ಧರ್ಮದ ಆಚರಣೆ ಉಳಿದಿರುವುದು ಜೈನ ಧರ್ಮದಲ್ಲಿ ಮಾತ್ರ-ಸ್ವಾಮೀಜಿ

KannadaprabhaNewsNetwork |  
Published : Sep 18, 2026, 02:00 AM IST
ಹಾವೇರಿಯ ಬಸ್ತಿ ಓಣಿಯಲ್ಲಿರುವ ಶ್ರೀ ನೇಮಿನಾಥ ಭವನದಲ್ಲಿ ದಶಲಕ್ಷಣ ಮಹಾಪರ್ವ ಕಾರ್ಯಕ್ರಮದಲ್ಲಿ ಹರಸೂರು ಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಧರ್ಮದ ಆಚರಣೆ ಉಳಿದಿರುವುದು ಜೈನ ಧರ್ಮದಲ್ಲಿ ಮಾತ್ರ. ಜೈನ ಧರ್ಮದಲ್ಲಿ ಕಠಿಣ ಧರ್ಮಾಚರಣೆಗಳಿವೆ. ಸಲ್ಲೇಖನ ವ್ರತನಿಯಮದಲ್ಲಿ ಒಂದೊಂದು ಆಹಾರ ಪದಾರ್ಥ ತ್ಯಾಗಮಾಡಿ, ಪ್ರಾಣತ್ಯಾಗ ಮಾಡುವುದು ಜೈನ ಧರ್ಮದಲ್ಲಿ ಮಾತ್ರ ಎಂದು ಹರಸೂರು ಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಹಾವೇರಿ: ಧರ್ಮದ ಆಚರಣೆ ಉಳಿದಿರುವುದು ಜೈನ ಧರ್ಮದಲ್ಲಿ ಮಾತ್ರ. ಜೈನ ಧರ್ಮದಲ್ಲಿ ಕಠಿಣ ಧರ್ಮಾಚರಣೆಗಳಿವೆ. ಸಲ್ಲೇಖನ ವ್ರತನಿಯಮದಲ್ಲಿ ಒಂದೊಂದು ಆಹಾರ ಪದಾರ್ಥ ತ್ಯಾಗಮಾಡಿ, ಪ್ರಾಣತ್ಯಾಗ ಮಾಡುವುದು ಜೈನ ಧರ್ಮದಲ್ಲಿ ಮಾತ್ರ ಎಂದು ಹರಸೂರು ಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ನಗರದ ಬಸ್ತಿ ಓಣಿಯಲ್ಲಿರುವ ನೇಮಿನಾಥ ಭವನದಲ್ಲಿ ಹಾವೇರಿ ಭಗವಾನ ಶ್ರೀ 1008 ನೇಮಿನಾಥ ದಿಗಂಬರಜೈನ ಮಂದಿರಕಮಿಟಿ, ಪಪೂ. ಮುನಿಶ್ರೀ 108 ಸಂಭವನಂದಿ ಮಹಾರಾಜಟ್ರಸ್ಟ್, ರತ್ನತ್ರಯ ಮಹಿಳಾ ಸಮಾಜ, ಭಾರತೀಯ ಜೈನ ಮಿಲನ್ ಹಾಗೂ ಸಮ್ಯಕ್‌ಜ್ಞಾನಜಿನಧರ್ಮ ಪ್ರಭಾವನಾ ಯುವಕ ಸಂಘದ ಸಹಯೋಗದಲ್ಲಿ ಜರುಗಿದ ದಶಲಕ್ಷಣ ಮಹಾಪರ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯರಲ್ಲಿ ನಾಲ್ಕು ವರ್ಗಗಳಿವೆ. ಮೊದಲನೆಯದು ಮನುಷ್ಯ ವರ್ಗ, ಇದರಲ್ಲಿ ಅವರು ಕಟ್ಟೆಮೇಲೆ ಕುಳಿತು ಅದು-ಇದು ಮಾತನಾಡಿ, ಕಾಲಹರಣ ಮಾಡುವರು. ಎರಡನೇ ವರ್ಗ ರಾಕ್ಷಸಮಾನವರು, ಇವರು ತಾವು ಅನುಭವಿಸಿದ ಕೆಡಕನ್ನು ಬೇರೆಯವರು ಅನುಭವಿಸುವಂತೆ ಮಾಡುತ್ತಾರೆ. ಮೂರನೇಯವರು ಮಹಾಮಾನವರು, ಇವರು ದಾನ-ಧರ್ಮಗಳಲ್ಲಿ ತೊಡಗಿರುತ್ತಾರೆ ಹಾಗೂ ನಾಲ್ಕನೇಯವರು ದೇವಮಾನವರು, ಇವರು ಜಗವೆಲ್ಲ ನಗುತಿರಲಿ, ಜಗದಳುವು ನನಗಿರಲಿ ಎನ್ನುವ ಸ್ವಭಾವ ಹೊಂದಿರುತ್ತಾರೆ ಎಂದರು.

ಇಂದು ಎಲ್ಲ ವ್ಯಾಪಾರಿಕರಣವಾಗಿದೆ. ಎಲ್ಲರಲ್ಲೂ ಸ್ವಾರ್ಥಗುಣ ಸೇರಿಕೊಂಡಿದೆ. ಸ್ವಾರ್ಥ ಬಿಟ್ಟು ನಿಸ್ವಾರ್ಥ ಸೇವಾ ಗುಣ ಬೆಳೆಸಿಕೊಂಡಾಗ ಜೀವನ ಅರ್ಥಪೂರ್ಣವಾಗುತ್ತದೆ. ಸಮಾಜದಲ್ಲಿ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು, ದಶಧರ್ಮಗಳ ಸೂತ್ರವನ್ನು ಪಾಲಿಸುವ ಮೂಲಕ ಧರ್ಮಜ ಮಾರ್ಗದಲ್ಲಿ ನಡೆಯಬೇಕು ಎಂದರು.

