ಗುಡ್ಡಾಪುರದಲ್ಲಿನ ಕರ್ನಾಟಕ ಭವನ ಉದ್ಘಾಟನೆ

KannadaprabhaNewsNetwork | Published : Jul 31, 2024 1:08 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಸುಕ್ಷೇತ್ರ ಗುಡ್ಡಾಪುರದ ಶ್ರೀ ದಾನಮ್ಮದೇವಿ ದೇವಸ್ಥಾನದ ಬಳಿ ಕರ್ನಾಟಕ ಭವನ ನಿರ್ಮಿಸಲಾಗಿದ್ದು, ಅ.1ರಂದು ಲೋಕಾರ್ಪಣೆಯಾಗಲಿದೆ ಎಂದು ದಾನಮ್ಮದೇವಿ ದೇವಸ್ಥಾನ ಕಮಿಟಿ ಅಧ್ಯಕ್ಷ ವಿಜುಗೌಡ ಪಾಟೀಲ್ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಟ್ಟಡ ಲೋಕಾರ್ಪಣೆಗೆ ಅವಧೂತ ವಿನಯ ಗುರೂಜಿ ಆಗಮಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಸುಕ್ಷೇತ್ರ ಗುಡ್ಡಾಪುರದ ಶ್ರೀ ದಾನಮ್ಮದೇವಿ ದೇವಸ್ಥಾನದ ಬಳಿ ಕರ್ನಾಟಕ ಭವನ ನಿರ್ಮಿಸಲಾಗಿದ್ದು, ಅ.1ರಂದು ಲೋಕಾರ್ಪಣೆಯಾಗಲಿದೆ ಎಂದು ದಾನಮ್ಮದೇವಿ ದೇವಸ್ಥಾನ ಕಮಿಟಿ ಅಧ್ಯಕ್ಷ ವಿಜುಗೌಡ ಪಾಟೀಲ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಟ್ಟಡ ಲೋಕಾರ್ಪಣೆಗೆ ಅವಧೂತ ವಿನಯ ಗುರೂಜಿ ಆಗಮಿಸಲಿದ್ದಾರೆ. ಬೆಳಗಾವಿ, ವಿಜಯಪುರ ಜಿಲ್ಲೆಗಳ ಸಚಿವರು, ಶಾಸಕರು, ಸಂಸದರು ಪಕ್ಷಾತೀತವಾಗಿ ಭಾಗವಹಿಸಲಿದ್ದು, ಕರ್ನಾಟಕ, ಮಹಾರಾಷ್ಟ್ರದ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಕರ್ನಾಟಕದ ಬಹುಪಾಲು ಭಕ್ತರೇ ದಾನಮ್ಮದೇವಿಯ ಭಕ್ತರಿದ್ದಾರೆ. ಇಲ್ಲಿಗೆ ಬಂದವರಿಗೆ ಊಟ, ವಸತಿಯ ಸಮಸ್ಯೆ ಇತ್ತು. ಹೀಗಾಗಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಕರ್ನಾಟಕ ಭವನ ನಿರ್ಮಾಣಕ್ಕೆ ಕೈ ಜೋಡಿಸಿದ್ದರು. ಅದರ ಫಲವಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕಟ್ಟಡ ನಿರ್ಮಾಕ್ಕಾಗಿ ₹11 ಕೋಟಿ ಅನುದಾನ ನೀಡಿದ್ದು, ಕೆಲಸ ಪುರ್ಣಗೊಂಡಿದೆ. ಇದಕ್ಕೆಲ್ಲ ದುದನಿಯ ಶ್ರೀಗಳ ಆಶೀರ್ವಾದವಿದೆ ಎಂದು ಸ್ಮರಿಸಿದರು.ಟ್ರಸ್ಟ್‌ನಲ್ಲಿದ್ದ ಕೆಲ ಸಣ್ಣಪುಟ್ಟ ಸಮಸ್ಯೆಗಳನ್ನೆಲ್ಲ ಬಗೆಹರಿಸಿ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಗುಡ್ಡಾಪುರದ ದಾನಮ್ಮದೇವಿ ವರದಾನಿ ದಾನಮ್ಮಳಾಗಿದ್ದು, ಮನಸ್ಸು ಬಿಚ್ಚಿ, ಭಕ್ತಿಯಿಂದ ಕೇಳಿಕೊಂಡ ಭಕ್ತರಿಗೆ ಖಂಡಿತವಾಗಿ ಆಶೀರ್ವದಿಸುತ್ತಾಳೆ. ತಾಯಿಯ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದರು.ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಸಿಎಂ ಸಿದ್ಧರಾಮಯ್ಯನವರೂ ₹ 11 ಕೋಟಿ ಅನುದಾನ ಘೋಷಣೆ ಮಾಡಿದ್ದು, ಅಭಿನಂದನೆ ಸಲ್ಲಿಸುವೆ. ಮಹಾರಾಷ್ಟ್ರ ಸರ್ಕಾರದಿಂದ ಅನುದಾನ ಬಂದಿಲ್ಲ, ಅವರಿಗೂ ಸಹ ಮನವಿ ಮಾಡಿ ಅನುದಾನ ಪಡೆದು, ದೇವಸ್ಥಾನವನ್ನು ಇನ್ನಷ್ಟು ಅಭಿವೃದ್ಧಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕಮಿಟಿಯ ಉಪಾಧ್ಯಕ್ಷ ಚಂದ್ರಶೇಖರ ಗೊಬ್ಬಿ, ಖಜಾಂಚಿ ಚಂದ್ರಶೇಖರ ಇಂಡಿ, ನಿರ್ದೇಶಕರಾದ ಸದಾಶಿವ ಗುಡ್ಡೊಡಗಿ, ಶಂಭುಲಿಂಗ ಮಮದಾಪುರ, ಸಾಗರ ಚಂಪಣ್ಣವರ, ದಾನಪ್ಪ ಪೂಜಾರಿ ಉಪಸ್ಥಿತರಿದ್ದರು.

Share this article