ಬೆಂಗಳೂರು : ‘ನಾನು ಅವಳಿ ಮಕ್ಕಳನ್ನು ಬರಮಾಡಿಕೊಳ್ಳಲು ಸಿದ್ಧಳಾಗಿದ್ದೆ. ದುರಾದೃಷ್ಟವಶಾತ್ ಒಂದು ಮಗು ಉಳಿಯಲಿಲ್ಲ. ಆ ನೋವನ್ನು ಸಹಿಸುವುದು ಇಂದಿಗೂ ನನಗೆ ಕಷ್ಟವಾಗುತ್ತಿದೆ. ಹಾಗೆ ಕಣ್ಮರೆಯಾದದ್ದು ಹೆಣ್ಣುಮಗು.’
- ಇವು ನಟಿ ಭಾವನಾ ರಾಮಣ್ಣ ಅವರ ನೋವಿನ ನುಡಿಗಳು.
ನಲವತ್ತರ ಹರೆಯ ದಾಟಿದ ಮೇಲೆ ಐವಿಎಫ್ ಮೂಲಕ ಗರ್ಭ ಧರಿಸಿದ್ದ ಭಾವನಾ, ಅವಳಿ ಮಕ್ಕಳ ತಾಯಿಯಾಗುವ ಸಂಭ್ರಮದಲ್ಲಿದ್ದರು. ಆದರೆ ಅವಧಿಗೂ ಮೊದಲೇ ರಕ್ತಸ್ರಾವ ಆರಂಭವಾಗಿತ್ತು. ಆಸ್ಪತ್ರೆಗೆ ತೆರಳಿದರು. ತಾಯಿಯಿಂದ ಮಗುವಿಗೆ ರಕ್ತ ಪೂರೈಕೆಯಾಗುವ ಮಗುವಿನ ಹೊಕ್ಕುಳ ಬಳ್ಳಿಯಲ್ಲಿ ಸಮಸ್ಯೆಯಾಗಿ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಆಘಾತಕರ ಸನ್ನಿವೇಶದಲ್ಲಿ ಭಾವನಾ ಅವಳಿಗಳಲ್ಲಿ ಒಂದು ಹೆಣ್ಣು ಮಗುವನ್ನು ಕಳೆದುಕೊಳ್ಳಬೇಕಾಯಿತು. ಆಗಸ್ಟ್ 20ರಂದು ಶಸ್ತ್ರಚಿಕಿತ್ಸೆ ಮೂಲಕ ಇನ್ನೊಂದು ಹೆಣ್ಣು ಮಗು ಜನಿಸಿದ್ದು, ಅದು ಆರೋಗ್ಯದಿಂದಿದೆ.
ಆ ಸನ್ನಿವೇಶವನ್ನು ವಿವರಿಸಿದ ಭಾವನಾ, ‘ನನ್ನ ಸೀಮಂತದವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ ಆಮೇಲೆ ಹೆಚ್ಚು ಹೊತ್ತು ಕೂರಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ ಕೊಂಚ ರಕ್ತಸ್ರಾವ ಶುರುವಾಯಿತು. ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ತೆರಳಿದೆ. ಆ ವೈದ್ಯರು ಪರೀಕ್ಷಿಸಿ, ನೀವು ಟೈಮ್ ಬಾಂಬ್ ಮೇಲೆ ಕೂತಿದ್ದೀರಿ, ಮುಂದಿನ ಕೆಲವು ಗಂಟೆಗಳು ಕ್ರಿಟಿಕಲ್ ಆಗಿರಲಿವೆ ಎಂದರು. ಆ ಹೊತ್ತಿಗೆ ತಾಯಿಯಿಂದ ಮಗುವಿಗೆ ಹೋಗುವ ರಕ್ತ ಪೂರೈಕೆಯಲ್ಲೇ ಸಮಸ್ಯೆಯಾಗಿ ಪರಿಸ್ಥಿತಿ ಅಪಾಯಕರ ಸ್ಥಿತಿ ಮುಟ್ಟಿತ್ತು. ನಾನು ನೋಡುತ್ತಿರುವಂತೇ ಒಂದು ಮಗುವಿನ ಹೃದಯ ಬಡಿತ ಶೇ. 50 ರಷ್ಟಕ್ಕೆ ಇಳಿದು ಹೋಗಿತ್ತು. ತೂಕವೂ ಇಳಿದಿತ್ತು. ಮಗುವಿನ ಆರೋಗ್ಯ ಸುಧಾರಿಸಲಿ ಅಂತ ಪ್ರಾರ್ಥಿಸುತ್ತಲೇ ಇದ್ದೆವು. ಆದರೆ, ಸುಧಾರಿಸಲೇ ಇಲ್ಲ. ಆಗ ನಾನು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಪುಣ್ಯಕ್ಕೆ ಇನ್ನೊಂದು ಮಗು ಆರೋಗ್ಯವಾಗಿತ್ತು’ ಎಂದಿದ್ದಾರೆ.
‘ಮಾನಿಟರ್‌ನಲ್ಲಿ ಒಂದು ಮಗುವಿನ ಹೃದಯ ಬಡಿತ ಸೊನ್ನೆಯತ್ತ ಕುಸಿಯುತ್ತಿರುವುದನ್ನು ನೋಡಿದಾಗ ನನಗಾದ ನೋವು, ಶಾಕ್ ಅನ್ನು ಹೇಗೆ ವಿವರಿಸಲಿ.. ಮಗಳನ್ನು ಕಳೆದುಕೊಂಡ ನೋವು ಸದಾ ನನ್ನನ್ನು ಕಾಡುತ್ತಿರುತ್ತದೆ. ಅವಳಿ ಮಕ್ಕಳನ್ನು ಮಡಿಲು ತುಂಬಿಕೊಳ್ಳಲು ಬಹಳ ಕಾದಿದ್ದೆ. ಈಗ ಒಂದು ಮಗುವನ್ನು ಕಳೆದುಕೊಂಡಿದ್ದಕ್ಕೆ ಅಳುವುದೋ, ಇನ್ನೊಂದು ಮಗು ಆರೋಗ್ಯವಾಗಿ ಜನಿಸಿದ್ದಕ್ಕೆ ಖುಷಿ ಪಡುವುದೋ ತಿಳಿಯುತ್ತಿಲ್ಲ’ ಎಂದು ಭಾವುಕವಾಗಿ ನುಡಿದಿದ್ದಾರೆ. ‘ನನ್ನ ಅಜ್ಜಿಯ ಹೆಸರು ರುಕ್ಮಿಣಿ. ಮಗಳಿಗೂ ಅದೇ ಹೆಸರನ್ನು ಇಟ್ಟಿದ್ದೇನೆ. ನನ್ನ ಮಗಳ ಪೂರ್ಣ ಹೆಸರು ರುಕ್ಮಿಣಿ ಭಾವನಾ ರಾಮಣ್ಣ. ಈಗ ಮಗಳ ಜೊತೆಗೆ ನಾನು ಮನೆಗೆ ಬಂದಿದ್ದೇನೆ’ ಎಂದೂ ಹೇಳಿದ್ದಾರೆ.