₹5142 ಕೋಟಿ ವೆಚ್ಚದ ಕಾಮಗಾರಿಗೆ ನಾಳೆ ಪ್ರಧಾನಿ ಚಾಲನೆ

KannadaprabhaNewsNetwork | Published : Mar 11, 2024 1:27 AM

ಸಾರಾಂಶ

₹5142 ಕೋಟಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಾ. 12ರಂದು ಚಾಲನೆ ನೀಡಲಿದ್ದಾರೆ ಎಂದು ವಲಯದ ಮಹಾಪ್ರಬಂಧಕ ಅರವಿಂದ ಶ್ರೀವಾತ್ಸವ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ₹4844 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ₹297 ಕೋಟಿ ವೆಚ್ಚದ ಉದ್ದೇಶಿತ ವರ್ಕ್‌ಶಾಪ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಸೇರಿದಂತೆ ₹5142 ಕೋಟಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಾ. 12ರಂದು ಚಾಲನೆ ನೀಡಲಿದ್ದಾರೆ ಎಂದು ವಲಯದ ಮಹಾಪ್ರಬಂಧಕ ಅರವಿಂದ ಶ್ರೀವಾತ್ಸವ ತಿಳಿಸಿದರು.

ನಗರದ ರೈಲ್‌ ಸೌಧದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ₹297 ಕೋಟಿ ವೆಚ್ಚದಲ್ಲಿ ವಂದೇ ಭಾರತ ರೈಲು ಕೋಚ್‌ಗಳ ನಿರ್ವಹಣೆಗಾಗಿ ಹುಬ್ಬಳ್ಳಿ ಮತ್ತು ತನ್ನಿಸಂದ್ರ ರೈಲ್ವೆ ವರ್ಕ್‌ಶಾಪ್‌ನಲ್ಲಿ ಡೆಮು, ಮೆಮು ಶೆಡ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ.

₹8444 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ತಳಕಲ್ಲ-ಲಿಂಗನಬಂಡಿ, ಗದಗ-ಬಾಗಲಕೋಟೆ ಹಾಗೂ ಕುಡಚಿ-ಮಿರಜ್ ಜೋಡಿ ಮಾರ್ಗ, ₹22.93 ಕೋಟಿ ವೆಚ್ಚದಲ್ಲಿ ಗಂಗಾವತಿ, ಪೆನುಕೊಂಡದಲ್ಲಿ ರೂಪಿಸಿದ ಗೂಡ್ಸ್ ಶೆಡ್, ವಡ್ಡರಹಳ್ಳಿಯಲ್ಲಿ ₹12.75 ಕೋಟಿಯಲ್ಲಿ ನಿರ್ಮಿಸಿದ ಗತಿ ಶಕ್ತಿ ಮಲ್ಟಿ ಮಾಡೆಲ್ ಕಾರ್ಗೋ ಟರ್ಮಿನಲ್, ಹುಬ್ಬಳ್ಳಿ, ಮೈಸೂರು, ಬೆಂಗಳೂರು ವೈಟ್‌ಫೀಲ್ಡ್ ಹಾಗೂ ಬಂಗಾರಪೇಟೆಯಲ್ಲಿ ₹58 ಲಕ್ಷದಲ್ಲಿ ತೆರೆಯಲಾಗಿರುವ ಜನೌಷಧ ಕೇಂದ್ರ ಹಾಗೂ ₹2.15 ಕೋಟಿ ವೆಚ್ಚದಲ್ಲಿ ಆರಂಭಿಸಿದ ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನಾ ಮಳಿಗೆಗಳನ್ನು ಪ್ರಧಾನಿಯವರು ಉದ್ಘಾಟಿಸಲಿದ್ದಾರೆ ಎಂದರು.

ವಂದೇ ಭಾರತ್

ದೇಶಾದ್ಯಂತ 10 ವಂದೇ ಭಾರತ್ ರೈಲು ಸಂಚಾರ ಸೇವೆಗೆ ಚಾಲನೆ ನೀಡಲಿದ್ದು, ಇದರಲ್ಲಿ ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಎರಡು ರೈಲುಗಳು ಸೇರಿವೆ. ಕರ್ನಾಟಕದ ಮೈಸೂರು- ಚೆನ್ನೈ, ಕಲಬುರಗಿ- ಬೆಂಗಳೂರು ಹಾಗೂ ತಿರುವಂತಪುರ- ಮಂಗಳೂರು ರೈಲುಗಳಿಗೂ ಹಸಿರು ನಿಶಾನೆ ತೋರಲಿದ್ದಾರೆ ಎಂದು ವಿವರಿಸಿದರು.

ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಜೈನ್, ವಿ. ಪ್ರಶಾಂತ ಕುಮಾರ, ಅನೂಜ ಮೆಹತಲ್, ಮುರಳೀಕೃಷ್ಣ, ಸಿಪಿಆರ್‌ಒ ಮಂಜುನಾಥ ಕನಮಡಿ ಹಾಗೂ ಹಲವು ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.

ಆನ್‌ಲೈನ್‌ ವೇದಿಕೆ

ಗುಜರಾತ್ ರಾಜ್ಯದಲ್ಲಿ ಮಾ.12ರಂದು ಬೆಳಗ್ಗೆ 9.30ಕ್ಕೆ ಜರಗುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರಧಾನಿಯವರು ಅಲ್ಲಿಂದಲೇ ಆನ್‌ಲೈನ್ ವೇದಿಕೆ ಮೂಲಕ ಹುಬ್ಬಳ್ಳಿ ವಿಭಾಗೀಯ ರೈಲ್ವೆ ಯೋಜನೆಗಳಿಗೆ ಬೆಳಗ್ಗೆ 8.30ಕ್ಕೆ ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿ ವಿಭಾಗೀಯ ಕಚೇರಿ ವತಿಯಿಂದ ಸ್ಥಳೀಯ ನಿಲ್ದಾಣದಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜನೌಷಧಿ ಮಳಿಗೆ ಉದ್ಘಾಟಿಸುವರು. ರಾಜ್ಯಪಾಲ ಥಾವರ್‌ಚಂದ ಗೆಹಲೋತ್‌ ಭಾಗವಹಿಸಲಿದ್ದಾರೆ ಎಂದು ಡಿಆರ್‌ಎಂ ಹರ್ಷ ಖರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Share this article