ನೀಡಿದ ‘ಹನುಮಾಯಣ’ ರೂಪಕ ಪ್ರದರ್ಶನಕ್ಕೆ ಪ್ರೇಕ್ಷಕರು ಮನಸೋತರು.ಚಪ್ಪಾಳೆ ಗಿಟ್ಟಿಸಿದ ನಗೆ ಚಟಾಕಿ: ಉದ್ಟಾಟನೆ ಕಾರ್ಯಕ್ರಮ ಮುಗಿದ ನಂತರ ನಾಡಿನ ವಿವಿಧ ಭಾಗದ ಸಂಗೀತ ಮತ್ತು ನೃತ ರೂಪಕಗಳ ಮುಗಿದ ಮೇಲೆ ಜನರು ವಾಪಸ್ ತೆರಳುತ್ತಾರೆ ಎಂಬ ಭಾವನೆ ಆಯೋಜಕರಲ್ಲಿ ಮೂಡಿತ್ತು. ಆದರೆ, ಕೂಡ್ಲಿಗಿ ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್ ಮತ್ತು ತಂಡವು ಅವರ ನೀಡಿದ ನಗೆಹಬ್ಬ ಕಾರ್ಯಕ್ರಮವನ್ನು ನೋಡಲು ರಾತ್ರಿ 12 ಗಂಟೆಯವರೆಗೂ ಕಾತರದಿಂದ ಕಾದರು.
ನಂತರ ಹಾಸ್ಯದ ಚಟಾಕಿಗಳನ್ನು ಕೇಳಿದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಕಲಾವಿದರಿಗೆ ಹುರುಪು ತುಂಬಿದರು. ಅಲ್ಲದೆ, ಕಾರ್ಯಕ್ರಮದ ಕೊನೆಯವರೆಗೂ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ವೇದಿಕೆ ಮುಂದೆ ಕುಳಿತು ಕಲಾವಿದರಿಗೆ ಪ್ರೋತ್ಸಾಹಿಸುವ ಕೆಲಸ ಮಾಡಿದರೆ, ತಹಸೀಲ್ದಾರ್ ರಾಜು ಪಿರಂಗಿ, ಇಒ ರವಿಕುಮಾರ್, ಸಾಥ್ ನೀಡಿದರು. ದಿವ್ಯಾ ಆಲೂರು ಕಾರ್ಯಕ್ರಮ ನಿರೂಪಿಸಿದರು.