ಸಂತೋಷ ದೈವಜ್ಞ
ಪಟ್ಟಣದ ಜನತೆಯ ಪ್ರಮುಖ ಬೇಡಿಕೆಯಾಗಿದ್ದ ಬಸ್ ಡಿಪೋ ಹಲವು ವರ್ಷಗಳ ಬಳಿಕ ನಿರ್ಮಾಣವಾಗಿದೆ. ಉದ್ಘಾಟನೆಯನ್ನು ಕೂಡ ಇತ್ತೀಚೆಗೆ ಮಾಡಲಾಗಿದೆ. ಇನ್ನೇನು ಬಸ್ ಡಿಪೋ ಕಾರ್ಯಾರಂಭವಾಗಿ ಅಗತ್ಯ ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸಲಿದೆ ಆ ಮೂಲಕ ಬಹುದಿನದ ಕನಸು ನನಸಾಗುತ್ತಿದೆ ಎಂದು ಮುಂಡಗೋಡ ತಾಲೂಕಿನ ಜನತೆಯ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು.
ಆದರೆ ಡಿಪೋಗೆ ಬೇಕಾದ ಡೀಸೆಲ್ ಟ್ಯಾಂಕ್ ಹಾಗೂ ಒಳಾಂಗಣದಲ್ಲಿ ಕಾಂಕ್ರೀಟಿಕರಣ ಕಾಮಗಾರಿ ಬಾಕಿ ಇರುವಾಗಲೇ ತರಾತುರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಉದ್ಘಾಟನೆ ಮಾಡಲಾಯಿತು. ಇದರಿಂದ ನಾಮಕಾವಾಸ್ತೆ ಉದ್ಘಾಟನೆಗೊಂಡಿರುವ ಬಸ್ ಡಿಪೋ ಇಂದಿಗೂ ಬೀಗ ಜಡಿದುಕೊಂಡು ಬಿಕೋ ಎನ್ನುತ್ತಿದೆ.ಲೋಕಸಭಾ ಚುನಾವಣೆಗಾಗಿ ಡಿಪೋ ಉದ್ಘಾಟನೆ ಮಾಡಲಾಯಿತೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಬಸ್ ಡಿಪೋ ಉದ್ಘಾಟನೆಗೊಂಡು ೨ ತಿಂಗಳು ಗತಿಸಿದರೂ ಜನತೆ ಸುತ್ತಮುತ್ತಲಿನ ಡಿಪೋ ಬಸ್‌ಗಳನ್ನು ಅವಲಂಬಿಸುವುದು ಇನ್ನೂ ತಪ್ಪಲಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಮಳೆಗಾಲ ಪ್ರಾರಂಭವಾದರೆ ಬಸ್ ಡಿಪೋ ಆರಂಭವಾಗುವುದು ಮತ್ತಷ್ಟು ನನೆಗುದಿಗೆ ಬೀಳಲಿದೆ. ತಕ್ಷಣ ಸಂಬಂಧಿಸಿದ ಸಾರಿಗೆ ಸಂಸ್ಥೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಬಸ್ ಡಿಪೋಗೆ ಅಗತ್ಯ ಮೂಲ ಸೌಲಭ್ಯ ಒದಗಿಸಬೇಕು. ಶೀಘ್ರವಾಗಿ ಬಸ್‌ಗಳ ಸಂಚಾರ ಪ್ರಾರಂಭಿಸಿ ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.ಶೀಘ್ರ ಆರಂಭ: ಡೀಸೆಲ್ ಟ್ಯಾಂಕ್ ಅಳವಡಿಸಿಸುವುದು ಹಾಗೂ ಕಾಂಕ್ರೀಟಿಕರಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿಳಂಬವಾಗಿದ್ದು, ಇನ್ನೆರಡು ತಿಂಗಳಲ್ಲಿ ಡೀಸೆಲ್ ಟ್ಯಾಂಕ್ ನಿರ್ಮಾಣವಾಗಲಿದೆ. ಶೀಘ್ರದಲ್ಲಿ ಬಸ್‌ಗಳ ಕಾರ್ಯಾರಂಭಿಸಲಾಗುವುದು ಎಂದು ವಾಯವ್ಯ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗದ ನಿಯಂತ್ರಾಣಾಧಿಕಾರಿ ಶ್ರೀನಿವಾಸ, ಕೆ.ಎಚ್. ತಿಳಿಸಿದರು.ಸಾರ್ವಜನಿಕರಿಗೆ ತೊಂದರೆ: ಬಸ್ ಡಿಪೋ ಕಟ್ಟಡ ನಿರ್ಮಾಣ ಮಾಡಿ ಹೀಗೆ ಬಿಡುವುದಾದರೆ ತರಾತುರಿಯಲ್ಲಿ ಏಕೆ ಉದ್ಘಾಟನೆ ಮಾಡಬೇಕಿತ್ತು? ಜೂನ್ ೧ರಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಗ್ರಾಮೀಣ ಭಾಗದ ಮಕ್ಕಳಿಗೆ ಬಸ್‌ಗಳ ಕೊರತೆಯಿಂದ ತೊಂದರೆಯಾಗಲಿದೆ. ಮಳೆಗಾಲ ಪ್ರಾರಂಭವಾಗುವ ಮುನ್ನ ಡೀಸೆಲ್ ಟ್ಯಾಂಕ್ ಸೇರಿದಂತೆ ಸಕಲ ವ್ಯವಸ್ಥೆ ಮಾಡಿಕೊಂಡು ಬಸ್ ಸಂಚಾರ ಆರಂಭಿಸಬೇಕು ಎಂದು ಯುವ ಧುರೀಣ ಮಂಜುನಾಥ ಶೇಟ್ ತಿಳಿಸಿದರು.