ಅಶೋಕ ಸೊರಟೂರ
ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಬಹು ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಕಳೆದ 7-8 ವರ್ಷಗಳಿಂದ ಕುಂಟುತ್ತ ಸಾಗಿದೆ.
ಕೋಟ್ಯಂತರ ರುಪಾಯಿಗಳ ಯೋಜನೆ ಅರ್ಧಕ್ಕೆ ನಿಂತು ಸಾರ್ವಜನಿಕರ ತೆರಿಗೆ ಹಣ ಪೋಲಾಗಿ ಹೋಗುತ್ತಿದ್ದರೂ ಯಾವೊಬ್ಬ ಅಧಿಕಾರಿಗಳು ಕಣ್ಣೆತ್ತಿ ನೋಡದಿರುವುದು ಅಚ್ಚರಿಯೇ ಸರಿ.ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ಕೆರೆಗಳು ಬೇಸಿಗೆ ಕಾಲದಲ್ಲಿ ನೀರಿಲ್ಲದೆ ಬತ್ತಿ ಹೋಗುತ್ತಿದ್ದವು. ಇದರಿಂದ ಜಾನುವಾರುಗಳು ಹಾಗೂ ಪ್ರಾಣಿ ಪಕ್ಷಿಗಳು ನೀರಿಗಾಗಿ ಪರಿತಪಿಸುವಂತಾಗುತ್ತಿತ್ತು. ಅಲ್ಲದೆ ತಾಲೂಕಿನ ಕೊಳವೆ ಬಾವಿಗಳು ತಳ ಕಂಡು ಬೇಸಿಗೆ ಬೆಳೆಗಳು ಒಣಗುತ್ತಿದ್ದವು. ಇದನ್ನು ಅರಿತ ಅಂದಿನ ಶಾಸಕ ರಾಮಕೃಷ್ಣ ದೊಡ್ಡಮನಿ ಕ್ಷೇತ್ರದ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಮಹತ್ವದ ಯೋಜನೆ ರೂಪಿಸಿ, ಸುಮಾರು ₹144 ಕೋಟಿ ವೆಚ್ಚದ ಕಾಮಗಾರಿಗೆ 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲಕ್ಷ್ಮೇಶ್ವರ ಪಟ್ಟಣದಲ್ಲಿ ಬೃಹತ್ ಸಮಾರಂಭ ಮಾಡಿ ಅಡಿಗಲ್ಲು ಹಾಕಿದರು.
ಮಂಗಳೂರಿನ ಓಸಿಯನ್ ಕಂಪನಿಯು 20 ಕೆರೆ ತುಂಬಿಸುವ ಯೋಜನೆಯ ಕಾಮಗಾರಿಯ ಗುತ್ತಿಗೆ ಪಡೆದುಕೊಂಡು ಕಾರ್ಯ ಆರಂಭಿಸಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಬೃಹತ್ ಗಾತ್ರದ ಪೈಪ್ ಅಳವಡಿಕೆ ಕಾಮಗಾರಿ ಮಾಡಿ ಮುಗಿಸಿದ್ದಾರೆ. ಆರಂಭದಲ್ಲಿ ಸ್ವಲ್ಪ ಬಿರುಸಾಗಿ ಸಾಗಿದ ಕಾಮಗಾರಿಯು ನಂತರ ಆಮೆ ವೇಗದಲ್ಲಿ ಸಾಗುತ್ತಿದೆ. ಹೀಗಾಗಿ ತಾಲೂಕಿನ ಇನ್ನೂ ಹಲವು ಕಡೆಗಳಲ್ಲಿ ಕಾಮಗಾರಿಯು ಪೂರ್ಣಗೊಳಿಸದೆ ಅರ್ಧಕ್ಕೆ ನಿಂತು 7-8 ವರ್ಷ ಕಳೆದಿವೆ. ಇಷ್ಟಾದರೂ ಇನ್ನೂ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಬೃಹತ್ ನೀರಾವರಿ ಇಲಾಖೆಯು 20 ಕೆರೆ ತುಂಬಿಸುವ ಯೋಜನೆ ಅಡಿಯಲ್ಲಿ ಆರಂಭದಲ್ಲಿ ಬೆಳ್ಳಟ್ಟಿ ಹಾಗೂ ಹೊಳೆ ಇಟಗಿ ಹತ್ತಿರ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಆರಂಭವಾಗಿದ್ದರಿಂದ ಬೃಹತ್ ಗಾತ್ರ ಪೈಪ್ ಅಳವಡಿಸುವ ಕಾರ್ಯು ತಡವಾಗಿದೆ. 1.5 ಕಿಮೀ ಮೀಸಲು ಅರಣ್ಯ ಪ್ರದೇಶದಲ್ಲಿ ಪೈಪ್ ಲೈನ್ ಕಾಮಗಾರಿ ಮಾಡುವುದು ಬಾಕಿ ಉಳಿದಿದೆ. ಅಲ್ಲದೇ 3 ವಿದ್ಯುತ್ ಟಾವರ್ ಅಳವಡಿಸಿ 2 ತಿಂಗಳಲ್ಲಿ ಕಾಮಗಾರಿ ಮುಗಿಸುವ ಕಾರ್ಯ ಯೋಜನೆ ಹಾಕಿಕೊಳ್ಳಲಾಗಿದೆ. ಶೀಘ್ರದಲ್ಲಿ 20 ಕೆರೆ ತುಂಬಿಸುವ ಕಾಮಗಾರಿ ಮುಗಿಯುತ್ತದೆ ಎನ್ನುವ ವಿಶ್ವಾಸ ನಮ್ಮದಾಗಿದೆ ಎಂದು ಬೃಹತ್ ನೀರಾವರಿ ಇಲಾಖೆಯ ಎಇಇ ಬಸವರಾಜ ಅಂಬಿಗೇರ ಹೇಳಿದರು.