ಮನಸ್ಸು, ಭಾವನೆಯನ್ನು ಶುದ್ಧಗೊಳಿಸುವುದು ಹಬ್ಬದ ಉದ್ದೇಶ

KannadaprabhaNewsNetwork |  
Published : Sep 09, 2024, 01:31 AM IST
ತುಮಕೂರಿನ ವಿನಾಯಕ ನಗರದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಯಿಂದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. | Kannada Prabha

ಸಾರಾಂಶ

ಇಲ್ಲಿನ ವಿನಾಯಕ ನಗರದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ 48ನೇ ವರ್ಷದ 28 ದಿನಗಳ ಗಣೇಶೋತ್ಸವಕ್ಕೆ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಚಾಲನೆ ನೀಡಲಾಯಿತು

ಕನ್ನಡಪ್ರಭ ವಾರ್ತೆ ತುಮಕೂರುಇಲ್ಲಿನ ವಿನಾಯಕ ನಗರದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ 48ನೇ ವರ್ಷದ 28 ದಿನಗಳ ಗಣೇಶೋತ್ಸವಕ್ಕೆ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಚಾಲನೆ ನೀಡಲಾಯಿತು. ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಮನಸ್ಸು ಮತ್ತು ಭಾವನೆಗಳು ಶುದ್ಧಿಗೊಳಿಸುವಂತಹದ್ದು ಹಬ್ಬಗಳ ಆಚರಣೆಯ ಮುಖ್ಯ ಸಂದೇಶವಾಗಿದೆ. ಎಲ್ಲ ಸಮುದಾಯದವರು ಸಾಂದರ್ಭಿಕವಾಗಿ ಹಬ್ಬಗಳನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ ಎಂದರು.ಗಣೇಶ ಹಬ್ಬಕ್ಕೆ ವಿಶೇಷತೆ ಏನೆಂದರೆ ಸ್ವಾತಂತ್ರ್ಯೋತ್ಸವಕ್ಕೆ ಒಳ್ಳೆಯ ಕೊಡುಗೆಯನ್ನು ಕೊಟ್ಟಂತಹ ಉತ್ಸವ ಎಂದರೆ ಅದು ಗಣೇಶೋತ್ಸವ ಎಂದು ಹಮ್ಮೆಯಿಂದ ಹೇಳಿಕೊಳ್ಳಬಹುದು. ಬಾಲಗಂಗಾಧರನಾಥ ತಿಲಕ್ ಅವರು ಮಹಾರಾಷ್ಟ್ರದಲ್ಲಿ ಬಹಳ ವಿಶೇಷವಾಗಿ ಆಚರಿಸಿಕೊಂಡು ಬಂದಿದ್ದರು. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಹಬ್ಬ ಆಚರಣೆಯಾದ ಬಳಿಕ ಈ ಹಬ್ಬ ಮತ್ತಷ್ಟು ಮಹತ್ವ ಪಡೆದುಕೊಂಡಿದೆ ಎಂದರು.ಮನೆಗಳಲ್ಲಿ ಗಣೇಶೋತ್ಸವನ್ನು ಮಾಡಿಕೊಳ್ಳುವಂತಹ ವ್ಯವಸ್ಥೆಯನ್ನು ಹೋಗಲಾಡಿಸಿ ಸಮಗ್ರವಾಗಿ ಒಟ್ಟಾಗಿ ಸೇರಿ ಐಕ್ಯತೆಯಿಂದ ಗಣೇಶೋತ್ಸವವನ್ನು ಮಾಡಬೇಕೆಂಬ ವ್ಯವಸ್ಥೆ ಮಾಡಿ ಜನರಲ್ಲಿ ಸ್ವಾತಂತ್ರ್ಯೋತ್ಸವದ ಕಿಚ್ಚನ್ನು ಹಚ್ಚಬೇಕು ಎಂಬ ಉದ್ಧೇಶವನ್ನಿಟ್ಟುಕೊಂಡು ಪ್ರಾರಂಭ ಮಾಡಿದರು ಎಂದು ಹೇಳಿದರು.ಗಣೇಶೋತ್ಸವ ಧಾರ್ಮಿಕ ಆಚರಣೆಯಾಗಿದ್ದು, ಇದಕ್ಕೆ ಸಾಂಸ್ಕೃಂತಿಕ ಆಯಾಮ ಅದರ ಜೊತೆಗೆ ಸ್ವಾತಂತರ್ಯೋತ್ಸವದ ಕೊಡುಗೆಯೂ ಸಹ ಹಿನ್ನೆಲೆಯಲ್ಲಿರುವಂತಹದ್ದು, ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿಯವರು 28 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಬಹಳ ಅಚ್ಚುಕಟ್ಟಾಗಿ ನಡೆಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದರು.ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಡೀ ನಾಡು ಸಂಭ್ರಮದಿಂದ ಗಣೇಶನ ಪ್ರತಿಷ್ಠಾಪನಾ ಉತ್ಸವದಲ್ಲಿ ಭಾಗಿಯಾಗಿದೆ. ಹಾಗೆಯೇ ಸಿದ್ದಿವಿನಾಯಕ ಸೇವಾ ಮಂಡಳಿ ಕಳೆದ 48 ವರ್ಷಗಳಿಂದ ನಗರದಲ್ಲಿ ಗಣಪತಿ ಹಬ್ಬವನ್ನು ಮಾಡುತ್ತಾ ಬಂದಿದೆ ಎಂದರು.