ಮನಸ್ಸಿಗೆ ಹತ್ತಿರವಾಗುವ ಕರ್ನಾಟಕ ರಮಾರಮಣ ಶ್ರೀಕೃಷ್ಣದೇವರಾಯ

KannadaprabhaNewsNetwork |  
Published : Jun 01, 2026, 01:45 AM IST
38 | Kannada Prabha

ಸಾರಾಂಶ

ಕೃಷ್ಣದೇವರಾಯರು ತಮ್ಮ ಮಗ ತಿರುಮಲರಾಯನಿಗೆ ಪಟ್ಟಕಟ್ಟಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಚೈತ್ರಯಾತ್ರೆಗೆ ಹೋದ

ಫೋಟೋ - 30ಎಂವೈಎಸ್‌ 38

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ರಂಗಾನಂದ ರಂಗ ತಂಡವು ನಗರದ ರಮಾ ಗೋವಿಂದ ರಂಗಮಂದಿರದಲ್ಲಿ ಕರ್ನಾಟಕ ರಮಾರಮಣ ಶ್ರೀಕೃಷ್ಣದೇವರಾಯ ನಾಟಕ ಪ್ರದರ್ಶನಗೊಂಡಿತು.

ಕಾಕೋಳು ಸರೋಜಾ ರಾವ್ ರಚಿಸಿರುವ, ರಂಗಸ್ವಾಮಿ ನಿರ್ದೇಶಿಸಿದ ಈ ನಾಟಕವು ವಿಜಯನಗರ ಸಾಮ್ರಾಜ್ಯದ ಕುರಿತು ಬೆಳಕು ಚೆಲ್ಲಲಿದೆ. ದಕ್ಷಿಣ ಭಾರತದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲಘಟ್ಟವನ್ನು ಸುವರ್ಣಯುಗ ಎಂದು ಕರೆಯಲಾಗುತ್ತದೆ. ರಮಾರಮಣ ಶ್ರೀಕೃಷ್ಣದೇವರಾಯ ಪರಾಕ್ರಮ, ಆದರ್ಶ ಆಡಳಿತ, ಪ್ರಜಾಪಾಲನೆ ಇವೆಲ್ಲ ಎಷ್ಟು ಮುಖ್ಯವೋ ಮಹಾಮಂತ್ರಿ ತಿಮ್ಮರಸು ಅವರ ದಕ್ಷ ಮಾರ್ಗದರ್ಶನ, ಸ್ವಾಮಿನಿಷ್ಠೆ ಮತ್ತು ಪರಿಶ್ರಮ ಇವುಗಳೂ ಅಷ್ಟೇ ಮುಖ್ಯ.

ಕೃಷ್ಣದೇವರಾಯರು ತಮ್ಮ ಮಗ ತಿರುಮಲರಾಯನಿಗೆ ಪಟ್ಟಕಟ್ಟಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಚೈತ್ರಯಾತ್ರೆಗೆ ಹೋದ ನಂತರ ಅರಮನೆಯಲ್ಲಿ ನಡೆಯುವ ಸಂಚು, ಕೃತ್ರಿಮತೆ, ದೌರ್ಜನ್ಯ ಮುಂತಾದವುಗಳನ್ನು ನಾಟಕ ಅತ್ಯಂತ ಸಮರ್ಥವಾಗಿ ಚಿತ್ರಿಸುತ್ತದೆ. ಮೋಸದಿಂದ ತಿರುಮಲನಿಗೆ ಪಂಪಾಪತಿ ವಿರೂಪಾಕ್ಷನ ಪ್ರಸಾದದಲ್ಲಿ ವಿಷ ಬೆರೆಸಿ ಕೊಲ್ಲಲಾಗುತ್ತದೆ. ಅಚ್ಯುತರಾಯನ ಕುತಂತ್ರದಿಂದಾಗಿ ಕೊಲೆಯ ಆರೋಪ ನಿಷ್ಠಾವಂತ ತಿಮ್ಮರಸು ಅವರ ಮೇಲೆ ಬರುತ್ತದೆ.

