ಮಠ ಮಾನ್ಯಗಳು ಜಾಗೃತಿ ಮೂಡಿಸುವ ಕೇಂದ್ರಗಳಾಗಿವೆ, ೫ ಸಾವಿರಕ್ಕೂ ಹೆಚ್ಚು ಇದ್ದ ಮಠಗಳು ಇಂದು ೧೨೦೦ ಆಗಿದ್ದು, ಅದರಲ್ಲೂ ೫೫೦ ಮಠಗಳು ನಿರಂತರ ಚಟುವಟಿಕೆಯಲ್ಲಿದ್ದು ಧಾರ್ಮಿಕ ಜಾಗೃತಿ ಮೂಡಿಸುತ್ತಿವೆ, ಮನುಷ್ಯರು ಬದಲಾಗಬೇಕು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಮುದಾಯ ಸಂಘಟಿತರಾಗಿ ಬಸವ ಜಯಂತಿ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರ ಜೊತೆ ಬಸವ ತತ್ವಗಳನ್ನು ಅಳವಡಿಸಿಕೊಂಡು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ದೇವನೂರು ಶ್ರೀ ಗುರುಮಲ್ಲೇಶ್ವರ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ನಗರದ ರಾಮಸಮುದ್ರ ಬಡಾವಣೆಯ ಶ್ರೀ ಗುರುಕಂಬಳೇಶ್ವರ ಭಿಕ್ಷದ ಮಠ ವತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ, ಗುರುವಂದನೆ ಹಾಗೂ ಧಾರ್ಮಿಕ ಸಭೆಯ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಬಸವ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಅತ್ಯಂತ ಸುಖಮಯವಾಗುತ್ತದೆ ಎಂದರು.
ವಚನಗಳು ಬದುಕಿಗೆ ದಾರಿ ತೋರುತ್ತವೆ. ಗ್ರಾಮದಲ್ಲಿ ಬಸವ ಜಯಂತಿ, ಶ್ರೀ ಗುರುಕಂಬಳೇಶ್ವರ ಭಿಕ್ಷದ ಮಠದ ೩೦ನೇ ವಾರ್ಷಿಕೋತ್ಸವ ಹಾಗೂ ಕಳೆದ ೩೦ ವರ್ಷಗಳಿಂದ ಶ್ರೀ ಮಠವನ್ನು ಮುನ್ನಡೆಸಿಕೊಂಡು ಬರುತ್ತಿರುವ ಶ್ರೀ ಮಹದೇವಸ್ವಾಮಿ ಅವರಿಗೆ ಗ್ರಾಮಸ್ಥರ ಪರವಾಗಿ ಗುರುವಂದನೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ ಮಾತನಾಡಿ, ಮಠ ಮಾನ್ಯಗಳು ಜಾಗೃತಿ ಮೂಡಿಸುವ ಕೇಂದ್ರಗಳಾಗಿವೆ, ೫ ಸಾವಿರಕ್ಕೂ ಹೆಚ್ಚು ಇದ್ದ ಮಠಗಳು ಇಂದು ೧೨೦೦ ಆಗಿದ್ದು, ಅದರಲ್ಲೂ ೫೫೦ ಮಠಗಳು ನಿರಂತರ ಚಟುವಟಿಕೆಯಲ್ಲಿದ್ದು ಧಾರ್ಮಿಕ ಜಾಗೃತಿ ಮೂಡಿಸುತ್ತಿವೆ, ಮನುಷ್ಯರು ಬದಲಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಕ್ಷೇತ್ರ ಮಲ್ಲನಮೂಲೆ ಮಠಾಧ್ಯಕ್ಷ ಶ್ರೀ ಇಮ್ಮಡಿ ಸಿದ್ಧಲಿಂಗ ಮಹಾಸ್ವಾಮೀಜಿ ಮಾತನಾಡಿ, ದಾಸೋಹಕ್ಕೆ ಮಹತ್ವ ನೀಡಿದ್ದ ಚನ್ನಬಸವಸ್ವಾಮೀಜಿಗಳ ಹಾದಿಯಲ್ಲೇ ಸಾಗುತ್ತಿದ್ದು, ಮನುಷ್ಯರು ದ್ವೇಷ, ಅಸೂಯೆ ಮರೆತು ಸಹಬಾಳ್ವೆಯ ಜೀವನ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮಲ್ಲನ ಮೂಲೆ ಲಿಂಗೈಕ್ಯ ಚನ್ನಬಸವ ಮಹಾಸ್ವಾಮೀಜಿ ಶ್ರೀಗಳವರಿಗೆ ನುಡಿನಮನ ಸಲ್ಲಿಸಿದ ದೇವನೂರಿನ ನಿವೃತ್ತ ಪ್ರಾಂಶುಪಾಲ ಪ್ರೊ.ಸದಾಶಿವಮೂರ್ತಿ, ಚನ್ನಬಸವ ಸ್ವಾಮೀಜಿಗಳು ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡುವುದರ ಜೊತೆ ಭಕ್ತರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದರು ಎಂದು ಸ್ಮರಿಸಿದರು.
