ಎಚ್.ಎನ್.ಪ್ರಸಾದ್
ತಮಿಳುನಾಡಿನಲ್ಲಿ ಎದ್ದಿರುವ ಫೆಂಗಲ್ ಚಂಡಮಾರುತದ ಅಬ್ಬರದಿಂದ ಜಿಲ್ಲಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಬೆಳೆದ ಫಸಲು ಕೈ ಸೇರುವ ಮುನ್ನವೇ ಜಮೀನಿನಲ್ಲಿ ನೀರು ತುಂಬಿ ಸಾಕಷ್ಟು ನಷ್ಟವಾಗಿದೆ.
ಹಲಗೂರು ಸುತ್ತಮುತ್ತಲ ಪ್ರದೇಶಗಳಲ್ಲಿ ರಾಗಿ ಮತ್ತು ಭತ್ತದ ಫಸಲು ಕಟಾವಿಗೆ ಬಂದಿದ್ದು, ಹೊಲಗದ್ದೆಗಳಲ್ಲಿ ಬೆಳೆದ ಫಸಲನ್ನು ಕೊಯ್ಲು ಮಾಡಿ ಹಾಕಲಾಗಿತ್ತು. ಆದರೆ, ಫೆಂಗಲ್ ಚಂಡಮಾರುತದ ಪರಿಣಾಮ ನಿರಂತರ ಮಳೆಯಿಂದಾಗಿ ಭತ್ತ ಪೂರ್ತಿ ನೆನೆದು ನೀರಿನಲ್ಲಿ ಮುಳುಗಿದೆ. ಇದರಿಂದ ರೈತರು ಅಪಾರ ನಷ್ಟಕ್ಕೊಳಗಾಗಿದ್ದಾರೆ.ಈ ಬಾರಿ ಉತ್ತಮ ಮಳೆಯಿಂದಾಗಿ ಎಲ್ಲೆಡೆ ಫಸಲು ಚೆನ್ನಾಗಿ ಬೆಳೆದಿತ್ತು. ರೈತರು ಕೆಲ ಭಾಗಗಳಲ್ಲಿ ಫಸಲನ್ನು ಕಟಾವು ಮಾಡಿದ್ದರು. ಆದರೆ, ಅನಿರೀಕ್ಷಿತವಾಗಿ ಬಂದ ಮಳೆಯಿಂದಾಗಿ ಜಮೀನುಗಳಲ್ಲೇ ಭತ್ತ, ರಾಗಿ ಬೆಳೆ ಹಾಳಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.
ರೇಷ್ಮೆ ಹುಳು ಸಾಕಾಣಿಕೆ ಮಾಡುವ ರೈತರಿಗೂ ನಿರಂತರ ಮಳೆಯಿಂದ ಸಾಕಷ್ಟು ತೊಂದರೆ ಎದುರಾಯಿತು. ಮಳೆ ನೀರು ಹಿಪ್ಪುನೇರಳೆ ಸೊಪ್ಪಿನ ಮೇಲೆ ಬೀಳುವುದರಿಂದ ತೇವಾಂಶವಿರುವ ಸೊಪ್ಪನ್ನು ಹುಳುಗಳಿಗೆ ಹಾಕಲು ರೈತರಿಗೆ ಕಷ್ಟವಾಯಿತು.
ಪಟ್ಟಣಾದ್ಯಂತ ಜನಜೀವನ ಅಸ್ತವ್ಯಸ್ತವಾಗಿತ್ತು. ರಸ್ತೆಗಳಲ್ಲೂ ವಾಹನ ಸಂಚಾರ ಕಡಿಮೆಯಾಗಿತ್ತು. ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸಾರ್ವಜನಿಕರ ಓಡಾಟವು ವಿರಳವಾಗಿತ್ತು. ಹಲಗೂರಿನ ದಿನಸಿ, ಬಟ್ಟೆ ಅಂಗಡಿಗಳು, ಹೋಟೆಲ್ ಗಳು, ತರಕಾರಿ, ಹಣ್ಣಿನ ಹಾಗೂ ಟೀ ಅಂಗಡಿಗಳಿಗೆ ವ್ಯಾಪಾರ ಇಲ್ಲದೆ ಬಣಗುಡುತ್ತಿದ್ದವು. ಬಹುತೇಕರು ಮಳೆಯಿಂದ ಜನರು ಬಾರದೆ ಬೇಸರಪಟ್ಟು ಅಂಗಡಿ ಮುಚ್ಚಿ ಮನೆಗೆ ಸೇರಿದ್ದರು. ವ್ಯವಸಾಯವೇ ನಮ್ಮ ಜೀವನಕ್ಕೆ ಆಧಾರ. ಬೇರೆ ಯಾವುದೇ ವ್ಯಾಪಾರ ತಿಳಿದಿಲ್ಲ. ಜಮೀನಿನಲ್ಲಿ ಬೆಳೆದ ಭತ್ತದ ಫಸಲು ಕಟಾವಿಗೆ ಬಂದು ಕೊಯ್ಲು ಮಾಡಿ ಹಾಕಲಾಗಿತ್ತು. ನಿರಂತರ ಮಳೆ ಕಾರಣ ಭತ್ತ ಪೂರ್ತಿ ನೆನೆದು ಹಾಳಾಗಿದೆ. ಫಸಲು ನಮ್ಮ ಕೈ ಸೇರುವ ಮುನ್ನವೇ ಸಾವಿರಾರು ನಷ್ಟಕ್ಕೆ ಒಳಗಾಗಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು.
-ಎಚ್.ಎಸ್.ಶಿವಕುಮಾರ್, ಪಟೇಲ್ ಶಿವಲಿಂಗೇಗೌಡರ ಪುತ್ರ ಹಲಗೂರು
- ಕೃಷ್ಣ, ಹಣ್ಣಿನ ಅಂಗಡಿ ಮಾಲೀಕ, ಚನ್ನಪಟ್ಟಣ ರಸ್ತೆ