ಕನ್ನಡಪ್ರಭ ವಾರ್ತೆ ಹುಣಸೂರು
ಪಟ್ಟಣಾದ್ಯಂತ ಎಲ್ಲೆಲ್ಲೂ ವಾಯುಪುತ್ರನ ಹವಾ.. ರಸ್ತೆಗಳಲ್ಲಿ ರಾರಾಜಿಸಿದ ಕೇಸರಿ ಬಾವುಟ..ಎಲ್ಲೆಲ್ಲೂ ಹನುಮನಿಗೆ ಮೊಳಗಿದ ಉದ್ಘೋಷ..ನಿರೀಕ್ಷೆಗೂ ಮೀರಿದ ಜನಸಾಗರದ ಮಧ್ಯೆ..ವಾಯುಪುತ್ರನ ಕುರಿತಾದ ಹಾಡಿಗೆ ಯುವಸಮೂಹ ಹುಚ್ಚೆದ್ದು ಕುಣಿಯಿತು. 25 ಸಾವಿರಕ್ಕೂ ಹೆಚ್ಚು ಹನುಮ ಭಕ್ತರು ಒಟ್ಟಾಗಿ ಸೇರಿ ಇಡೀ ನಗರವನ್ನು ಕೇಸರಿಮಯವಾಗಿಸಿದರು.
ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಚಾಲನೆಪಟ್ಟಣದ ಕಲ್ಕುಣಿಕೆ ರಂಗನಾಥ ಬಡಾವಣೆಯಲ್ಲಿ ಬೆಳಗ್ಗೆ 11.30ರ ವೇಳೆಗೆ ಸಂಪ್ರದಾಯದಂತೆ ಗಾವಡಗೆರೆ ಶ್ರೀ ಗುರುಲಿಂಗಜಂಗಮದೇವರ ಮಠದ ಶೀ ನಟರಾಜ ಸ್ವಾಮೀಜಿ ಮತ್ತು ಮಾದಳ್ಳಿ ಉಕ್ಕಿನಕಂತ ಮಠದ ಶ್ರೀ ಸಾಂಬಸದಾಶಿವ ಸ್ವಾಮಿಗಳ ಸಾನಿಧ್ಯದಲ್ಲಿ ನಂದಿಧ್ವಜಕ್ಕೆ ಗಣ್ಯರು ಪೂಜೆ ಸಲ್ಲಿಸಿದರು. ನಂತರ ಶ್ರೀರಾಮ, ಸೀತಾಮಾತೆ, ಲಕ್ಷ್ಮಣರನ್ನೊಳಗೊಂಡು ಆಂಜನೇಯನ ಮೂರ್ತಿಗೆ ಸ್ವಾಮಿಗಳಿಂದ ಪೂಜೆ ಸಲ್ಲಿಸಿದರು.
ತದನಂತರ ಆಗಮಿಸಿದ ಧರ್ಮಜ್ಯೋತಿಗೆ ಗಣ್ಯರು ನಮನ ಸಲ್ಲಿಸಿದರು. ಆನಂತರ ವಿವಿಧ ಗರಡಿಮನೆಗಳಿಂದ ಆಗಮಿಸಿದ್ದ ಆಂಜನೇಯಸ್ವಾಮಿ ವಿಗ್ರಹಗಳು, ದತ್ತಾತ್ರೇಯ ಸ್ವಾಮಿಯ ವಿಗ್ರಹಗಳಿಗೆ ಪುಷ್ಪನಮನ ಸಲ್ಲಿಸಿದರು.
ದಾರಿಯುದ್ದಕ್ಕೂ ಕೇಸರಿ ಕಲರವ
ಸಂಜೆ ನಾಲ್ಕರ ವೇಳೆಗೆ ಹೈವೋಲ್ಠೇಜ್ ರಸ್ತೆಯಾದ ಬಜಾರ್ ರಸ್ತೆಯಲ್ಲಿ ಮಾರುತಿ ಭಕ್ತರು ಉದ್ಘೋಷಗಳನ್ನು ಮೊಳಗಿಸಿದರು. ಪೊಲೀಸರು ಮೆರವಣಿಗೆ ಎಲ್ಲೂ ನಿಲ್ಲದಂತೆ ಕ್ರಮವಹಿಸಿ ಶೀಘ್ರ ಮುನ್ನಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ಮೆರವಣಿಗೆಯು ಅಕ್ಷಯ ಭಂಡಾರ್ ಮೂಲಕ, ಬಸ್ ನಿಲ್ದಾಣದ ಹಾದು ಮೈಸೂರು-ಹುಣಸೂರು ಮುಖ್ಯರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯ ಆವರಣ ತಲುಪುವ ಮೂಲಕ ಮೆರವಣಿಗೆ ಶಾಂತಿಯುತವಾಗಿ ಸಂಪನ್ನಗೊಂಡಿತು.