ಗಣೇಶ ಸಂಘಟನೆಗೆ ಪ್ರಧಾನ ದೇವತೆ, ಇದನ್ನೇ ಅರಿತೇ ತಿಲಕರು ಸ್ವಾತಂತ್ರ ಹೋರಾಟದಲ್ಲಿ ಜನರನ್ನು ತೊಡಗಿಸಲು ಸಾಮೂಹಿಕ ಗಣೇಶ ಉತ್ಸವಗಳನ್ನು ಆರಂಭಿಸಿದರು. ಅದನ್ನು ಇಂದಿಗೂ ಮುಂದುವರೆಸಿಕೊಂಡು ಬರಲಾಗುತ್ತಿದೆ. ಘರ್ ಘರ್ ಮೇ ಗಣಪತಿ ಹೋಗಿ, ಇಂದು ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಡೆಯುತ್ತಿದೆ. ಇದು ಒಳ್ಳೆಯ ಬೆಳೆವಣಿಗೆ, ಯುವಜನತೆ ಹೆಚ್ಚಿನ ರೀತಿಯಲ್ಲಿ ಇದರಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂಘಟನೆಯ ದೃಷ್ಟಿಯಿಂದ ಒಳ್ಳೆಯದು ಎಂದರು.ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಳಸ ಪ್ರಾಯವಾಗಿದೆ. ಮುಂದಿನ ದಿನಗಳಲ್ಲಿ ಸಿದ್ದಿವಿನಾಯಕ ಸೇವಾ ಮಂಡಳಿಯ ಅಭಿವೃದ್ಧಿ ಕಾರ್ಯಕ್ಕೆ ಶಾಸಕರ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಮಂಡಳಿಯ ಇತಿಹಾಸ ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬ ಸದಸ್ಯರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಪ್ರತಿ ಏರಿಯಾ, ಬೀದಿ ಬೀದಿಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆಸುತ್ತಿರುವುದರಿಂದ ಮಂಡಳಿಯ ಕಾರ್ಯಕ್ರಮದಲ್ಲಿ ಜನ ಕಡಿಮೆಯಾಗಿದೆ. ವಿಸರ್ಜನೆ ಸಂದರ್ಭದಲ್ಲಾದರೂ ಎಲ್ಲರನ್ನು ಒಗ್ಗೂಡಿಸಿಕೊಂಡು ಉತ್ಸವ ಮಾಡಿದರೆ ಒಂದು ಹಿರಿಮೆ ಬರುತ್ತದೆ ಎಂದು ಸಲಹೆ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಮಾತನಾಡಿ, ರಾಜ್ಯದಲ್ಲಿ ಅತಿಹೆಚ್ಚು ಹಳೆಯ ಇತಿಹಾಸವನ್ನು ಸಿದ್ದಿವಿನಾಯಕ ಸೇವಾ ಮಂಡಳಿ ಹೊಂದಿದೆ. ಭಕ್ತಿ, ಭಾವದಿಂದ ಒಗ್ಗಟ್ಟಿನಿಂದ ಗಣೇಶೋತ್ಸವವನ್ನು ಆಚರಿಸುತ್ತಿರುವುದು ಸಂತೋಷಕರ ವಿಚಾರ ಎಂದರು.ಗಣೇಶ ಹಬ್ಬ ಸಮಾಜದಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಎಲ್ಲರಲ್ಲೂ ಮನೆಯಲ್ಲೇ ಕುಳಿತು ಹಬ್ಬ ಆಚರಿಸುವ ಬದಲು ಇಂತಹ ಮಂಡಳಿಗಳಿಗೆ ಸಹಕಾರ ನೀಡಿ ಹಬ್ಬ ಆಚರಣೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು. ಸಿದ್ದಿವಿನಾಯಕ ಸೇವಾ ಮಂಡಳಿ ಅಧ್ಯಕ್ಷ ಎಚ್.ಆರ್.ನಾಗೇಶ್ ಮಾತನಾಡಿ, ಮಂಡಳಿಯಲ್ಲಿ 20 ಲಕ್ಷ ರು. ವೆಚ್ಚದಲ್ಲಿ ಕಲಾಮಂಟಪ, ಆವರಣದಲ್ಲಿ ಕಾಂಕ್ರೀಟ್ ಹಾಕಲಾಗಿದೆ. ಇದರೊಂದಿಗೆ ಅಗತ್ಯ ಇರುವ ಕೆಲಸ ಕಾರ್ಯಗಳನ್ನು ಮಾಡಲಾಗುತ್ತಿದೆ. ಮುಂದಿನ 2 ವರ್ಷದಲ್ಲಿ ಮಂಡಳಿಗೆ 50 ವರ್ಷ ತುಂಬಲಿದ್ದು, ಶ್ರೀಗಳ ಆಶಯದಂತೆ ಸುವರ್ಣ ಮಹೋತ್ಸವವನ್ನು ಎಲ್ಲರನ್ನು ಒಗ್ಗೂಡಿಸಿಕೊಂಡು ಬಹಳ ಅದ್ಧೂರಿಯಿಂದ ಆಚರಿಸಲಾಗುವುದು ಎಂದು ತಿಳಿಸಿದರು.

ಮಂಡಳಿ ಉಪಾಧ್ಯಕ್ಷ ಟಿ.ಎಚ್. ಪ್ರಸನ್ನಕುಮಾರ್, ಕೋರಿ ಮಂಜಣ್ಣ, ರಾಘವೇಂದ್ರ, ಜಗಜ್ಯೋತಿ ಸಿದ್ದರಾಮಯ್ಯ ಟಿ.ಎಸ್, ಪ್ರಭು ಎಸ್.ಜಿ., ಆರ್.ಜೆ. ಸುರೇಶ್, ರೇಣುಕಾ ಪರಮೇಶ್, ಜಿಯಾವುಲ್ಲಾ, ಅನುಸೂಯಮ್ಮ, ನಟರಾಜು, ಶ್ರೀನಾಥ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