)
ಕನ್ನಡಪ್ರಭ ವಾರ್ತೆ ಬೆಳಗಾವಿ
ಈ ಕುರಿತು ಪ್ರತಿಕ್ರಿಯಿಸಿದ ಅವರು, ದೇವಸ್ಥಾನದಲ್ಲಿ ಇಂತಹ ಯಾವುದೇ ವಿದ್ಯಮಾನ ನಡೆಯುತ್ತಿಲ್ಲ. ಅನಗತ್ಯ ವದಂತಿಗಳನ್ನು ಹರಡುವ ಮೂಲಕ ಭಕ್ತರಲ್ಲಿ ಗೊಂದಲ ಮತ್ತು ಆತಂಕ ಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಭಕ್ತರು ಇಂತಹ ಸುದ್ದಿಗಳಿಗೆ ಕಿವಿಗೊಡದೆ ಎಂದಿನಂತೆ ಭಕ್ತಿ, ಶ್ರದ್ಧೆಯಿಂದ ದೇವಸ್ಥಾನಕ್ಕೆ ಆಗಮಿಸಿ ಯಲ್ಲಮ್ಮ ದೇವಿಯ ದರ್ಶನ ಪಡೆಯಬೇಕು. ಯಾದಗಿರಿ ಹಾಗೂ ಭೀಮಾ ತೀರದ ಪ್ರದೇಶಗಳಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಸಂಬಂಧ ಕಲ್ಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಯಲ್ಲಮ್ಮ ದೇವಸ್ಥಾನದಲ್ಲಿ ಸರ್ಪದೋಷದಂತಹ ಯಾವುದೇ ಸಮಸ್ಯೆ ಇಲ್ಲ. ಈ ರೀತಿಯ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಇಂತಹ ವದಂತಿಗಳು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಲ್ಲದೆ, ಅನಗತ್ಯ ಆತಂಕಕ್ಕೂ ಕಾರಣವಾಗುತ್ತವೆ. ಹೀಗಾಗಿ ಸಾರ್ವಜನಿಕರು ಯಾವುದೇ ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸದೆ ಅದನ್ನು ನಂಬುವುದು ಅಥವಾ ಇತರರಿಗೆ ಹಂಚಿಕೊಳ್ಳುವುದು ಸರಿಯಲ್ಲ ಎಂದರು.
ಭಕ್ತರ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಿಲ್ಲ:ಯಲ್ಲಮ್ಮ ದೇವಿಯ ಮೇಲೆ ಅಪಾರ ನಂಬಿಕೆ ಹೊಂದಿರುವ ಭಕ್ತರು ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ನಿರಂತರವಾಗಿ ಆಗಮಿಸುತ್ತಿದ್ದಾರೆ. ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. ಬದಲಾಗಿ ಈ ಬಾರಿಯ ಹುಂಡಿ ಕಾಣಿಕೆ ಸಂಗ್ರಹದಲ್ಲಿಯೂ ಹೆಚ್ಚಳವಾಗಿದೆ. ದೇವಸ್ಥಾನದ ಹುಂಡಿ ಎಣಿಕೆ ಕಾರ್ಯದಲ್ಲಿ ಹೆಚ್ಚಿನ ಕಾಣಿಕೆ ಸಂಗ್ರಹವಾಗಿರುವುದು ಭಕ್ತರ ವಿಶ್ವಾಸ ಮತ್ತು ದೇವಸ್ಥಾನಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆಗೆ ಸಾಕ್ಷಿಯಾಗಿದೆ. ವದಂತಿಗಳಿಂದ ಭಕ್ತರ ಆಗಮನಕ್ಕೆ ಯಾವುದೇ ಅಡ್ಡಿಯಾಗಿಲ್ಲ ಎಂದರು.
ಯಲ್ಲಮ್ಮ ದೇವಿಯ ಮೇಲೆ ಭಕ್ತರು ಹೊಂದಿರುವ ನಂಬಿಕೆ, ಶ್ರದ್ಧೆ ಮತ್ತು ವಿಶ್ವಾಸಕ್ಕೆ ಇಂತಹ ವದಂತಿಗಳಿಂದ ಧಕ್ಕೆಯಾಗಬಾರದು. ದೇವಸ್ಥಾನದ ಕುರಿತು ಯಾವುದೇ ಅನುಮಾನಗಳಿದ್ದರೆ ಅಧಿಕೃತ ಮಾಹಿತಿ ಪಡೆದುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪ್ರತಿಯೊಂದು ಸುದ್ದಿಯನ್ನೂ ಸತ್ಯವೆಂದು ಭಾವಿಸಬಾರದು. ಭಕ್ತರು ಯಾವುದೇ ಆತಂಕವಿಲ್ಲದೆ ಎಂದಿನಂತೆ ಸವದತ್ತಿಗೆ ಆಗಮಿಸಿ ಯಲ್ಲಮ್ಮ ದೇವಿಯ ದರ್ಶನ ಪಡೆಯಬೇಕು ಎಂದು ರಾಜಶ್ರೀ ಜೈನಾಪುರೆ ಮನವಿ ಮಾಡಿದ್ದಾರೆ.