ಶೀಘ್ರ ಬರಪೀಡಿತ ತಾಲೂಕು ಪಟ್ಟಿಗೆ ಪ್ರಸ್ತಾವನೆ ಸಲ್ಲಿಕೆ

KannadaprabhaNewsNetwork |  
Published : Sep 18, 2026, 02:00 AM IST
ಬಳ್ಳಾರಿಯ ಸರ್ಕಾರಿ ಪದವಿಪೂರ್ವ (ಮಾ.ಪು) ಕಾಲೇಜು ಮೈದಾನದಲ್ಲಿ ಗುರುವಾರ ಜರುಗಿದ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.  | Kannada Prabha

ಸಾರಾಂಶ

ಹೈದರಾಬಾದ್ ನಿಜಾಮರ ಆಳ್ವಿಕೆಯಿಂದ ಮುಕ್ತಿ ಪಡೆದ ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ಪ್ರಗತಿ, ಸಾಮಾಜಿಕ ನ್ಯಾಯ ಹಾಗೂ ಜನರ ಏಳಿಗೆಯೇ ನಮ್ಮ ಸರ್ಕಾರದ ಅಚಲ ಸಂಕಲ್ಪವಾಗಿದೆ

ಬಳ್ಳಾರಿ: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯದಂತೆ ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಅರ್ಹ ತಾಲೂಕುಗಳನ್ನು ಪಟ್ಟಿಗೆ ಸೇರಿಸಿ ಕೇಂದ್ರ ಸರ್ಕಾರಕ್ಕೆ ಪರಿಹಾರ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ. ರಘುಮೂರ್ತಿ ಹೇಳಿದರು.

ಜಿಲ್ಲಾಡಳಿತದಿಂದ ನಗರದ ಸರ್ಕಾರಿ ಪದವಿಪೂರ್ವ (ಮಾ.ಪು) ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಲಾಗಿದ್ದ 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಹೈದರಾಬಾದ್ ನಿಜಾಮರ ಆಳ್ವಿಕೆಯಿಂದ ಮುಕ್ತಿ ಪಡೆದ ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ಪ್ರಗತಿ, ಸಾಮಾಜಿಕ ನ್ಯಾಯ ಹಾಗೂ ಜನರ ಏಳಿಗೆಯೇ ನಮ್ಮ ಸರ್ಕಾರದ ಅಚಲ ಸಂಕಲ್ಪವಾಗಿದೆ ಎಂದು ಸಚಿವರು ಹೇಳಿದರು.

ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸುವುದರ ಜತೆಗೆ, ವಿಬಿಜಿ ರಾಮ್‌ಜಿ ಉದ್ಯೋಗ ಖಾತರಿ ಯೋಜನೆಯಡಿ ಸ್ಥಳೀಯವಾಗಿ ಜನರಿಗೆ ಉದ್ಯೋಗ ನೀಡಿ ಗುಳೆ ಹೋಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮೂಲಕ ಈವರೆಗೆ ಸುಮಾರು ₹18,000 ಕೋಟಿ ವೆಚ್ಚ ಮಾಡಲಾಗಿದ್ದು, ಪ್ರಮುಖ ವಲಯಗಳಿಗೆ ಆದ್ಯತೆ ನೀಡಲಾಗಿದೆ. ಶಿಕ್ಷಣಕ್ಕೆ ₹2,202 ಕೋಟಿ, ಆರೋಗ್ಯಕ್ಕೆ ₹2,071 ಕೋಟಿ, ಉದ್ಯೋಗಾವಕಾಶಕ್ಕೆ ₹974 ಕೋಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ₹ 498 ಕೋಟಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕೆ ₹ 638 ಕೋಟಿ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹313 ಕೋಟಿ, ಅಂತರ್ಜಲ ಅಭಿವೃದ್ಧಿಗೆ ₹ 425 ಕೋಟಿ, ಕಲ್ಯಾಣ ಪಥಕ್ಕೆ ₹1,000 ಕೋಟಿ, ಪ್ರಜಾಸೌಧಗಳ ನಿರ್ಮಾಣಕ್ಕೆ ₹166 ಕೋಟಿ ವ್ಯಯಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಕಲ್ಯಾಣ ಕರ್ನಾಟಕದಲ್ಲಿ ಈ ಹಿಂದೆ ನಡೆದ ನಿಜಾಮರ ಆಡಳಿತ ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ಹಮ್ಮಿಕೊಂಡಿರುವ ಉದ್ದೇಶ ಕುರಿತು ತಿಳಿಸಿದ ಸಚಿವರು, 1947ರ ಆ.15ರಂದು ಇಡೀ ಭಾರತಕ್ಕೆ ಸ್ವಾತಂತ್ರ‍್ಯ ಬಂದರೂ, ಹೈದರಾಬಾದ್ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿ ಸ್ವತಂತ್ರವಾಗಿರಲು ನಿರ್ಧರಿಸಿದ್ದರಿಂದ ಕಲ್ಯಾಣ ಕರ್ನಾಟಕದ ಆಗಿನ ಕಲ್ಬುರ್ಗಿ, ಬೀದರ್, ರಾಯಚೂರು ಸೇರಿದಂತೆ ಇಂದಿನ ಏಳು ಜಿಲ್ಲೆಗಳಿಗೆ ಸ್ವಾತಂತ್ರ‍್ಯ ಸಿಕ್ಕಿರಲಿಲ್ಲ. ಕಾಸಿಂ ರಜ್ವಿ ನೇತೃತ್ವದ ರಜಾಕಾರರ ದೌರ್ಜನ್ಯದ ವಿರುದ್ಧ ಹೋರಾಟಗಾರರು ರಣಕಹಳೆ ಊದಿದರು. ಅಂತಿಮವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಜವಾಹರಲಾಲ್ ನೆಹರು ದಿಟ್ಟ ನಿರ್ಧಾರದ ಫಲವಾಗಿ ನಡೆದ ಐದು ದಿನಗಳ ಸೈನಿಕ ಕಾರ್ಯಾಚರಣೆಯಿಂದ 1948ರ ಸೆ.17ರಂದು ಈ ಭಾಗಕ್ಕೆ ಮುಕ್ತಿ ದೊರೆಯಿತು. ಈ ಐತಿಹಾಸಿಕ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದ ಎಲ್ಲ ಮಹನೀಯರನ್ನು ಸ್ಮರಿಸಬೇಕಿದೆ ಎಂದು ತಿಳಿಸಿದರು.