ಮೆರವಣಿಗೆ ಚಾಲನೆ ನೀಡಿದ ನಂತರ ಗಣ್ಯರು ಮತ್ತು ಮಠಾಧೀಶರು ತೆರದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದರು. ನೆರೆದಿದ್ದ ಭಕ್ತಗಣಕ್ಕೆ ಕೈಬೀಸುತ್ತಲೇ ಉತ್ಸವದ ಸಂಭ್ರಮಾಚರಣೆಯನ್ನು ಮಾಡಿಕೊಂಡರು. ಶಾಸಕ ಜಿ.ಡಿ. ಹರೀಶ್ ಗೌಡ ಮೆರವಣಿಗೆ ಅಂತ್ಯದವರೆಗೂ ಇದ್ದರು.-- ಬಾಕ್ಸ್--1-- ನಿರೀಕ್ಷೆಗೂ ಮೀರಿದ ಭಕ್ತಸಾಗರ --ಮಧ್ಯಾಹ್ನ 2 ಗಂಟೆಯಾದರೂ ಮೆರವಣಿಗೆಗೆ ಸೇರಿಕೊಳ್ಳುವ ಉದ್ದೇಶದಿಂದ ಗ್ರಾಮಾಂತರ ಭಾಗಗಳಿಂದ ಯುವಕರ ಪಡೆ ದಂಡುದಂಡಾಗಿ ಬರುತ್ತಿದ್ದು, ಕಾಣಬರುತ್ತಿತ್ತು. ಪಟ್ಟಣದ ಗಡಿಭಾಗಗಳಲ್ಲಿ 6 ಕಡೆಗಳಲ್ಲಿ ಪೊಲೀಸರು ಚೆಕ್ ಪೋಸ್ಟ್ ನಿರ್ಮಿಸಿದ್ದರು. 1500 ಪೊಲೀಸರು ಶಾಂತಿ ಭಂಗವಾದಂತೆ ಕರ್ತವ್ಯ ನಿರ್ವಹಿಸಿದರು. ಪಟ್ಟಣದೊಳಗೆ ಬರುತ್ತಿದ್ದ ಯುವಕರನ್ನು ತಡೆದು ವಿಚಾರಿಸುತ್ತಿದ್ದುದು ಕಂಡುಬಂತು. 10 ಸಾವಿರ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳಬಹುದೆಂಬ ನಿರೀಕ್ಷೆ ಆಯೋಜಕರು ಮತ್ತು ಪೊಲೀಸರು ಹೊಂದಿದ್ದರು. ಆದರೆ ಎಲ್ಲರ ನಿರೀಕ್ಷೆ ಮೀರಿ 25 ಸಾವಿರಕ್ಕೂ ಹೆಚ್ಚು ಭಕ್ತರು ಮೆರವಣಿಗೆಯಲಿ ಪಾಲ್ಗೊಂಡು ಮೆರವಣಿಗೆಯನ್ನು ಅಂದಗಾಣಿಸಿದ್ದು ಎಲ್ಲರ ಮೆಚ್ಚುಗಗೆ ಪಾತ್ರವಾಯಿತು.--ಬಾಕ್ಸ್-- 2---- ಶ್ರೀರಾಮಸ್ಮರಣೆ ಮೊಳಗಿತು --ಮೆರವಣಿಗೆಯಲ್ಲಿ 10ಕ್ಕೂ ಹೆಚ್ಚು ಶ್ರೀ ಆಂಜನೇಯನ ಮೂರ್ತಿಗಳು ಪಾಲ್ಗೊಂಡಿದ್ದವು. ಪಂಚಲೋಹದಿಂದ 5 ಅಡಿ ಎತ್ತರದ ತಯಾರಿಸಿದ ಪವನಸುತನ ಮೂರ್ತಿ, 15 ಅಡಿ ಎತ್ರದ ಬೃಹತ್ ಮೂರ್ತಿಗಳು ಎಲ್ಲರಲ್ಲೂ ಭಕ್ತಿಯ ಪರಾಕಾಷ್ಠೆಯನ್ನು ತಲುಪುವಂತೆ ಮಾಡಿದವು ಶಿವಜ್ಯೋತಿ ನಗರದ ಗರಡಿಮನೆ, ಕಲ್ಕುಣಿಕೆ ನಾಯಕರ ಗರಡಿಮನೆ, ಮುತ್ತುಮಾರಮ್ಮ ಗರಡಿಮನೆಯ ಆಂಜನೇಯಮೂರ್ತಿಗಳು, ದತ್ತಾತ್ರೇಯ ಮೂರ್ತಿ ಮುಂತಾದವುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಕಲ್ಕುಣಿಕೆ ಶ್ರೀರಾಮ ಹುಣಸೂರು ಈವೆಂಟ್ಸ್ ವತಿಯಿಂದ ಇತ್ತೀಚೆಗೆ ಅಯೋಧ್ಯೆಯಲ್ಲಿ ಸ್ಥಾಪನೆಗೊಂಡ ಧರ್ಮಧ್ವಜದ ಸ್ತಬ್ಧಚಿತ್ರ ನೋಡುಗರನ್ನು ಆಕರ್ಷಿಸಿತು. ಅಲ್ಲದೇ ಅಂಜನಾದ್ರಿಬೆಟ್ಟದಲ್ಲಿ ವಿರಾಜಮಾನನಾದ ಆಂಜನೇಯನ ಸ್ಥಬ್ಧಚಿತ್ರವು ಭಕ್ತರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು. ಮೆರವಣಿಗೆಯಲ್ಲಿ ಕೇರಳದ ಚಂಡೆವಾದನ, ಗಾವಡಗೆರೆಯ ಯುವಕತಂಡದಿಂದ ತಮಟೆವಾದನ, ಪಟ್ಟಣದ ಸರಸ್ವತಿಪುರಂನ ಡೊಳ್ಳುಕುಣಿತ, ವೀರಗಾಸೆಕುಣಿತ, ಕೀಲುಕುದುರೆಗಳು, ನವಿಲುನೃತ್ಯ, ಮಂಗಳವಾದ್ಯ ಮೆರವಣಿಗೆಯ ಅಂದವನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಸಫಲವಾದವು.