ಕಾರವಾರ: ಶಿರಸಿಗೆ ತಹಶೀಲ್ದಾರ್ ನೇಮಕ ಆಗಬೇಕೆಂದು ಆಗ್ರಹಿಸಿ ಸೋಮವಾರ ನಗರದಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಮತ್ತು ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರವಾರ ಚಲೋ ಸಫಲವಾಗಿದ್ದು, ಜಿಲ್ಲಾಧಿಕಾರಿ ಶಿರಸಿಯ ಉಪ ತಹಶೀಲ್ದಾರ್ ಆಗಿದ್ದ ರಮೇಶ ಹೆಗಡೆ ಅವರನ್ನು, ಸೋಮವಾರದಿಂದಲೇ ಅನ್ವಯವಾಗುವಂತೆ ತಹಶೀಲ್ದಾರ್ ಗ್ರೇಡ್ 1 ಹೆಚ್ಚುವರಿ ಪ್ರಭಾರಿಯಾಗಿ ನೇಮಕ ಮಾಡಿ ಆದೇಶ ಮಾಡಿದ್ದಾರೆ.
ಶಿರಸಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ, ವಿಸ್ತಾರವಾಗಿರುವ ಶಿರಸಿ ತಾಲೂಕಿಗೆ ನಾಲ್ಕು ತಿಂಗಳಿಂದ ದಂಡಾಧಿಕಾರಿ ಇಲ್ಲದಿರುವುದರಿಂದ ಜನಸಾಮಾನ್ಯರಿಗೆ, ಶಾಲಾ ಮಕ್ಕಳಿಗೆ, ಬಡವರಿಗೆ ಅತೀವ ತೊಂದರೆಯಾಗುತ್ತಿದೆ ಈ ಕೂಡಲೇ ಶಿರಸಿಗೆ ಕಾಯಂ ತಹಶೀಲ್ದಾರ್ ಅವರನ್ನು ನೇಮಕ ಮಾಡಲು ಸರಕಾರವನ್ನು ಅವರು ಒತ್ತಾಯಿಸಿದರು.
ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ, ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಬೆಲೆ ಇಲ್ಲದಂತಾಗಿದೆ. ಅತಿ ದೊಡ್ಡ ತಾಲೂಕು ಕ್ಷೇತ್ರವಾಗಿರುವ ಶಿರಸಿಗೆ ನಾಲ್ಕು ತಿಂಗಳಿಂದ ತಹಶೀಲ್ದಾರ್ ಇಲ್ಲದಿರುವುದು ಅತಿದೊಡ್ಡ ಸಮಸ್ಯೆಯಾಗಿದೆ. ಕೇವಲ ತಹಸೀಲ್ದಾರ್ ಮಾತ್ರ ಅಲ್ಲದೆ ಎಸಿಯು ಪ್ರಭಾರಿಯಾಗಿದ್ದು ಜನರಿಗೆ ವಾರದಲ್ಲಿ 2 ದಿನ ಮಾತ್ರ ಲಭ್ಯರಿರುತ್ತಾರೆ. ಇದರಿಂದಾಗಿ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಬೆಳಗ್ಗಿನಿಂದ ಸಂಜೆ ತನಕ ತಹಸೀಲ್ದಾರ್ ಕಚೇರಿ ಎದುರು ಕಾದು ಕೊನೆಗೂ ತಹಸೀಲ್ದಾರ್ ಭೇಟಿಯಾಗಲಾರದೆ ಸಮಸ್ಯೆಯನ್ನು ಪರಿಹರಿಸಿಕೊಳ್ಳದೆ ಕಣ್ಣೀರು ಹಾಕಿ ಹೋಗುವ ಸ್ಥಿತಿ ಇದೆ. ಈ ರೀತಿ ಜನರ ಕಣ್ಣಲ್ಲಿ ಕಣ್ಣೀರು ಹಾಕಿಸುವುದು ಶಾಸಕರಾದ ಭೀಮಣ್ಣನವರ ಸ್ಥಾನಕ್ಕೆ ಶೋಭೆ ತರುತ್ತದೆಯೇ ಎಂದು ಅವರು ಪ್ರಶ್ನಿಸಿದರು.ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಶಿರಸಿಗೆ ಕಾಯಂ ತಹಸೀಲ್ದಾರ ನೇಮಕಕ್ಕೆ ಆಗ್ರಹಿಸಿದರು.
ಬಿಜೆಪಿ ಗ್ರಾಮೀಣ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರವಾರ ಚಲೋ ಹೋರಾಟದಲ್ಲಿ ಬಿಜೆಪಿ ಪ್ರಮುಖರಾದ ನಾರಾಯಣ ಹೆಗಡೆ ಮತ್ತೀಘಟ್ಟ, ಚಂದ್ರಶೇಖರ ಹೆಗಡೆ, ಮಂಜುನಾಥ ಪಾಟೀಲ್ ದಾಸನಕೊಪ್ಪ, ರವಿ ದೇವಾಡಿಗ, ನಿರ್ಮಲಾ ಶೆಟ್ಟಿ ಸೇರಿದಂತೆ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು.