ಹೊಸಕೋಟೆ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ವಿಶ್ವಕರ್ಮ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಧಕ್ಕದಿರುವುದು ಬೇಸರದ ಸಂಗತಿ ಎಂದು ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಾಚಾರಿ ಹೇಳಿದರು.
ವಿಶ್ವಕರ್ಮ ಸಮಾಜದ ಅಭಿವೃದ್ಧಿಯಾಗಬೇಕಾದರೆ ಸಮುದಾಯದಲ್ಲಿ ಹೊಂದಾಣಿಕೆ ಇರಬೇಕು. ದೇಶಕ್ಕೆ 5 ಸಾವಿರ ವರ್ಷಗಳ ಇತಿಹಾಸ ಇದ್ದು ವಿಶ್ವಕರ್ಮ ಸಮುದಾಯಕ್ಕೆ ವಿಶೇಷ ಸ್ಥಾನಮಾನ ಇದೆ. ೭೫ ವರ್ಷಗಳಿಂದ ದೇಶದಲ್ಲಿ ಇಬ್ಬರು ಶಾಸಕರನ್ನು ಸೃಷ್ಟಿ ಮಾಡುವ ಕೆಲಸ ನಮ್ಮ ಸಮುದಾಯದಿಂದ ಆಗಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯ ಸ್ಥಾನಮಾನಕ್ಕಾಗಿ ಹೋರಾಡಬೇಕಿದೆ ಎಂದರು.
ಕಂದಾಯ ಇಲಾಖೆ ನಿವೃತ್ತ ಜಂಟಿ ಕಾರ್ಯದರ್ಶಿ ಮಾಳಿಗಾಚಾರ್ ಮಾತನಾಡಿ, ಸಮುದಾಯ ಕುಲ ಕಸುಬಿನ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ರಾಜಕೀಯವಾಗಿ ಅಧಿಕಾರ ಇದ್ದರೆ, ಸಮಾಜಕ್ಕೆ ಏನಾದರು ಮಾಡಬಹುದು ಎಂದು ಹೇಳಿದರು.ಟಿಎಪಿಸಿಎಂಎಸ್ ನಿರ್ದೇಶಕ ಭೋದನಹೊಸಹಳ್ಳಿ ಆನಂದಾಚಾರಿ ಮಾತನಾಡಿ, ವಿಶ್ವಕರ್ಮ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಕೇವಲ ನಾಲ್ಕು ಗೋಡೆ ಮಧ್ಯೆ ಆಚರಣೆ ಮಾಡಿ ಬಿಡುವುದು ಬೇಡ ಎನ್ನುವ ದೃಷ್ಟಿಯಿಂದ ವಿಜೃಂಭಣೆಯಿಂದ ತಾಲೂಕಿನ ಸಮುದಾಯವನ್ನು ಒಟ್ಟಿಗೆ ಸೇರಿಸಿ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಸಕ ಶರತ್ ಬಚ್ಚೇಗೌಡ, ಶ್ರೀ ಗಣೇಶ್ ಮಹಾ ಸ್ವಾಮೀಜಿ, ಶ್ರೀ ಕಾಶಿ ವಿಶ್ವನಾಥ ಆಚಾರಿ, ಗೋವಿಂದಮ್ಮ, ವಿನಾಯಕ್ ಆಚಾರಿ, ಸುರೇಶ್ ಆಚಾರಿ, ಇದ್ದರು.