ಬೆಂಗಳೂರಿನ ವೈದ್ಯರು, ಧಾರ್ಮಿಕ ಪ್ರವಚನಕಾರ ಡಾ. ನೀರಜಾ ನಾಗೇಂದ್ರಕುಮಾರ ಅವರು ಉತ್ತಮ ಕ್ಷಮಾ ಧರ್ಮದ ಕುರಿತು ಮಾತನಾಡಿ, ಇಂದು ಕ್ರೋಧ, ರಾಗ, ದ್ವೇಷ, ಮೋಹ ಹೆಚ್ಚಾಗಿವೆ. ಸಂಸಾರ ಜೀವನದಲ್ಲಿ ಪಾಪಕರ್ಮಗಳನ್ನು ಮಾಡಲಾಗುತ್ತದೆ. ಮನಸ್ಸಿನ ಕಷಾಯಗಳನ್ನು ತೊಡೆದುಹಾಕಲು ದಶಲಕ್ಷಣ ಪರ್ವ ಅತ್ಯಂತ ಉಪಯುಕ್ತವಾಗಿದೆ. ದಶಧರ್ಮದ ಬೆಳಕಿನಲ್ಲಿ ನಡೆದರೆ ಜೀವನ ಸರಳ ಹಾಗೂ ಸುಂದರವಾಗಿರುತ್ತದೆ ಎಂದು ಆಚಾರ್ಯರು ಹೇಳಿದ್ದಾರೆ. ದ್ವೇಷದಿಂದ ಆರೋಗ್ಯ ಹಾಗೂ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಕೋಪದ ಭರದಲ್ಲಿ ಕೊಲೆಗಳು ನಡೆಯುತ್ತಿರುವುದು ದಿನನಿತ್ಯ ಮಾಧ್ಯಮಗಳಲ್ಲಿ ನೋಡುತ್ತವೆ. ಹಾಗಾಗಿ ಕೋಪವನ್ನು ನಿಗ್ರಹಿಸಬೇಕು, ಎಲ್ಲರನ್ನೂ ಕ್ಷಮಿಸುವ ಗುಣ ಬೆಳೆಸಿಕೊಳ್ಳಬೇಕು. ಕ್ಷಮಾ ಗುಣವನ್ನು ಬೆಳೆಸಿಕೊಂಡರೆ ಉತ್ತಮ ಗತಿಗೆ ಹೋಗುತ್ತಿರಿ ಎಂದರು.

ದೇವಕಿ ಎಸ್.ಉಂದ್ರಿ ಅವರು ಸಂವೇಗ ಭಾವನೆ ಕುರಿತು ಉಪನ್ಯಾಸ ನೀಡಿದರು. ಭಗವಾನ ಶ್ರೀ 1008 ನೇಮಿನಾಥ ದಿಗಂಬರ ಜೈನ ಮಂದಿರ ಕಮಿಟಿ ಅಧ್ಯಕ್ಷ ಮಂಜುನಾಥ ಚಂ. ಬಾಳಕ್ಕನವರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಾವೇರಿ ವಿವಿಯಿಂದ ಚಿನ್ನದ ಪದಕ ಪಡೆದ ಕನವಳ್ಳಿ ಗ್ರಾಮದ ಸಂತೋಷ ಬಳಿಗಾರ ಅವರನ್ನು ಸನ್ಮಾನಿಸಲಾಯಿತು. ಪಪೂ ಮುನಿಶ್ರೀ 108 ಸಂಭವನಂದಿ ಮಹಾರಾಜ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ ಸಾತಗೊಂಡ, ಮಹಾವೀರ ಅಲ್ಪಸಂಖ್ಯಾತರ ಅರ್ಬನ್ ಕೋ ಆಪ್ ಬ್ಯಾಂಕ್ ಅಧ್ಯಕ್ಷ ಭರತರಾಜ ಹಜಾರಿ, ಜೈನ್ ಮಿಲನ ಅಧ್ಯಕ್ಷ ನವೀನ ಜಗಶೆಟ್ಟಿ, ಬೆಂಗಳೂರು ಕೆಜೆಎ ಕಾರ್ಯಸಮಿತಿ ಸದಸ್ಯ ಎಸ್.ಎ.ವಜ್ರಕುಮಾರ, ರತ್ನತ್ರಯ ಮಹಿಳಾ ಸಮಾಜ ಅಧ್ಯಕ್ಷೆ ಪುಷ್ಪಾ ಪದ್ಮರಾಜ ಕಳಸೂರ ಇದ್ದರು. ಸುನಿತಾ ಭರತರಾಜ ಹಜಾರಿ ಪ್ರಾರ್ಥನಾ ಗೀತೆ ಹಾಡಿದರು. ಮಂಜುನಾಥ ಉಪಾಧ್ಯ ಸ್ವಾಗತಿಸಿದರು. ವಿಮಲ ಬೋಗಾರ ನಿರೂಪಿಸಿದರು. ಬಾಹುಬಲಿ ಪಾಟೀಲ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣದಲ್ಲಿಯೇ ಪ್ರಥಮ ಹಂತದ ಚಿಕಿತ್ಸೆ ದೊರೆಯಬೇಕು: ಬೊಮ್ಮಾಯಿ
ಹಾನಗಲ್ಲ ತಾಲೂಕು ಬರ ಘೋಷಣೆ ನೆಪಕ್ಕೆ ಮಾತ್ರ, ಪೂರ್ಣ ಬರ ಘೋಷಿಸಬೇಕು