ಹೊಸಪೇಟೆ: ಜಗತ್ತಿನಲ್ಲಿ ಎಲ್ಲ ಧರ್ಮಗಳಿಗಿಂತ ಜೀವನ ಧರ್ಮ ಅತ್ಯಂತ ಶ್ರೇಷ್ಠವಾದುದು. ಅದನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಶ್ರೀಮಠದಲ್ಲಿ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸ್ಥಳೀಯ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಜಗದ್ಗುರು ಕೊಟ್ಟೂರು ಬಸವಲಿಂಗ ಶ್ರೀ ಹೇಳಿದರು.
ಜೀವನ ಧರ್ಮದ ಕುರಿತು ಅರ್ಥ ಮಾಡಿಕೊಂಡಿರುವವರು ಯಾವತ್ತೂ ಧರ್ಮದ ಗೊಂದಲಕ್ಕೆ ಬೀಳುವುದಿಲ್ಲ. ಅದನ್ನು ಪ್ರತಿಯೊಬ್ಬರಿಗೆ ಅರ್ಥ ಮಾಡಿಸಲೆಂದೇ ಶ್ರೀಮಠದಲ್ಲಿ ಜೀವನದರ್ಶನ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಗತ್ತಿನಲ್ಲಿ ಲಕ್ಷಾಂತರ ವಸ್ತುಗಳಿವೆ. ಪ್ರತಿ ವಸ್ತುವಿಗೂ ತನ್ನದೇ ಆದ ಗುಣವಿರುತ್ತದೆ. ಲಕ್ಷಾಂತರ ವಸ್ತುಗಳು ಇದ್ದರೂ ನಾವು ಸಂಗ್ರಹ ಮಾಡಲು ಹೋಗುವುದು. ಹಣ, ಆಭರಣ ಮತ್ತು ಭೂಮಿಯನ್ನು ಮಾತ್ರ. ಇದರಲ್ಲಿಯೇ ನಮ್ಮ ಜೀವನವನ್ನು ಪೂರ್ತಿ ಕಳೆದು ಬಿಡುತ್ತೇವೆ. ಆದರೆ ಇವು ಯಾವು ನಮ್ಮ ಹಿಂದೆ ಬರುವುದಿಲ್ಲ. ಇದು ನಿಜವಾದ ಜೀವನವಲ್ಲ. ನಿಜವಾದ ಜೀವನ ದರ್ಶನ ಆಗಬೇಕಾದರೆ, ನಮ್ಮ ಮನಸ್ಸು ಶುದ್ಧವಾಗಿರಬೇಕು. ನಿತ್ಯ ದೇವರ ಸ್ಮರಣೆ ಮಾಡಬೇಕು ಎಂದರು.ಮರಿಯಮ್ಮನಹಳ್ಳಿಯ ಶ್ರೀಗುರುಪಾದ ದೇವರಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ, ಸಭೆಯಲ್ಲಿ ಆಶೀರ್ವಚನ ನೀಡಿ, ಜಗತ್ತಿನಲ್ಲಿ ಸತ್ಯ ಮತ್ತು ಧರ್ಮ ಮಾತ್ರ ಸ್ಥಿರವಾಗಿರುತ್ತದೆ. ಅದನ್ನು ಜನರಿಗೆ ತಿಳಿಸಲೆಂದು ಲಿಂ.ಡಾ. ಸಂಗನಬಸವ ಮಹಾಸ್ವಾಮಿಗಳು, ಸರ್ವಧರ್ಮ ಸಮನ್ವಯ ರಥೋತ್ಸವವನ್ನು ಆರಂಭಿಸಿದ್ದರು. ಅದರ ಮುಂದುವರೆದ ಭಾಗವಾಗಿ ನಾವಿಂದು ಈ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಗದಗ ಜಿಲ್ಲೆ ದೋಣಿಯ ಶಶಿಧರ ಶಾಸ್ತ್ರಿ ಹಿರೇಮಠ, ಜೀವನ ದರ್ಶನ ಕುರಿತು ಪ್ರವಚನ ನೀಡಿದರು. ಇದೇ ಸಂದರ್ಭದಲ್ಲಿ ಸುರೇಶಕುಮಾರ್, ಅಳಂದ, ಸಿದ್ದಲಿಂಗೇಶ, ಬಾಗವಾಡಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ಸೋಮಸಮುದ್ರದ ಸಿದ್ದಲಿಂಗ ಶ್ರೀ, ಬೂದಗುಂಪದ ಸಿದ್ದೇಶ್ವರ ಶ್ರೀ, ಬಳ್ಳಾರಿ ಜಿಲ್ಲೆ ಶ್ರೀಧರಗಡ್ಡೆಯ ಮರಿಕೊಟ್ಟೂರು ಶ್ರೀ ಸೇರಿದಂತೆ ಶ್ರೀಮಠದ ಭಕ್ತರು ಸಭೆಯಲ್ಲಿ ಭಾಗವಹಿಸಿದ್ದರು.