ಸಿದ್ದು ಪುತ್ರ ರಾಕೇಶ ಸಾವಿಗೆ ಭೈರತಿಯೇ ಕಾರಣ ಅನ್ಬೇಕಾಗುತ್ತೆ: ರೇಣುಕಾಚಾರ್ಯ

KannadaprabhaNewsNetwork |  
Published : Oct 23, 2024, 12:51 AM IST
(-ಫೋಟೋ:  ಎಂ.ಪಿ.ರೇಣುಕಾಚಾರ್ಯ) | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ಸಾವಿಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ರೇ ಕಾರಣ ಅಂತಾ ನಾವೂ ಹೇಳಬೇಕಾಗುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ದಾವಣಗೆರೆಯಲ್ಲಿ ಎಚ್ಚರಿಸಿದ್ದಾರೆ.

- ಇಂದಲ್ಲ ನಾಳೆ ಭೈರತಿ ಸುರೇಶ ಮನೆ ಮೇಲೂ ದಾಳಿ: ಮಾಜಿ ಸಚಿವ ಹೇಳಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ಸಾವಿಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ರೇ ಕಾರಣ ಅಂತಾ ನಾವೂ ಹೇಳಬೇಕಾಗುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎಚ್ಚರಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಗ್ಗೆ ಹಗುರ ಹೇಳಿಕೆಗಳ ನೀಡುತ್ತಿರುವ ಭೈರತಿ ಸುರೇಶ್ ಹೊಸದಾಗಿ ಮಂತ್ರಿ ಆಗಿದ್ದಾರೆ, ಒಳ್ಳೆಯ ಇಲಾಖೆ ಸಚಿವರಾಗಿ ಒಳ್ಳೆಯ ಕೆಲಸ ಮಾಡಲಿ ಎಂದರು.

ದಿವಂಗತ ಮೈತ್ರಾದೇವಿ ಸ್ವರ್ಗದಲ್ಲಿದ್ದಾರೆ. ಅಂಥವರ ಬಗ್ಗೆ ಚರ್ಚೆ ಮಾಡುವಷ್ಟು ದೊಡ್ಡವರಾ ನೀವು? ಒಬ್ಬ ಮಹಿಳೆಯ ಬಗ್ಗೆ ಭೈರತಿ ಸುರೇಶ ಹಗುರವಾಗಿ ಮಾತನಾಡುವುದು ಸರಿಯಲ್ಲ. ನೀವು ಹೀಗೆ ಮಾತನಾಡುತ್ತಿದ್ದರೆ ರಾಕೇಶ ಸಿದ್ದರಾಮಯ್ಯ ಸಾವಿಗೆ ನೀವೇ ಕಾರಣ ಅಂತಾ ನಾವೂ ಹೇಳುತ್ತೇವೆ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಸ್ತವಾಂಶವನ್ನೇ ಹೇಳಿದ್ದಾರೆ. ಮಹಿಳೆಯರ ಬಗ್ಗೆ ಹೀಗೆ ಅಗೌರವವಾಗಿ ಮಾತನಾಡಿದರೆ ರಾಜ್ಯದ ಜನತೆ ಭೈರತಿ ಸುರೇಶಗೆ ತಕ್ಕ ಪಾಠ ಕಲಿಸುತ್ತಾರೆ. ಇದೇ ಧೋರಣೆಯಲ್ಲಿ ಮಾತನಾಡುತ್ತಿದ್ದರೆ ಭೈರತಿ ಸುರೇಶ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಸಿಎಂ ಹಿಂದೆ, ಮುಂದೆ ಸುತ್ತುವುದನ್ನು ಬಿಟ್ಟು, ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಬೇಕು. ಹೆಣ್ಣು ಮಕ್ಕಳ ಬಗ್ಗೆ ಹಗುರ ಮಾತನಾಡುವುದನ್ನು ಬಿಡಬೇಕು. ಸಚಿವ ಭೈರತಿ ಸುರೇಶ ಮೈಸೂರಿಗೆ ವಿಶೇಷ ವಿಮಾನದಲ್ಲಿ ಹೋಗಿ, ಕಡತಗಳನ್ನು ತಂದು ಸುಟ್ಟು ಹಾಕಿದ್ದು ನಿಜ. ಇಂದಲ್ಲ, ನಾಳೆ ಭೈರತಿ ಸುರೇಶ ಮನೆಯ ಮೇಲೆಯೂ ತನಿಖಾ ಸಂಸ್ಥೆಗಳ ದಾಳಿ ನಡೆಯುತ್ತದೆ ಎಂದು ರೇಣುಕಾಚಾರ್ಯ ಸೂಚ್ಯವಾಗಿ ಹೇಳಿದರು.

- - - ಕೋಟ್‌ ವಿಧಾನ ಪರಿಷತ್ತು ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿ.ಪಿ.ಯೋಗೇಶ್ವರ ಕಾಂಗ್ರೆಸ್ ಸೇರುವ ವಿಚಾರ ವದಂತಿ ಅಷ್ಟೇ. ಯಾವುದೇ ಕಾರಣಕ್ಕೂ ಯೋಗೇಶ್ವರ ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ. ನಮ್ಮ ಪಕ್ಷದಲ್ಲೇ ಉಳಿಯುತ್ತಾರೆ. ಈ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

- - - (-ಫೋಟೋ: ಎಂ.ಪಿ.ರೇಣುಕಾಚಾರ್ಯ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!