ಕನ್ನಡಪ್ರಭ ವಾರ್ತೆ ವಿಜಯಪುರ
ಮಕ್ಕಳಲ್ಲಿ ಕ್ರಿಯಾಶೀಲತೆ, ಕಷ್ಟ ಸಹಿಷ್ಣುತೆ, ಸಾಧಿಸುವ ಛಲವಿದ್ದಾಗ ಗುರಿ ಸಾಧನೆಯು ಸುಲಭವಾಗುತ್ತದೆ ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರೀ ಕೋಳಿ ಅಭಿಪ್ರಾಯಪಟ್ಟರು.ನಗರದ ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಂತ ಜೋಸೆಫ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ದಿ.ಜಾನ್ ಬಾಸ್ಕೋ ಅವರ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಬದುಕಿನಲ್ಲಿ ಕೈಗೊಂಡ ಗುರಿಯನ್ನು ತಲುಪಲು ಗುರುವಿನ ಪಾತ್ರ ತುಂಬಾ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಬದುಕು ಗುರಿ ಮುಟ್ಟಿದಾಗ ಸಾರ್ಥಕವಾಗುತ್ತದೆ ಎಂದರು.
ನಗರದಲ್ಲಿ ಅತ್ಯಂತ ಗರಿಷ್ಠ ಸಂಖ್ಯೆಯ ಮಕ್ಕಳಿಗೆ ಸಂತ ಜೋಸೆಫ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಜನೆ ನೀಡುತ್ತಿರುವುದು. ಶಿಕ್ಷಣ ಸಂಸ್ಥೆಯ ಗುಣಮಟ್ಟಕ್ಕೆ ಹಿಡಿದ ಕೈ ಕನ್ನಡಿಯಾಗಿದೆ. ಇಂತಹ ಭವ್ಯ ಶಿಕ್ಷಣ ಸಂಸ್ಥೆಯನ್ನು 90ರ ದಶಕದಲ್ಲಿ ಆಂಗ್ಲ ಮಾಧ್ಯಮದಲ್ಲಿ ಆರಂಭಿಸಿ, ಅಸಂಖ್ಯಾತ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣ ನೀಡಿ ಮಕ್ಕಳ ಬದುಕನ್ನು ರೂಪಿಸಿದ ಶಿಲ್ಪಿ ದಿ.ಜಾನ್ ಬಾಸ್ಕೋ ಅವರು. ಆದ್ದರಿಂದ ನೀವೆಲ್ಲರು ಜಾನ್ ಬಾಸ್ಕೋ ಅವರ ಸಾಧನೆಯ ಗುಣವನ್ನು ಪರಿಪಾಲನೆ ಮಾಡಿ ಸಮಾಜದಲ್ಲಿ ಸಾತ್ವಿಕ ನಾಗರಿಕರಾಗುವದರ ಜೊತೆಗೆ ಅನೇಕರ ಬದುಕನ್ನು ಬೆಳಗಿಸುವ ಜ್ಯೋತಿಯಾಗಬೇಕು ಎಂದು ಹೇಳಿದರು.ಸಂತ ಜೋಸೆಫ್ ಶಿಕ್ಷಣ ಸಂಸ್ಥೆಯ ಖಜಾಂಚಿ ಸುಸನ್ ಜಾನ್ ಬಾಸ್ಕೋ ಮಾತನಾಡಿ, ಕೇವಲ ಎರಡು ವಿದ್ಯಾರ್ಥಿಗಳಿಂದ ಬಾಡಿಗೆ ಮನೆಯಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆ ಇಂದು ವಿಜಯಪುರದಲ್ಲಿ ಬೇರೆ ಬೇರೆ ಬಡಾವಣೆಗಳಲ್ಲಿ ಸ್ವಂತ ಕಟ್ಟಡದಲ್ಲಿ ಸುಮಾರು 3500 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಜೀವನ ಎಂದರೆ ಶಿಕ್ಷಣ, ಶಿಕ್ಷಣ ಎಂದರೆ ಜೀವನ ಎಂದು ಬಾಳಿ ಬದುಕಿದವರು ದಿ.ಜಾನ್ ಬಾಸ್ಕೋ ಎಂದು ಅಭಿಪ್ರಾಯ ಪಟ್ಟರು.
ಬೆಂಗಳೂರಿನ ಜಿಬಿಎಸ್‌ನ ಸಹ ನಿರ್ದೇಶಕ ಡಾ.ನವೀನ್ ಆಂಥೋನಿ ಮಾತನಾಡಿ, ವಿಜಯಪುರದಲ್ಲಿ ಪ್ರಪ್ರಥಮವಾಗಿ ರಾಜಸ್ಥಾನದ ಪ್ರತಿಷ್ಠಿತ ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್ ಹಾಗೂ ಜೆಇಇ ತರಬೇತಿಗೆ ಪ್ರಸಿದ್ಧಿ ಪಡೆದ ಮೋಷನ್ ಶಿಕ್ಷಣ ಸಂಸ್ಥೆಯ ಜೊತೆಗೆ ಸಂತ ಜೋಸೆಫ್ ಪದವಿ ಪೂರ್ವ ಕಾಲೇಜು ತರಬೇತಿಗಾಗಿ ಸಹಯೋಗ ಪಡೆದುಕೊಂಡಿರುವುದರ ಬಗ್ಗೆ ಸಭಿಕರಿಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಸಂತ ಜೋಸಫ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಅನಾಲೀಸಾ ಬಾಸ್ಕೋ, ಅಧ್ಯಕ್ಷ ಶಾಜು ಜೋಸೆಫ್, ಜಯತೀರ್ಥ ಪಂಢರಿ, ಜೆನಿಶಾ ನಾಯರ, ಅನಿಕೇತ ಮೋಹಿತೆ, ರಾಜೇಶ ನುಚ್ಚಿ, ಆನಂದ ಬಿರಾದಾರ, ಪುರುಷೋತ್ತಮ, ಸಚಿನ ಡೋಣೂರ, ಜಾವಿದ್ ಬಾಗಲಕೋಟ ಉಪಸ್ಥಿತರಿದ್ದರು.