The role of shareholders is significant in the growth of the association.
ಕನ್ನಡಪ್ರಭ ವಾರ್ತೆ ಸೊರಬ
ಯಾವುದೇ ಸಹಕಾರಿ ಸಂಘ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ ಅದನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಆಡಳಿತ ಮಂಡಳಿಯಷ್ಟೇ ಸಮಸ್ತ ಷೇರುದಾರರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಸಹಕಾರ ಎಂಬುದು ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತವಾಗದೆ ಪರಸ್ಪರ ನಂಬಿಕೆ, ವಿಶ್ವಾಸ, ಸಹಭಾಗಿತ್ವ ಹಾಗೂ ಸಾಮಾಜಿಕ ಬದ್ಧತೆಯ ಮೇಲೆ ನಿಂತಿರುವ ಮಹತ್ವದ ಆರ್ಥಿಕ ವ್ಯವಸ್ಥೆಯಾಗಿದೆ ಎಂದು ಶ್ರೀ ರಂಗನಾಥ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಶಂಕರ್ ಶೇಟ್ ತಿಳಿಸಿದರು.
ಪಟ್ಟಣದ ಶ್ರೀ ರಂಗನಾಥ ವಿವಿಧೋದ್ದೇಶ ಸಹಕಾರಿ ಸಂಘದ ಆವರಣದಲ್ಲಿ ಆಯೋಜಿಸಿದ್ದ ೭೩ನೇ ಅಖಿಲ ಭಾರತ ಸಹಕಾರ ಸಪ್ತಾಹದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ ಎಂಬ ಉದಾತ್ತ ಆಶಯವೇ ಸಹಕಾರ ಚಳವಳಿಯ ಮೂಲ ತತ್ವವಾಗಿದೆ. ಒಬ್ಬ ವ್ಯಕ್ತಿಯ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಮಿತಿ ಇರಬಹುದು. ಆದರೆ ಹಲವರು ಒಗ್ಗೂಡಿ ಪರಸ್ಪರ ಸಹಕಾರ, ವಿಶ್ವಾಸ ಹಾಗೂ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸಿದಾಗ ದೊಡ್ಡ ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಇದೇ ಸಹಕಾರ ತತ್ವದ ನಿಜವಾದ ಶಕ್ತಿಯಾಗಿದೆ ಎಂದರು.
ಸಹಕಾರಿ ಸಂಘಗಳು ಸಮಾಜದ ಎಲ್ಲಾ ವರ್ಗದ ಜನರಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರ ಬದುಕಿನಲ್ಲಿ ಭರವಸೆಯ ಬೆಳಕಾಗಬೇಕು. ವಿಶೇಷವಾಗಿ ಮಧ್ಯಮ ವರ್ಗ, ಸಣ್ಣ ವ್ಯಾಪಾರಿಗಳು, ರೈತರು ಹಾಗೂ ಸಾಮಾನ್ಯ ಜನರಿಗೆ ಅಗತ್ಯ ಸಂದರ್ಭದಲ್ಲಿ ಸಾಲ ಸೌಲಭ್ಯ ಕಲ್ಪಿಸುವುದು, ಉಳಿತಾಯದ ಮನೋಭಾವ ಬೆಳೆಸುವುದು ಮತ್ತು ಆರ್ಥಿಕ ಶಿಸ್ತನ್ನು ರೂಢಿಸುವುದು ಸಹಕಾರಿ ಸಂಸ್ಥೆಗಳ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಶ್ರೀ ರಂಗನಾಥ ವಿವಿಧೋದ್ದೇಶ ಸಹಕಾರಿ ಸಂಘವು ತನ್ನ ಸದಸ್ಯರಿಗೆ ಅಗತ್ಯ ಸಾಲ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪನೆಯಾದ ಶ್ರೀ ರಂಗನಾಥ ವಿವಿಧೋದ್ದೇಶ ಸಹಕಾರಿ ಸಂಘವು ಹಲವು ಏಳುಬೀಳುಗಳನ್ನು ಎದುರಿಸಿ, ಸವಾಲುಗಳನ್ನು ಮೆಟ್ಟಿ ನಿಂತು ಇಂದು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ನೂರು ವರ್ಷಗಳನ್ನು ಪೂರೈಸಿ ಶತಮಾನೋತ್ಸವ ಆಚರಿಸಿಕೊಂಡಿರುವ ಸೊರಬ ತಾಲೂಕಿನ ಏಕೈಕ ಸಹಕಾರಿ ಸಂಘ ಎಂಬ ಹೆಗ್ಗಳಿಕೆ ನಮ್ಮದಾಗಿದೆ. ಇದು ಕೇವಲ ಸಂಘದ ಸಾಧನೆಯಲ್ಲ, ಹಲವು ತಲೆಮಾರುಗಳ ಸದಸ್ಯರು, ಆಡಳಿತ ಮಂಡಳಿಗಳು ಹಾಗೂ ಸಿಬ್ಬಂದಿಯ ಪರಿಶ್ರಮ ಮತ್ತು ನಂಬಿಕೆಯ ಪ್ರತಿಫಲವಾಗಿದೆ ಎಂದು ಸ್ಮರಿಸಿದರು.
ಕಾರ್ಯಕ್ರಮದ ಧ್ವಜಾರೋಹಣವನ್ನು ಸಂಘದ ಉಪಾಧ್ಯಕ್ಷ ಶ್ರೀಧರ್ ಶೇಟ್ ನೆರವೇರಿಸಿದರು. ನಿರ್ದೇಶಕರಾದ ಸಿ. ರಾಜಶೇಖರ್, ನಾಗರಾಜ್ ಜೈನ್ ಹಾಗೂ ಹರ್ಷ ಹೆಗ್ಡೆ ಮಾತನಾಡಿದರು. ಸಂಘದ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.
----
ಫೋಟೊ:೧೭ಕೆಪಿಸೊರಬ-೦೨ :
ಸೊರಬ ಪಟ್ಟಣದ ಶ್ರೀ ರಂಗನಾಥ ವಿವಿಧೋದ್ದೇಶ ಸಹಕಾರಿ ಸಂಘದ ಆವರಣದಲ್ಲಿ ೭೩ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.