ಹೊನ್ನಾವರ: ಎಫ್‌ಒಬಿ ಡಾಕ್ಯುಮೆಂಟರಿ ಅವರ ಬ್ಯಾನರ್ ಅಡಿ ನಿರ್ಮಾಣವಾದ ದಿ ಓಷನ್ ಕನೆಕ್ಷನ್ ಎಂಬ ಕಿರುಚಿತ್ರವನ್ನು ಆನ್ಲೈನ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಕಿರುಚಿತ್ರವು, ಹೊನ್ನಾವರದ ಕಡಲಾಮೆಯ ಜೀವನಕ್ರಮ, ಮೀನುಗಾರರ ಬದುಕಿನ ಚಿತ್ರಣ ಹಾಗೂ ಹೊನ್ನಾವರದ ಪರಿಸರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹೊನ್ನಾವರ ಫೌಂಡೇಶನ್ ಸಂಸ್ಥೆಯ ಸಹಕಾರದೊಂದಿಗೆ ನಿರ್ಮಾಣವಾಗಿದೆ.
ಈ ಚಿತ್ರದ ಟ್ರೇಲರ್‌ಅನ್ನು ನಟ ರಾಜ್ ಬಿ. ಶೆಟ್ಟಿ ಅವರು ಬಿಡುಗಡೆ ಮಾಡಿದ್ದರು. ಈ ಚಿತ್ರವನ್ನು ವಿಕಾಸ್ ಬಡಿಗೇರ್ ನಿರ್ದೇಶನ ಮಾಡಿದ್ದು, ಸಂದೀಪ ಹೆಗಡೆ ಸಹ ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನ ಹಲವು ಕಡೆ ಪ್ರದರ್ಶನಗೊಂಡಿದ್ದ ಈ ಚಿತ್ರವನ್ನು ಸಾರ್ವಜನಿಕರ ಅನುಕೂಲಕ್ಕಾಗಿ, ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಸಾಕ್ಷ್ಯಚಿತ್ರವು ಮಾನವ ಪ್ರಕೃತಿ ನಡುವಿನ ಬಾಂಧವ್ಯ, ಕಡಲಾಮೆಯ ಗೂಡು ಮಾಡುವ ಜಾಗದ ಸೂಕ್ಷ್ಮ ವಿಚಾರದ ಬಗ್ಗೆ ಹಾಗೂ ಹೊನ್ನಾವರದ ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನೆರವಾಗುತ್ತದೆ.ಸಾಕ್ಷ್ಯಚಿತ್ರದಲ್ಲಿ ಮೀನುಗಾರರ ಮುಖಂಡರಾದ, ರಾಜೇಶ್ ತಾಂಡೆಲ್ ಅವರು, ಮೀನುಗಾರರ ಜೀವನಶೈಲಿ, ಹೊನ್ನಾವರದಲ್ಲಿ ಮೀನುಗಾರಿಕೆಯ ಜಾಗ, ಮೀನುಗಾರಿಕೆಯ ಕ್ರಮ ಹಾಗೂ ಮೀನುಗಾರರ ಬದುಕಿನ ಬಗ್ಗೆ ವಿವರಣೆ ನೀಡಿದ್ದಾರೆ. ಪತ್ರಕರ್ತರು ಹಾಗೂ ಸಾಮಾಜಿಕ ಅಂಕಣಕಾರರಾದ ನಾಗೇಶ್ ಹೆಗಡೆ ಅವರು ಹೊನ್ನಾವರದ ಜನರು ಹಾಗೂ ಅಲ್ಲಿನ ಪರಿಸರದ ಬಗ್ಗೆ ವಿವರಿಸಿದ್ದಾರೆ. ಯಕ್ಷಗಾನ ಹಾಗೂ ತಾಳಮದ್ದಲೆ ಮತ್ತದರ ಮಹತ್ವದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅದಲ್ಲದೆ ಕಡಲಾಮೆಯ ಸಂತಾನೋತ್ಪತ್ತಿಯ ಬಗ್ಗೆ ಅರಿವು ಮೂಡಿಸಿದ್ದಾರೆ.ಕಡಲ ತಜ್ಞರಾದ ಪ್ರಕಾಶ ಮೇಸ್ತ ಅವರು ಕಡಲಾಮೆಯ ಜೀವನ ಕ್ರಮದ ಬಗ್ಗೆ ರೋಚಕವಾಗಿ ವಿವರಣೆ ನೀಡಿದ್ದಾರೆ.ಶಿರಸಿ ಜೀವಜಲ ಕಾರ್ಯಪಡೆ ಕಾರ್ಯಕ್ಕೆ ಶ್ಲಾಘನೆ
ಶಿರಸಿ: ಕೀನ್ಯಾ, ಬಾಂಗ್ಲಾದೇಶ, ಭಾರತ ಒಳಗೊಂಡ ಅಂತಾರಾಷ್ಟ್ರೀಯ ಮಟ್ಟದ ಜೀವಜಲ, ನೆಲ ಉಳಿಸುವ ಅಭಿಯಾನದ ಮುಕ್ತ ಕಾರ್ಯಾಗಾರದಲ್ಲಿ ಶಿರಸಿಯ ಜೀವಜಲ ಕಾರ್ಯಪಡೆ ಕಾರ್ಯ ಶ್ಲಾಘನೆಗೆ ವ್ಯಕ್ತವಾಗಿದೆ.ಮೂರು ದಿನಗಳ ಕಾಲ ನಡೆದ ಫೌಂಡೇಶನ್ ಫಾರ್ ಇಕಾಲೊಜಿಕಲ್ ಸೆಕ್ಯುರಿಟಿ ಸಂಸ್ಥೆ ನಡೆಸಿದ ವೆಬಿನಾರನಲ್ಲಿ ಶಿರಸಿ ಜೀವಜಲ ಕಾರ್ಯಪಡೆ ಜಲಕೊಯ್ಲಿನ ಕುರಿತು ನಡೆಸಿದ ಆಂದೋಲನ ವಿವಿಧ ದೇಶ, ರಾಜ್ಯಗಳ ಪರಿಸರ ಕಾರ್ಯಕರ್ತರಿಂದ ಬಣ್ಣನೆಗೆ ಒಳಗಾಗಿದೆ.ಒಬ್ಬರ ಸಾಧನೆ ಇನ್ನೊಬ್ಬರಿಗೆ ಪ್ರೇರಣೆ ಆಗಲಿ ಎಂಬ ಆಶಯದಲ್ಲಿ ನಡೆಸಲಾದ ಮಾಹಿತಿ ಕಾರ್ಯಾಗಾರದಲ್ಲಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ವಿಡಿಯೋ ದಾಖಲೆ ಸಹಿತ ಮಾಹಿತಿ ನೀಡಿದರು.ಅಭಿಯಂತರ ಅನಿಲ್ ನಾಯಕ ಮಾತನಾಡಿ, ನಿಸ್ವಾರ್ಥ ಭಾವದಿಂದ ನಮ್ಮ ಕಾರ್ಯಕ್ಕೆ ಹಲವರು ಕೈಜೋಡಿಸಿದ್ದಾರೆ ಎಂದರು.
ಈ ವೇಳೆ ವೈಶಾಲಿ ವಿ.ಪಿ. ಹೆಗಡೆ, ವಿ.ಎಂ. ಭಟ್ಟ, ಎಂ.ಎಂ. ಭಟ್ಟ ಕಾರೆಕೊಪ್ಪ, ನವೀನ ಶೆಟ್ಟಿ, ಮಂಜು ಮೊಗೇರ, ಪ್ರಕಾಶ ಹೆಗಡೆ, ಕೆ.ವಿ. ಭಟ್ಟ, ಕಮಲಾಕರ ಭಟ್ಟ, ಹೇಮಾ ಹೆಬ್ಬಾರ್, ಪ್ರಕಾಶ ಲಂಬಿ ಮತ್ತಿತರರು ಇದ್ದರು.