ಸಂಸದ ಈ. ತುಕಾರಾಮ್ ಮಾತನಾಡಿ, ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದ ಬದ್ಧತೆ ಹಾಗೂ ಕೊಡುಗೆ ಐತಿಹಾಸಿಕವಾಗಿವೆ. ಕಾಂಗ್ರೆಸ್ ಸರ್ಕಾರ ತಂದ ಮೀಸಲಾತಿ ಕ್ರಮಗಳಿಂದ ಇಂದು ಹಿಂದುಳಿದ, ಎಸ್‌ಸಿ/ಎಸ್‌ಟಿ ವರ್ಗಗಳ ನಾಯಕರು ಶಾಸಕರು, ಸಚಿವರು, ಸಂಸದರಾಗಲು ಹಾಗೂ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಸಿರಿಗೇರಿ ಪನ್ನರಾಜ್ ವಿಶೇಷ ಉಪನ್ಯಾಸ ನೀಡಿದರು.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಶಾಲಾ- ಕಾಲೇಜು ಮಟ್ಟದಲ್ಲಿ ಏರ್ಪಡಿಸಿದ್ದ ಪ್ರಬಂಧ, ಆಶು-ಭಾಷಣ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಹಾಗೂ ಪುಸ್ತಕ ವಿತರಿಸಲಾಯಿತು. ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಸಂಡೂರು ಶಾಸಕಿ ಈ. ಅನ್ನಪೂರ್ಣ, ಮೇಯರ್ ಪಿ.ಗಾದೆಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ ಚಿದಾನಂದಪ್ಪ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ .ಕೆ., ಬಳ್ಳಾರಿ ವಲಯ ಐಜಿಪಿ ಡಾ.ಪಿ.ಎಸ್. ಹರ್ಷ, ಎಸ್ಪಿ ಡಾ. ಸುಮನ್ ಡಿ.ಪಿ., ಜಿಪಂ ಸಿಇಒ ಮಹಮ್ಮದ್ ಹಾರಿಸ್ ಸುಮೇರ್, ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜ, ಎಡಿಸಿ ಮಹಮ್ಮದ್ ಝುಬೇರ್, ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ್, ಸಹಾಯಕ ಆಯುಕ್ತ ರಾಜೇಶ್ ಎಚ್.ಡಿ. ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣದಲ್ಲಿಯೇ ಪ್ರಥಮ ಹಂತದ ಚಿಕಿತ್ಸೆ ದೊರೆಯಬೇಕು: ಬೊಮ್ಮಾಯಿ
ಹಾನಗಲ್ಲ ತಾಲೂಕು ಬರ ಘೋಷಣೆ ನೆಪಕ್ಕೆ ಮಾತ್ರ, ಪೂರ್ಣ ಬರ ಘೋಷಿಸಬೇಕು