ತಿಮ್ಮರಸು ಅವರನ್ನು ವಿಚಾರಣೆಗೊಳಪಡಿಸಿ ಅವರನ್ನು ಮತ್ತು ಅವರ ಮಗ ಗೋವಿಂದರಾಜು ಇಬ್ಬರನ್ನೂ ಬಂಧಿಸಿ ಅವರ ಕಣ್ಣುಗಳನ್ನು ಕೀಳುವಂತೆ ಆದೇಶಿಸುತ್ತಾನೆ ಕುಟಿಲ ಅಚ್ಯುತರಾಯ. ತಿಮ್ಮರಸುವಿನ ಪದವಿಯನ್ನು ದೇವರಸನಿಗೆ ಕೊಡಲಾಗುತ್ತದೆ. ಕೊನೆಗೆ ಕೃಷ್ಣದೇವರಾಯನಿಗೆ ತನ್ನ ಪ್ರೀತಿಯ ಅಪ್ಪಾಜಿ ತಿಮ್ಮರಸು ನಿರಪರಾಧಿ ಎಂದು ತಿಳಿಯುತ್ತದೆ. ಕಾರಾಗೃಹದಲ್ಲಿರುವ ತಿಮ್ಮರಸು ಮತ್ತು ಗೋವಿಂದರಾಜು ಅವರನ್ನು ನೋಡಿದ ಕೃಷ್ಣದೇವರಾಯನ ಹೃದಯ ಒಡೆದು ಹೋಗುತ್ತದೆ. ನಿಜಾಂಶ ಅರಿಯದೇ ದುಡುಕಿದ ತನ್ನನ್ನೂ ಕೊಲ್ಲುವಂತೆ ಅವರಿಬ್ಬರನ್ನೂ ಬೇಡಿಕೊಳ್ಳುತ್ತಾನೆ. ಅವರಿಬ್ಬರ ಕಣ್ಣುಗಳು ಹೋದರೂ ಭವಿಷ್ಯದಲ್ಲಿ ಅವರಿಬ್ಬರ ಕಣ್ಣುಗಳಾಗಿ ನಾನಿರುತ್ತೇನೆ ಎಂದು ಕೃಷ್ಣದೇವರಾಯ ಪ್ರತಿಜ್ಞೆ ಮಾಡುವುದರೊಂದಿಗೆ ನಾಟಕ ಮುಗಿಯುತ್ತದೆ.

ರಂಗಸ್ವಾಮಿ ಅವರು ನಾಟಕವನ್ನು ಸೊಗಸಾಗಿ ನಿರ್ದೇಶಿಸಿದ್ದಾರೆ. ವರನಟ ಡಾ. ರಾಜ್ ಕುಮಾರ್ ಅವರ ನೆನಪಿನಲ್ಲಿ ವರ್ಷಪೂರ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿರುವ ರಂಗಾನಂದ ತಂಡ ಉತ್ತಮ ರೀತಿಯಲ್ಲಿ ತನ್ನ ರಂಗಯಾತ್ರೆಯನ್ನು ಆರಂಭಿಸಿದೆ. ಕೃಷ್ಣದೇವರಾಯನಾಗಿ ರಂಗಸ್ವಾಮಿಯವರು ಭಾವಪೂರ್ಣವಾಗಿ ನಟಿಸಿದ್ದಾರೆ. ತಿಮ್ಮರಸು ಪಾತ್ರದಲ್ಲಿ ನಾಗೇಂದ್ರ ಸಿ.ಎಫ್.ಟಿ.ಆರ್.ಐ, ಅಚ್ಯುತರಾಯನ ಪಾತ್ರದಲ್ಲಿ ನಾಗಭೂಷಣ, ಗೋವಿಂದರಾಜುವಿನ ಪಾತ್ರದಲ್ಲಿ ಪ್ರತಾಪ್, ದೇವರಸನ ಪಾತ್ರದಲ್ಲಿ ಬೆನಕ ನಾಗರಾಜ್ ಮನೋಜ್ಞವಾಗಿ ನಟಿಸಿದ್ದಾರೆ.

ಪಾತ್ರಧಾರಿಗಳ ಮಾತು ಮುಗಿಯುವ ಮುನ್ನವೇ ಕೆಲವೊಮ್ಮೆ ಹಿನ್ನೆಲೆ ಸಂಗೀತ ಬಂದು ಮಾತುಗಳು ಕೇಳುತ್ತಿರಲಿಲ್ಲ. ಬೆಳಕಿನ ವಿನ್ಯಾಸ ಸ್ವಲ್ಪ ಸುಧಾರಿಸಿದರೆ ಒಳ್ಳೆಯದು. ವಸ್ತ್ರಾಲಂಕಾರ ನಾಟಕಕ್ಕೆ ಮೆರುಗು ನೀಡಿತ್ತು. ಸಣ್ಣಪುಟ್ಟ ದೋಷ ಸರಿಪಡಿಸಿಕೊಂಡರೆ ನಾಟಕ ಮತ್ತಷ್ಟು ಪರಿಣಾಮಕಾರಿ ಆಗುತ್ತದೆ.

ಪೂರಕ ಮಾಹಿತಿ: ಎನ್. ಧನಂಜಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ವಿಕಸಿತ ಭಾರತ’ಕ್ಕಾಗಿ ಸಂಕಲ್ಪಿಸಿ: ರಾಧಾಕೃಷ್ಣನ್‌
ಬಳ್ಳಾವರ ಗಂಗೂರು ಗ್ರಾಮಗಳ ಸುತ್ತ ನಿಲ್ಲದ ಕಾಡಾನೆಗಳ ಕಾಟ