ಅಶೋಕ ಡಿ.ಸೊರಟೂರ ಲಕ್ಷ್ಮೇಶ್ವರ
ತಾಲೂಕಿನಲ್ಲಿ ಕಳೆದ 45 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಮುಂಗಾರು ಹಂಗಾಮಿನ ಹೆಸರು ಬೆಳೆ ಹೊಲದಲ್ಲಿಯೇ ಮೊಳಕೆಯೊಡೆಯುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿರುವುದು ರೈತರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಳೆದ ಒಂದೂವರೆ ತಿಂಗಳಿಂದ ಸುರಿಯುತ್ತಿರುವ ಮಳೆಯು ರೈತರು ಮುಂಗಾರು ಹಂಗಾಮಿನ ಹೆಸರು, ಉದ್ದು ಸೇರಿದಂತೆ ಅಲ್ಪಾವಧಿಯ ವಿವಿಧ ಬೆಳೆಗಳು ಕೊಳೆಯುವ ಹಂತಕ್ಕೆ ಹೋಗಿವೆ. ಇದರಿಂದ ಲಕ್ಷಾಂತರ ಖರ್ಚು ಮಾಡಿ ಬಿತ್ತನೆ ಮಾಡಿರುವ ಬೆಳೆಗಳು ನೆಲ ಕಚ್ಚುತ್ತಿವೆ, ಅಲ್ಲದೆ ಮುಂಗಾರು ಹಂಗಾಮಿನ ರೈತರಿಗೆ ಹೆಚ್ಚಿನ ಆದಾಯ ತಂದು ಕೊಡುವ ಹೆಸರು ಬೆಳೆಯ ಕಾಯಿಗಳು ಬಿಡಿಸುವ ಹಂತಕ್ಕೆ ಬಂದಿವೆ, ಇನ್ನೂ ಕೆಲ ಹೆಸರು ಬೆಳೆಯ ಕಾಯಿಗಳು ಹೊಲದಲ್ಲಿಯೇ ಮೊಳಕೆಯೊಡೆದಿವೆ. ಹೆಸರು ಕಾಯಿಗಳು ಮಾಗಿದ್ದರಿಂದ ಅವುಗಳನ್ನು ಬಿಡಿಸಲು ಕೂಡಾ ಮಳೆ ಬಿಡುವು ಕೊಡುತ್ತಿಲ್ಲ, ಇದರಿಂದ ಕಾಯಿಗಳು ನೆಲಕ್ಕೆ ಬಿದ್ದು ಅಲ್ಲಿಯೇ ಬೂಷ್ಟ್ ಹಿಡಿದು ಹೆಸರು ಕಾಳುಗಳು ಕೆಟ್ಟು ಹೋಗಿರುವ ಘಟನೆ ಕಂಡು ಬಂದಿವೆ.
ಪಟ್ಟಣದ ಬಸ್ತಿ ಬಣದಲ್ಲಿನ ಈರಣ್ಣ ಶಂಕ್ರಪ್ಪ ಬೊಮ್ಮನಹಳ್ಳಿ ಅವರ ಎರಡು ಎಕರೆ ಹೊಲದಲ್ಲಿ ಬೆಳೆದಿರುವ ಹೆಸರು ಬೆಳೆಯಲ್ಲಿಯೇ ಕಾಯಿಗಳು ಮೊಳಕೆಯೊಡೆದು ಸಾವಿರಾರು ರೂಪಾಯಿಗಳ ನಷ್ಟ ಅನುಭವಿಸುವಂತಾಗಿದೆ. ಅತಿಯಾದ ಮಳೆಯಿಂದ ಹೆಸರು ಕಾಯಿಗಳು ಮೊಳಕೆ ಒಡೆಯುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿರುವುದು ರೈತರಿಗೆ ಬರೆ ಎಳೆದಂತಾಗಿದೆ. ಅತಿಯಾದ ಮಳೆಯಿಂದ ರೈತರು ಹೊಲಕ್ಕೆ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ. ತೇವಾಂಶದಿಂದ ಹೆಸರು ಬೆಳೆಗೆ ಡಾಂಬರ್ ಹಾಗೂ ಹಳದಿ ರೋಗ ಆವರಿಸಿರುವುದು ಕಂಡು ಬರುತ್ತಿರುವುದು ರೈತರಿಗೆ ಶಾಪವಾಗಿ ಕಂಡು ಬರುತ್ತಿದೆ.ಲಕ್ಷ್ಮೇಶ್ವರ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಹೆಸರು ಬೆಳೆ ಸುಮಾರು 4800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು, ಆದರೆ ಬಿತ್ತನೆ ಅವಧಿಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಸುಮಾರು 6340 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಗುರಿ ಮೀರಿ ಬಿತ್ತನೆ ಮಾಡಲಾಗಿದೆ. ಆದರೆ ಈಗ ಸುರಿಯುತ್ತಿರುವ ಮಳೆಗೆ ಹೆಸರು ಕಾಯಿಗಳು ಬಿಡಿಸುವ ಹಂತಕ್ಕೆ ಬಂದಿದ್ದು, ಕೆಲ ಹೊಲಗಳಲ್ಲಿ ಹೆಸರು ಬೆಳೆಯಲ್ಲಿಯೇ ಮೊಳಕೆಯೊಡೆಯುತ್ತಿವೆ, ಇದು ರೈತರಿಗೆ ಅಪಾರ ನಷ್ಟ ಉಂಟು ಮಾಡುತ್ತಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ನರಸಮ್ಮನವರ ತಿಳಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಎರಡು ಎಕರೆ ಪ್ರದೇಶದಲ್ಲಿ ಸಾವಿರಾರು ಖರ್ಚು ಮಾಡಿ ಹೆಸರು ಬಿತ್ತನೆ ಮಾಡಲಾಗಿತ್ತು, ಮೊದಲು ಚೆನ್ನಾಗಿದ್ದ ಬೆಳೆಯು ಈಗ ಕಾಯಿಗಳು ಮಾಗಿ ಬಿಡಿಸುವ ಹಂತಕ್ಕೆ ಬಂದಾಗ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಕಾಯಿಗಳಲ್ಲಿ ಕಾಳುಗಳು ಮೊಳಕೆಯೊಡೆಯುತ್ತಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮುಂಗಾರು ಹಂಗಾಮಿನಲ್ಲಿ ರೈತರಿಗೆ ಆದಾಯ ತಂದು ಕೊಡಬೇಕಾಗಿದ್ದ ಬೆಳೆಯು ನೆಲದ ಪಾಲಾಗುತ್ತಿದೆ. ಆದ್ದರಿಂದ ಸರ್ಕಾರ ಹೆಸರು ಬೆಳೆಯ ನಷ್ಟಕ್ಕೆ ಪರಿಹಾರ ನೀಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ರೈತ ಈರಣ್ಣ ಶಂಕ್ರಪ್ಪ ಬೊಮ್ಮನಹಳ್ಳಿ ಹೇಳಿದ್ದಾರೆ.