-ಗೊಬ್ಬೂರ ಕೆರೆಯಲ್ಲಿನ ಹೂಳಿನಿಂದ ನಿಲ್ಲದೆ ಹರಿಯುತ್ತಿದೆ ಜೀವ ಜಲ । ಕೆರೆ ಹೂಳಿನಿಂದಾಗಿ ಕಡಿಮೆಯಾಗುತ್ತಿರುವ ನೀರಿನ ಸಂಗ್ರಹ ಸಾಮರ್ಥ್ಯ
ರಾಹುಲ್ ಜೀ ದೊಡ್ಮನಿ
ಕನ್ನಡಪ್ರಭ ವಾರ್ತೆ ಚವಡಾಪುರಅಫಜಲ್ಪುರ ತಾಲೂಕಿನಯೇ ದೊಡ್ಡದಾಗಿರುವ ಗೊಬ್ಬೂರ ಕೆರೆಯ ಹೂಳೆತ್ತುವ ಕಾಮಗಾರಿಯಲ್ಲಿನ ಅವೈಜ್ಞಾನಿಕ ಪದ್ಧತಿ ಅಳವಡಿಕೆಯಿಂದ ನೀರು ಸಂಗ್ರಹವಾಗದೆ ವ್ಯರ್ಥ ಪೋಲಾಗುತ್ತಿದೆ. ಇದರಿಂದಾಗಿ ಈ ಮುಂಗಾರಿನ ನೀರು ಹಿಡಿದಿಟ್ಟುಕೊಳ್ಳುವುದು ಅಸಾಧ್ಯ ಎನ್ನುವಂತಾಗಿದೆ.
ಜೀವ ಜಲ: ಗೊಬ್ಬೂರ ಕೆರೆಯಲ್ಲಿ ಮುಂಗಾರು ಮಳೆಯ ಕಾರಣದಿಂದ ನೀರು ಸಂಗ್ರಹಗೊಳ್ಳುತ್ತಿದೆ. ಆದರೆ, ಕೆರೆಯಲ್ಲಿನ ಹೂಳಿನ ಸಮಸ್ಯೆಯಿಂದ ನೀರು ನಿಲ್ಲದೆ ಹರಿದು ಹೋಗುತ್ತಿದೆ. ಇದರಿಂದಾಗಿ ಕೆರೆಯಲ್ಲಿ ನೀರಿನ ಸಂಗ್ರಹಣೆ ಸಾಮರ್ಥ್ಯ ಕಡಿಮೆಯಾಗಿದೆ, ನೀರಿನ ಗುಣಮಟ್ಟದಲ್ಲಿ ಕುಸಿತ ಕಾಣುತ್ತಿದೆ, ಮೀನುಗಾರಿಕೆ ಮತ್ತು ಜಲಚರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಲಿದೆ. ಕೃಷಿ ಉತ್ಪಾದನೆಯ ಮೇಲೂ ಕೆಟ್ಟ ಪರಿಣಾಮ ಬೀರಲಿದೆ, ವ್ಯಾಪಕ ಮಳೆಯಾದರೆ ನೆರೆ ಸಮಸ್ಯೆಯೂ ಉಂಟಾಗಲಿದೆ. ಮಳೆ ಕೊರತೆಯಾದರೆ ಅಂತರ್ಜಲ ವೃದ್ಧಿಗೂ ಕುತ್ತು ಬರಲಿದೆ.
ಆದರೆ, ವರವಾಗಬೇಕಿದ್ದ ನರೇಗಾ ಶಾಪವಾಗಿ ಪರಿಣಮಿಸಿದ್ದು, ಕಾಟಾಚಾರದ ಹೂಳೆತ್ತುವ ಕೆಲಸದಿಂದಾಗಿ ಕೆರೆಯಲ್ಲಿನ ಹೂಳು ಪುನಃ ಕೆರೆಯ ಪಾಲಾಗುವಂತಾಗಿದೆ. ನರೇಗಾದಡಿ ಹೂಳೆತ್ತುವ ಕೆಲಸಕ್ಕಾಗಿ ತೋಡಿದ ಗುಂಡಿಗಳು ಮತ್ತು ಗುಂಡಿ ತೋಡಿದ ಮಣ್ಣು ಗುಂಡಿಯ ಪಕ್ಕದಲ್ಲೇ ಹಾಕಿದ್ದಾರೆ. ಮಳೆ ಬಂದು ಎಲ್ಲಾ ಮಣ್ಣು ಮತ್ತೆ ಗುಂಡಿಗಳಲ್ಲಿ ಭರ್ತಿಯಾಗಿ ಪುನಃ ಕೆರೆಯಲ್ಲಿನ ಹೂಳು ಕೆರೆಯಲ್ಲೇ ಉಳಿಯುವಂತಾಗಿದೆ. ಹೀಗಾಗಿ ಹೂಳು ಹೊರತೆಗೆದು ವರವಾಗಬೇಕಿದ್ದ ನರೇಗಾ ಸಂಬಂಧ ಪಟ್ಟವರ ಬೇಜವಾಬ್ದಾರಿ, ನಿಷ್ಕಾಳಜಿಯ ಪರಿಣಾಮದಿಂದ ಶಾಪವಾಗಿ ಪರಿಣಮಿಸಿದೆ.
ಹೀಗಾಗಿ ಸಂಬಂಧ ಪಟ್ಟ ಇಲಾಖೆಯವರು, ಗ್ರಾಮ ಪಂಚಾಯಿತಿಯವರು, ಜನಪ್ರತಿನಿಧಿಗಳು ಎಚ್ಚೆತ್ತು ತಾಲೂಕಿನ ದೊಡ್ಡ ಕೆರೆಯ ರಕ್ಷಣೆಗೆ ಮುಂದಾಗಬೇಕಿದೆ.