ದೇಶದ ಜಿಡಿಪಿ ಆರ್ಥಿಕತೆಗೆ ಛಾಯಾಗ್ರಹಣ ಕ್ಷೇತ್ರ ಬೆನ್ನೆಲುಬಾಗಿದೆ-ಡಾ. ಮಂಜುನಾಥ

KannadaprabhaNewsNetwork | Published : Oct 7, 2024 1:32 AM

ಸಾರಾಂಶ

ದೇಶದ ಜಿಡಿಪಿ ಆರ್ಥಿಕತೆಗೆ ಛಾಯಾಗ್ರಹಣ ಕ್ಷೇತ್ರ ಬೆನ್ನೆಲುಬಾಗಿದೆ. ಭಾರತದಲ್ಲಿ 4 ಲಕ್ಷಕ್ಕೂ ಅಧಿಕ ವೃತ್ತಿನಿರತ ಛಾಯಾಗ್ರಾಹಕರು ಇದ್ದು, 40 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ್ದಾರೆ. ಪ್ರತಿವರ್ಷ 132 ಸಾವಿರ ಕೋಟಿ ದೇಣಿಗೆಯನ್ನು ಛಾಯಾಗ್ರಹಣ ಕ್ಷೇತ್ರ ಭಾರತಕ್ಕೆ ನೀಡುತ್ತಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಛಾಯಾಗ್ರಾಹಕ ಡಾ. ಎಚ್.ಬಿ. ಮಂಜುನಾಥ ಹೇಳಿದರು.

ಹಾವೇರಿ: ದೇಶದ ಜಿಡಿಪಿ ಆರ್ಥಿಕತೆಗೆ ಛಾಯಾಗ್ರಹಣ ಕ್ಷೇತ್ರ ಬೆನ್ನೆಲುಬಾಗಿದೆ. ಭಾರತದಲ್ಲಿ 4 ಲಕ್ಷಕ್ಕೂ ಅಧಿಕ ವೃತ್ತಿನಿರತ ಛಾಯಾಗ್ರಾಹಕರು ಇದ್ದು, 40 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ್ದಾರೆ. ಪ್ರತಿವರ್ಷ 132 ಸಾವಿರ ಕೋಟಿ ದೇಣಿಗೆಯನ್ನು ಛಾಯಾಗ್ರಹಣ ಕ್ಷೇತ್ರ ಭಾರತಕ್ಕೆ ನೀಡುತ್ತಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಛಾಯಾಗ್ರಾಹಕ ಡಾ. ಎಚ್.ಬಿ. ಮಂಜುನಾಥ ಹೇಳಿದರು.ನಗರದ ಸಜ್ಜನರ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಹಾಗೂ ವಿಡಿಯೋಗ್ರಾಫರ್ ಸಂಘ ಆಯೋಜಿಸಿದ್ದ 22ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಛಾಯಾಗ್ರಹಣ ಉದ್ದಿಮೆಯಿಂದ ಪ್ರತಿವರ್ಷ 132 ಸಾವಿರ ಕೋಟಿ ರು. ಭಾರತದ ಆರ್ಥಿಕತೆಗೆ ಸೇರುತ್ತದೆ. ಇತರೆ ದೇಶಗಳ ಜಿಡಿಪಿಗೆ ಹೋಲಿಕೆ ಮಾಡಿದರೆ ಭಾರತ 2025ರ ಹೊತ್ತಿಗೆ 5 ಟ್ರಿಲಿಯನ್ ದೇಣಿಗೆ ಸಂಗ್ರಹಿಸುವ ಗುರಿ ಹೊಂದಿದೆ. ಛಾಯಾಗ್ರಹಣ ಉದ್ಯಮ ದೇಶದ ಆರ್ಥಿಕ ಶಕ್ತಿಯ ಬೆನ್ನೆಲುಬು ಆಗಿದೆ. ಛಾಯಾಗ್ರಹಣ ವೃತ್ತಿ ಸಾಮಾನ್ಯ ವೃತ್ತಿಯಲ್ಲ. ಅತ್ಯಂತ ಪ್ರಾಮಾಣಿಕ ಮತ್ತು ಪವಿತ್ರ ವೃತ್ತಿಯಾಗಿದೆ. ಮುಂದಿನ ದಿನಗಳಲ್ಲಿ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸುವ ಅಗತ್ಯತೆ ಇದ್ದು, ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಬೇಕಿದೆ. ಛಾಯಾಗ್ರಾಹಕರ ವೃತ್ತಿಗೆ ಸಿಗಬೇಕಾದ ಎಲ್ಲ ಸೌಲಭ್ಯವನ್ನು ಸರಕಾರ ಒದಗಿಸಬೇಕು ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಪೋಟೋಗ್ರಫಿ ಕ್ಷಣಕ್ಷಣಕ್ಕೂ ಬದಲಾವಣೆ ಹೊಂದುತ್ತಿದ್ದು, ವೃತ್ತಿನಿರತ ಛಾಯಾಗ್ರಾಹಕರು ತಮ್ಮ ವೃತ್ತಿಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಇಂದಿನ ಮೊಬೈಲ್ ಯುಗದಲ್ಲಿಯೂ ಕ್ಯಾಮೆರಾ ಛಾಯಾಗ್ರಹಣ ತನ್ನದೇಯಾದ ಡಿಮ್ಯಾಂಡ್ ಹೊಂದಿದೆ. ಸಂಘಟನೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಇನ್ನೂ ಹೆಚ್ಚಿನ ಕೆಲಸ ನಿರ್ವಹಿಸಿ ಬೆಳ್ಳಿ ಮಹೋತ್ಸವ ಆಚರಿಸಬೇಕು. ಈಗಾಗಲೇ ಸಂಘದ ಕಾರ್ಯಚಟುವಟಿಕೆ ನಡೆಸಲು ಜಾಗೆ ಗುರುತಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 5 ಲಕ್ಷ ರು.ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವೃತ್ತಿನಿರತ ಛಾಯಾಗ್ರಾಹಕರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ತಾಲೂಕಾಧ್ಯಕ್ಷ ಶಂಭುಗೌಡ ಅಂದಾನಿಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ರಿತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಸಿದ್ದಲಿಂಗಪ್ಪ ಹಳ್ಳಿಕೇರಿ, ಉಪಾಧ್ಯಕ್ಷ ಬಸವರಾಜ ಚಾವಡಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರಿ ಸೇರಿದಂತೆ ಮತ್ತಿತರರು ಇದ್ದರು. ಸಮಷ್ಟಿ ರಿತ್ತಿ ಪ್ರಾರ್ಥಿಸಿದರು. ಶಿವಬಸವ ಬಣಕಾರ ಸ್ವಾಗತಗೀತೆ ಹಾಡಿದರು. ಮಂಜುನಾಥ ಸಿದ್ದಗೂಳಪ್ಪನವರ ಸ್ವಾಗತಿಸಿದರು. ನಾಗೇಶ ಬಾರ್ಕಿ ನಿರೂಪಿಸಿದರು.

Share this article