ವಿಕಸಿತ ಭಾರತ ನಿರ್ಮಾಣದಲ್ಲಿ ಯುವ ಜನರ ಪಾತ್ರ ಮಹತ್ವದ್ದು: ಪ್ರೊ. ನಾಗೂರ

KannadaprabhaNewsNetwork |  
Published : Oct 10, 2026, 02:15 AM IST
ಕಾರ್ಯಕ್ರಮವನ್ನ ಪ್ರೊ. ಬಿ.ಎಚ್. ನಾಗೂರ ಉದ್ಘಾಟಿಸಿದರು. | Kannada Prabha

ಸಾರಾಂಶ

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಇಂದಿನ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಕನ್ನಡಪ್ರಭ ವಾರ್ತೆ ಗದಗ

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಇಂದಿನ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಧಾರವಾಡ ಕವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಎಚ್. ನಾಗೂರ ಹೇಳಿದರು.

ನಗರದ ಕೆ.ಎಲ್.ಇ ಸಂಸ್ಥೆಯ ಜ.ತೋಂಟದಾರ್ಯ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ವಿಕಸಿತ ಭಾರತ 2047 ಅವಕಾಶಗಳು, ಸವಾಲುಗಳು ಮತ್ತು ಯುವಜನರ ಪಾತ್ರ ಎಂಬ ವಿಷಯದ ಕುರಿತು ರಾಜ್ಯಮಟ್ಟದ ವಿದ್ಯಾರ್ಥಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಕಸಿತ ಭಾರತ ಎಂದರೆ ಕೇವಲ ದೇಶದ ಆರ್ಥಿಕ ಬೆಳವಣಿಗೆ ಅಥವಾ ತಲಾ ಆದಾಯದ ಹೆಚ್ಚಳವಲ್ಲ, ಗುಣಮಟ್ಟದ ಉದ್ಯೋಗ, ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆ, ಬಲಿಷ್ಠ ಆಡಳಿತ ವ್ಯವಸ್ಥೆ, ಪರಿಸರ ಸಂರಕ್ಷಣೆ ಹಾಗೂ ಸಮಾಜದ ಎಲ್ಲಾ ವರ್ಗಗಳಿಗೂ ಸಮಾನ ಅವಕಾಶಗಳು ದೊರೆಯುವುದು ವಿಕಸಿತ ರಾಷ್ಟ್ರದ ನಿಜವಾದ ಅರ್ಥವಾಗಿದೆ ಎಂದರು.

ಭಾರತವು ಬೃಹತ್ ಯುವ ಜನರನ್ನು ಹೊಂದಿದ ರಾಷ್ಟ್ರವಾಗಿದೆ. ಡಿಜಿಟಲ್ ಮೂಲ ಸೌಕರ್ಯ, ಹಸಿರು ಇಂಧನ ಹಾಗೂ ಸೇವಾ ವಲಯಗಳು ದೇಶದ ಅಭಿವೃದ್ಧಿಗೆ ಪ್ರಮುಖ ಅವಕಾಶಗಳನ್ನು ಒದಗಿಸುತ್ತಿವೆ. ಆದರೆ ಯುವಜನರಿಗೆ ಸಮರ್ಪಕ ಉದ್ಯೋಗ, ಕೌಶಲ್ಯಾಭಿವೃದ್ಧಿ, ಮಹಿಳೆಯರ ಉದ್ಯೋಗ ಪಾಲ್ಗೊಳ್ಳುವಿಕೆ ಹಾಗೂ ಸಂಶೋಧನೆ ಮತ್ತು ನವೀನತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾ. ಡಾ. ರಾಜೇಶ ನಾಯರಿ ಮಾತನಾಡಿ, ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶಗಳಿದ್ದು ಕೌಶಲ್ಯಧಾರಿತ ಶಿಕ್ಷಣವನ್ನು ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ರಾಜ್ಯದ ವಿವಿಧ ಮಹಾವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಆಗಮಿಸಿ ವಿಕಸಿತ ಭಾರತದ ವಿಷಯದ ಕುರಿತು ಪ್ರಬಂಧ ಮಂಡಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಓಬಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಡಾ. ರಮೇಶ್ ಜಿ.ಕೆ., ಪ್ರೊ.ವಿಶ್ವನಾಥ್ ಜಿ., ಡಾ. ನಾಗರಾಜ ಬಳಿಗೇರ, ಪ್ರೊ. ವಿವೇಕ್ ಬಿರಾದಾರ ಸೇರಿ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡು ಕಂಡ ಅಪ್ರತಿಮ ಶಿವಯೋಗಿಗಳಲ್ಲಿ ಕುಮಾರ ಶಿವಯೋಗಿಗಳು ಒಬ್ಬರು: ಶೇಖರಯ್ಯ ಶಾಸ್ತ್ರೀಗಳು
ಬೆಣಚಮಟ್ಟಿ ಗ್ರಾಮದ ಕೆರೆಯಲ್ಲಿ ಅಕ್ರಮ ಮರಳುಗಾರಿಕೆ