ರಾಜ್ಯದ ಬಡವರ ಬದುಕು ಹಸನವಾಗಿದೆ । ಪ್ರಧಾನಿಗೆ ಈಗ ಸಂವಿಧಾನದ ಬಗ್ಗೆ ಕಾಳಜಿ ಬಂದಿದೆ
ಹತ್ತು ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಏನು ಮಾಡಲು ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಬಡವರ ಬಡತನ ನೀಗಿದೆ ಮತ್ತು ಬಡವರು ಸಹ ಸಂಭ್ರಮದಿಂದ ಹಬ್ಬ ಮಾಡುವಂತಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ನಾಮಪತ್ರ ಸಲ್ಲಿಸುವ ಕುರಿತು ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಚುನಾವಣೆಗೆ ಮುನ್ನ ಘೋಷಣೆ ಮಾಡಿದ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಕೋಟ್ಯಂತರ ಬಡವರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ಕುಟುಂಬದ ಒಡತಿಗೆ ಗೃಹ ಲಕ್ಷ್ಮಿ, ಮನೆ ಬೆಳಗಲು ಗೃಹಜ್ಯೋತಿ, ಬಸ್ಸಿನಲ್ಲಿ ಉಚಿತವಾಗಿ ಓಡಾಡಲು ಶಕ್ತಿ ಯೋಜನೆ, ಅನ್ನಭಾಗ್ಯ ಹಾಗೂ ಯುವ ನಿಧಿಯನ್ನು ಜಾರಿ ಮಾಡುವ ಮೂಲಕ ಪ್ರತಿ ಕುಟುಂಬಕ್ಕೂ ನಿಗದಿತ ಆದಾಯ ಬರುವಂತೆ ಆಗಿದೆ ಎಂದರು.ಆದರೆ, ಇದನ್ನು ಸಹಿಸಿಕೊಳ್ಳಲು ಆಗದ ಬಿಜೆಪಿಯವರು ರಾಜ್ಯ ದಿವಾಳಿಯಾಗುತ್ತದೆ ಎಂದು ಬೊಬ್ಬೆ ಹೊಡೆದರು ಎಂದು ಕಿಡಿಕಾರಿದರು.
ಭಾರತ್ ಮಾತಾ ಕೀ ಜೈ ಎಂದು ಬಿಜೆಪಿಯವರು ಈಗ ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ರಿಟಿಷರ ಎದುರೇ ಭಾರತ್ ಮಾತಾಕೀ ಜೈ ಎಂದಿದೆ ಎನ್ನುವುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಲಿ ಎಂದು ಕುಟುಕಿದರು.
ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ದೇಶ ಭಕ್ತಿ ಎನ್ನುವುದು ಬಿಜೆಪಿಗೆ ಗುತ್ತಿಗೆ ನೀಡಿಲ್ಲ. ನಾವು ದೇಶಭಕ್ತರೇ ಇದ್ದೇವೆ. ಸ್ವಾತಂತ್ರ್ಯ ಬಂದ ಮೇಲೆ ಬಿಜೆಪಿಯವರು ದೇಶಭಕ್ತರಾಗಿದ್ದಾರೆ. ಆದರೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರುವ ನಿಜವಾದ ದೇಶಭಕ್ತ ಪಕ್ಷ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸಿಗರು ಎಂದು ಜೋರಾಗಿ ಭಾರತ್ ಮಾತಾ ಕೀ ಜೈ ಘೋಷಣೆ ಹಾಕಿ, ಕಾರ್ಯಕರ್ತರಿಂದಲೂ ಹಾಕಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಬಾದರ್ಲಿ ಹಂಪನಗೌಡ, ಬಾದರ್ಲಿ ಬಸನಗೌಡ, ಶರಣೇಗೌಡ ಪಾಟೀಲ್, ರಾಘವೇಂದ್ರ ಹಿಟ್ನಾಳ, ಬಸನಗೌಡ ತುರವಿಹಾಳ, ಬಿ.ಎಂ. ನಾಗರಾಜ, ಎಚ್.ಆರ್. ಶ್ರೀನಾಥ, ಕೆ. ಬಸವರಾಜ ಹಿಟ್ನಾಳ, ಮಲ್ಲಿಕಾರ್ಜುನ ನಾಗಪ್ಪ ಮೊದಲಾದವರು ಇದ್ದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ನಾಮಪತ್ರ ಸಲ್ಲಿಸಲು ಕೊಪ್ಪಳ ನಗರದ ಶಿರಸಪ್ಪಯ್ಯನಮಠದಿಂದ ಬೃಹತ್ ಮೆರವಣಿಗೆ ನಡೆಸಲಾಯಿತು. ಜವಾಹರ ರಸ್ತೆಯುದ್ದಕ್ಕೂ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರ ನಿವಾಸಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು. ಇದಾದ ಮೇಲೆ ಶ್ರೀ ಗವಿಮಠಕ್ಕೂ ಭೇಟಿ ನೀಡಿ, ಪೂಜೆ ಸಲ್ಲಿಸಿ, ನಂತರ ಮೆರವಣಿಗೆಯಲ್ಲಿ ತೆರಳಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.