ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಜ್ಯೋತಿಲಕ್ಷ್ಮೀ ಬಾಬು ಅಧ್ಯಕ್ಷತೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಉಪಸ್ಥಿತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ನಡೆದ ಚರ್ಚೆಯಲ್ಲಿ ಅಧಿಕಾರಿಗಳು ಮತ್ತು ಪುರಸಭೆ ಅಧ್ಯಕ್ಷರ ಆಡಳಿತದ ಕಾರ್ಯವೈಖರಿ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯುತ್ ಲೈಟ್ ಖರೀದಿ, ಮೋಟಾರ್ ರಿಪೇರಿ, ಪುರಸಭೆ ಕಸ ಸಾಗಾಣಿಕೆ ವಾಹನಗಳ ದುರಸ್ತಿ, ಕಸ ಸಂಸ್ಕರಣಾ ಘಟಕದ ಗೊಬ್ಬರ ಯಂತ್ರೋಪಕರಣಗಳ ನಿರ್ವಹಣೆ, ವಿಶ್ವೇಶ್ವರಯ್ಯ ನಾಲೆಗೆ ತಡೆಗೋಡೆ ನಿರ್ಮಾಣ, ನಾಲೆಗೆ ಒಳಚರಂಡಿ ನೀರು ಸೇರದಂತೆ ಕ್ರಮ ವಹಿಸುವ ಬಗ್ಗೆ ಚರ್ಚಿಸಲಾಯಿತು.ಸದಸ್ಯ ಪಾರ್ಥಸಾರಥಿ ಮಾತನಾಡಿ, ಪಟ್ಟಣ ವ್ಯಾಪ್ತಿ ಬೀದಿ ದೀಪಗಳನ್ನು ಅಳವಡಿಸಲು 90 ವ್ಯಾಟ್ಸ್‌ನ 108 ಎಲ್‌ಇಡಿ ಬಲ್ಪ್‌ಗಳನ್ನು ಖರೀದಿಸಲಾಗಿದೆ. ಇದಕ್ಕೆ ಪುರಸಭೆ ಬೊಕ್ಕಸದಿಂದ 6 ಲಕ್ಷ ಪಾವತಿಸಬೇಕಿದೆ. ವಾಸ್ತವವಾಗಿ ಈ ಬಲ್ಪ್‌ಗಳ ಮಾರುಕಟ್ಟೆ ದರ ಕೇವಲ 2 ಸಾವಿರ ರುಪಾಯಿ ಇದೆ ಎಂದರು.
ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳಿಗೆ ಕ್ರಮಸಂಖ್ಯೆ ನೀಡಿ ಹೆಚ್ಚಿನ ಬಾಡಿಗೆ ವಸೂಲಿಗೆ ಕ್ರಮವಹಿಸಬೇಕು. ಪಟ್ಟಣದ ಕಾಮನ ಚೌಕ ವೃತ್ತದಲ್ಲಿ ನಾಮಫಲಕ ಅಳವಡಿಸಬೇಕು. ಪೆನ್‌ಷನ್ ಲೈನ್ ರಸ್ತೆಯಿಂದ ಬೀರಶೆಟ್ಟಹಳ್ಳಿಗೆ ತೆರಳುವ ರಸ್ತೆಗೆ ಡಾ.ಪುನೀತ್ ರಾಜ್‌ಕುಮಾರ್ ಹೆಸರು ನಾಮಕರಣ ಮಾಡಬೇಕು ಎಂದರು.
ಸದಸ್ಯ ಚಂದ್ರು ಮಾತನಾಡಿ, ಪಟ್ಟಣ ವ್ಯಾಪ್ತಿ ವಿಶ್ವೇಶ್ವರಯ್ಯ ನಾಲೆ ಏರಿಗೆ ತಡೆಗೋಡೆ ನಿರ್ಮಿಸದ ಕಾರಣ ಏರಿ ರಸ್ತೆಯಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದೆ. ಪ್ರತನಿತ್ಯ ಶಾಲಾ ಮಕ್ಕಳ ವಾಹನ ಸೇರಿದಂತೆ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ಕೊಂಚ ಎಡವಟ್ಟದರು ವಾಹನ ನಾಲೆಗೆ ಉರುಳಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ತಡೆಗೋಡೆ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಸಂಸ್ಕರಣಾ ಘಟಕ ಆವರಣದಲ್ಲಿ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕಿಗೆ ಈವರೆಗೂ ಒಂದು ಹನಿ ನೀರು ಬಿದ್ದಿಲ್ಲ. ಕಸದ ರಾಶಿಗೆ ಬೆಂಕಿ ಬಿದ್ದರೆ ಅದನ್ನು ನಂದಿಸಲು ನೀರಿನ ಲಭ್ಯತೆ ಇಲ್ಲ. ಆರೋಗ್ಯ ಮತ್ತು ಪರಿಸರ ವಿಭಾಗದ ಅಧಿಕಾರಿಗಳು ಬೇಜಾವಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಕಸ ವಿಲೇವಾರಿ ಮಾಡುವ ವಾಹನಗಳನ್ನು ದುರಸ್ತಿ ಮಾಡಿಸದೆ ತುಕ್ಕು ಹಿಡಿಯುವಂತೆ ಮಾಡಿದ್ದಾರೆ. ತುಕ್ಕು ಹಿಡಿಯುತ್ತಿರುವ ವಾಹನಗಳಿಗೆ 2 ಲಕ್ಷ ವಾಹನ ವಿಮೆ ಮಾಡಿಸಲಾಗಿದೆ ಎಂದು ಕಿಡಿಕಾರಿದರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ಉಪಾಧ್ಯಕ್ಷ ಎಲ್.ಅಶೋಕ್, ಮಾಜಿ ಅಧ್ಯಕ್ಷೆ ಅರ್ಚನಾ ಚಂದ್ರು, ಸದಸ್ಯರಾದ ಆರ್.ಸೋಮಶೇಖರ್, ಯಶವಂತಕುಮಾರ್, ಶಿವಕುಮಾರ್, ಎಂ.ಗಿರೀಶ್, ಎ,ಕೃಷ್ಣ, ಸರಸ್ವತಿ, ಜಯಲಕ್ಷ್ಮಮ್ಮ, ಗೀತಾ ಅರ್‍ಮುಗಂ, ಮುರುಳೀಧರ್, ಪಟೇಲ್ ರಮೇಶ್ ಇತರರು ಇದ್ದರು.