ಹೈದರಾಬಾದ್ ವಿಲೀನದಲ್ಲಿ ಹೋರಾಟಗಾರರ ತ್ಯಾಗ ಸ್ಮರಣೀಯ: ಚೆನ್ನಮಲ್ಲಪ್ಪ ಘಂಟಿ

KannadaprabhaNewsNetwork |  
Published : Sep 18, 2026, 01:15 AM IST
ಗುರುಮಠಕಲ್‌ ಪಟ್ಟಣದ ಗುರುವಾರ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ಆಚರಣ ಸಮಿತಿಯಿಂದ, 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ತಹಸೀಲ್ದಾರ ಚೆನ್ನಮಲ್ಲಪ್ಪ ಘಂಟಿ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. | Kannada Prabha

ಸಾರಾಂಶ

ಹೈದರಾಬಾದ್ ಸಂಸ್ಥಾನವನ್ನು ಭಾರತ ಒಕ್ಕೂಟಕ್ಕೆ ವಿಲೀನಗೊಳಿಸುವ ಹೋರಾಟದಲ್ಲಿ ಅನೇಕ ಮಹಾನ್‌ ಹೋರಾಟಗಾರರು ಪ್ರಮುಖ ಪಾತ್ರ ವಹಿಸಿದ್ದರು ಎಂದು ತಹಸೀಲ್ದಾರ್‌ ಚೆನ್ನಮಲ್ಲಪ್ಪ ಘಂಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಹೈದರಾಬಾದ್ ಸಂಸ್ಥಾನವನ್ನು ಭಾರತ ಒಕ್ಕೂಟಕ್ಕೆ ವಿಲೀನಗೊಳಿಸುವ ಹೋರಾಟದಲ್ಲಿ ಅನೇಕ ಮಹಾನ್‌ ಹೋರಾಟಗಾರರು ಪ್ರಮುಖ ಪಾತ್ರ ವಹಿಸಿದ್ದರು ಎಂದು ತಹಸೀಲ್ದಾರ್‌ ಚೆನ್ನಮಲ್ಲಪ್ಪ ಘಂಟಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ಆಚರಣಾ ಸಮಿತಿಯಿಂದ, 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹಾಗೂ ದೇಶದ ಏಕತೆಗಾಗಿ ಹೋರಾಡಿದ ಆ ಮಹನೀಯರ ಕೊಡುಗೆಯನ್ನು ಇಂದಿನ ಪೀಳಿಗೆ ಸದಾ ಸ್ಮರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ್ದ ಮುಖ್ಯಗುರು ಬಂಗಾರಪ್ಪ ಅವರು ಮಾತನಾಡಿ, ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ದೇಶದಲ್ಲಿದ್ದ 565 ಸಂಸ್ಥಾನಗಳಲ್ಲಿ ಜುನಾಗಢ, ಜಮ್ಮು ಮತ್ತು ಕಾಶ್ಮೀರ ಹಾಗೂ ಹೈದರಾಬಾದ್ ಸಂಸ್ಥಾನಗಳು ಆರಂಭದಲ್ಲಿ ಭಾರತ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಯಾಗಲು ಒಪ್ಪಿರಲಿಲ್ಲ. ನಂತರ ಜುನಾಗಢ ಹಾಗೂ ಜಮ್ಮು ಮತ್ತು ಕಾಶ್ಮೀರ ಭಾರತ ಒಕ್ಕೂಟಕ್ಕೆ ಸೇರ್ಪಡೆಯಾದರೂ, ಹೈದರಾಬಾದ್ ಸಂಸ್ಥಾನವು ಒಕ್ಕೂಟಕ್ಕೆ ಸೇರುವುದನ್ನು ವಿರೋಧಿಸಿತ್ತು. ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ರಾಜ್ಯಗಳ ಒಳಗೊಂಡ 16 ಜಿಲ್ಲೆಗಳು ಪ್ರದೇಶಗಳನ್ನು ಒಳಗೊಂಡಿದ್ದ ಹೈದರಾಬಾದ್ ಸಂಸ್ಥಾನವು ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು.

ಅನೇಕ ಹೋರಾಟಗಾರರು ಹಾಗೂ ವಿದ್ಯಾರ್ಥಿ ಸಂಘಟನೆಗಳು ನಿಜಾಮರ ಆಡಳಿತ ಮತ್ತು ರಜಾಕಾರರ ವಿರುದ್ಧ ಹೋರಾಟ ನಡೆಸಿದರು. ಜಗನ್ನಾಥ ಚಂಡರಕಿ, ವಿದ್ಯಾಧರ ಗುರೂಜಿ, ವಿಶ್ವನಾಥರೆಡ್ಡಿ ಮುದ್ನಾಳ, ಕೊಲ್ಲೂರು ಮಲ್ಲಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು, ನಿಜಾಮರ ಆಳ್ವಿಕೆಯನ್ನು ವಿರೋಧಿಸಿ ಬೀದರ್ ಜಿಲ್ಲೆಯ ಹುಮನಾಬಾದ್‌ ತಾಲೂಕಾ ಗೋರ್ಟಾ (ಬಿ) ಗ್ರಾಮದ ದೇಶಭಕ್ತರು ತ್ರಿವರ್ಣ ಧ್ವಜ ಹಾರಿಸಿದ್ದು, ತ್ಯಾಗ ಸ್ಮರಣೀಯ. ಇದರಿಂದ ಆಕ್ರೋಶಗೊಂಡ ನಿಜಾಮರ ಬೆಂಬಲಿಗರು ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದು, 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ, ದೇಶದ ಸ್ವಾತಂತ್ರ್ಯ ಹಾಗೂ ಏಕತೆಗಾಗಿ ಹೋರಾಟಗಳು ಮತ್ತು ತ್ಯಾಗಗಳನ್ನು ಇಂದಿನ ವಿದ್ಯಾರ್ಥಿಗಳು ಸ್ಮರಿಸಬೇಕು ಎಂದು ಹೇಳಿದರು.

ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಪುರಸಭೆಯ ಇಲಾಖೆಯ ಸ್ವಚ್ಚತೆಯ ಪೌರ ಕಾರ್ಮಿಕರಿಗೆ ಅಭಿನಂದನೆ ಪತ್ರ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಂಬ್ರೀಶ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಪಿಎಸ್ಐ ಎ. ಎಸ್. ಶಾಬಾದಿ, ಗ್ರೇಡ್-2 ತಹಸೀಲ್ದಾರ್‌ ನರಸಿಂಹಸ್ವಾಮಿ, ಪ್ರಾಂಶುಪಾಲರು ಮಲ್ಲಿಕಾರ್ಜುನ ಹೊಸಮನಿ, ಪ್ರಾಥಮಿಕ ಶಿಕ್ಷಕರ ಸಂಘ ಅಧ್ಯಕ್ಷರು ನಾರಾಯಣರೆಡ್ಡಿ ಪೊಲೀಸ್ ಪಾಟೀಲ, ಶಿಕ್ಷಣ ಸಂಯೋಜಕರು ರವೀಂದ್ರ ಚವ್ಹಾಣ, ಪ್ರಕಾಶ ಶಾಸ್ತ್ರಿ ,ಸಿಆರ್ ಪಿ ಬಾಲಪ್ಪ, ಎಎಸ್ಐ ಭೀಮಣ್ಣ ಕಾನಗಡ್ಡ, ದೈಹಿಕ ಶಿಕ್ಷಕರು ಆಂಜನೇಯಲು, ಮಹೇಶಗೌಡ ಹಾಗೂ ವಿವಿಧ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದತ್ತಾತ್ರೇಯನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಿಎಂ ಡಿಕೆ ಶಿವಕುಮಾರ್‌
ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ; ಬೆಳಗ್ಗೆ ತೆರವು