ಹಾವೇರಿ: ಭಾರತೀಯ ಪರಂಪರೆಯಲ್ಲಿ ಗುರುಶಿಷ್ಯರ ಸಂಬಂಧ ಪವಿತ್ರವಾಗಿದೆ. ಜ್ಞಾನ ಸೃಷ್ಟಿಗೆ ಕಾರಣಕರ್ತನಾದವನೇ ಗುರು ಎಂದು ಪ್ರಾಧ್ಯಾಪಕಿ, ಸಾಹಿತಿ ಡಾ. ಪುಷ್ಪಾವತಿ ಶೆಲವಡಿಮಠ ತಿಳಿಸಿದರು.ನಗರದ ಗುದ್ಲೆಪ್ಪ ಹಳ್ಳಿಕೇರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆಯ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು.ಅಜ್ಞಾನ, ಆಲಸ್ಯ, ಅರಿಷಡ್ವರ್ಗಗಳನ್ನು ನಾಶ ಮಾಡುವವ ಗುರು ಬ್ರಹ್ಮ ವಿಷ್ಣು ಮಹೇಶ್ವರರನ್ನು ಏಕಕಾಲಕ್ಕೆ ಪ್ರತಿನಿಧಿಸುತ್ತಾನೆ. ಹಾಗಾಗಿ ಗುರುವಿನ ಸ್ಥಾನ ಮಹತ್ವ ಪೂರ್ಣವಾದದ್ದು. ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬಿತ್ತಿ ಅವರನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿ, ವ್ಯಕ್ತಿತ್ವ ರೂಪಿಸುವುದರಲ್ಲಿ ಗುರುವಿನ ಕಾರ್ಯ ಶ್ರೇಷ್ಠವಾಗಿದೆ.
ವಿದ್ಯಾರ್ಥಿಗಳು ತಾವು ಕಲಿತ ಸಂಸ್ಥೆಯನ್ನು, ಕಲಿಸಿದ ಗುರುವನ್ನು ಮರೆಯದೆ ಗೌರವಿಸುವುದು ನಮ್ಮ ಸಂಸ್ಕೃತಿ. ವಿದ್ಯಾಲಯವೆಂಬ ದೇಹಾಲಯದಲ್ಲಿ ಶಿಕ್ಷಕರು ಹೃದಯವಿದ್ದಂತೆ. ವಿದ್ಯಾರ್ಥಿಗಳು ರಕ್ತ ಕಣವಿದ್ದಂತೆ. ರಕ್ತ ಕಣಗಳನ್ನು ಒಟ್ಟುಗೂಡಿಸಿ ಮುನ್ನುಗ್ಗುವಂತೆ ಮಾಡುವ ಕೆಲಸ ಹೃದಯದ್ದು. ಅಂದರೆ ಶಿಕ್ಷಕರದ್ದು. ಅಕ್ಷರ ಪಾಠ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳ ಮನೋಮಂದಿರದಲ್ಲಿ ಜ್ಞಾನದೀಪ ಬೆಳಗುವಂತಾಗಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಜೆ.ಆರ್. ಶಿಂಧೆ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರವಂತರಾಗಿ ಬದುಕಿದಾಗ ಮಾತ್ರ ಉತ್ತಮ ವ್ಯಕ್ತಿಗಳಾಗಲು ಸಾಧ್ಯ. ನಿರಂತರ ಅಧ್ಯಯನದಿಂದ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗುರುವಂದನಾ ಕಾರ್ಯಕ್ರಮ ನೆರವೇರಿಸಲಾಯಿತು. ವಿದ್ಯಾರ್ಥಿಗಳಾದ ಅಮೃತಾಜಂಗರ್, ಸಿಂಚನಾ ಪಲ್ಮರಿ, ಪವಿತ್ರಾ ಕಮ್ಮಾರ ಶಿಕ್ಷಕರ ಕುರಿತು ಅನಿಸಿಕೆ ಹಂಚಿಕೊಂಡರು. ಪ್ರೊ. ಸಿ.ಎಫ್. ಬಾಳೇಶ್ವರಮಠ, ಪ್ರಶಾಂತ ಕೋರಿಶೆಟ್ಟರ, ನಾಗರಾಜ ಮುಚ್ಚಟ್ಟಿ ಮಾತನಾಡಿದರು.ಪ್ರೊ. ಎಂ.ಎಸ್. ಬೆಂಡಿಗೇರಿ, ಅನಿತಾ ಉಗರಗೋಳ, ಕಾವ್ಯಾ ತಿಳವಳ್ಳಿ, ಶಿವರಾಜ್ ಮಂಟೂರ, ಬಸವರಾಜೇಶ್ವರಿ ಜೆ.ಕೆ. ಅವಿಷ್ಕಾರಶ್ಮಿ ಸವಣೂರ, ವಿಶ್ವಾ ಬಳಲಕೊಪ್ಪ, ಉತ್ತಮ ಕಾಂತೆ, ಗದಗಯ್ಯ ಹಿರೇಮಠ ಇದ್ದರು. ಸಮಷ್ಠಿ ರಿತ್ತಿ ಹಾಗೂ ಧನ್ಯಶ್ರೀ ಪ್ರಾರ್ಥಿಸಿದರು. ಅಂಜನಾ ಹಕ್ಕಿ ಸ್ವಾಗತಿಸಿದರು. ಅಕ್ಷತಾ ಹಿರೇಮಠ ಪರಿಚಯಿಸಿದರು. ಸಿದ್ಧೇಶ್ವರ ಹುಣಸಿಕಟ್ಟಿಮಠ ನಿರೂಪಿಸಿದರು. ಡಾ. ಎಂ.ವಿ. ಸಾತೇನಳ್ಳಿ ವಂದಿಸಿದರು.