ಸ್ವಾಭಿಮಾನಿಯಾಗಿ, ಮಠದ ಅಭಿವೃದ್ಧಿಯ ಹರಿಕಾರರಾಗಿದ್ದರು, ಅಂತಹವರು ರಾಮಸಮುದ್ರದಲ್ಲಿ ಶ್ರೀ ಗುರುಕಂಬಳೇಶ್ವರ ಭಿಕ್ಷದ ಮಠವನ್ನು ಇಲ್ಲಿಯ ಭಕ್ತರ ಸಹಕಾರದಿಂದ ಸ್ಥಾಪಿಸಿದರು, ಶ್ರೀಮಠ ೩೦ ವರ್ಷಗಳನ್ನು ಪೂರೈಸುವುದರ ಜೊತೆ ಶ್ರೀ ಮಠದಲ್ಲಿ ೩೦ ವರ್ಷಗಳಿಂದಲೂ ದಾಸೋಹದ ಕಾಯಕವನ್ನು ಮಾಡಿಕೊಂಡು ಬಂದಿರುವ ಮಹದೇವಸ್ವಾಮಿಗಳಿಗೆ ಗ್ರಾಮಸ್ಥರು ಗುರುವಂದನೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮಹದೇವಸ್ವಾಮಿಗಳಿಗೆ ಗುರುವಂದನೆ ಸಲ್ಲಿಸಿದರು.
ಮರಿಯಾಲ ಮುರುಘ ರಾಜೇಂದ್ರ ಮಠಾಧ್ಯಕ್ಷ ಶ್ರೀ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಶ್ರೀಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು, ನಗರದ ಸಿದ್ಧಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮೀಜಿ, ಮುಡುಕನಪುರ ಹಲವಾರ ಮಠಾಧ್ಯಕ್ಷರಾದ ಶ್ರೀ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಶ್ರೀಮಠದ ಆವರಣದಲ್ಲಿ ಬೆಳಗ್ಗೆ ೭ಗಂಟೆಗೆ ಧ್ವಜಾರೋಹಣವನ್ನು ನಗರದ ಶ್ರೀಸಿದ್ಧಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷ ಶ್ರೀ ಚನ್ನಬಸವ ಸ್ವಾಮೀಜಿ ನೆರವೇರಿಸಿದರೆ, ಬೆಳಗ್ಗೆ ೮ಕ್ಕೆ ಸುಕ್ಷೇತ್ರ ಮಲ್ಲನಮೂಲೆ ಮಠಾಧ್ಯಕ್ಷ ಶ್ರೀ ಇಮ್ಮಡಿ ಸಿದ್ಧಲಿಂಗಮಹಾಸ್ವಾಮೀಜಿಗಳ ದಿವ್ಯಪಾದಪೂಜೆ ನಡೆಯಿತು, ಅಖಿಲ ಭಾರತೀಯ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು,
ಗೌಡಿಕೆ ಮಹೇಶ್, ಕೋಮುವಾರು ಯಜಮಾನರಾದ ಆರ್.ಪುಟ್ಟಮಲ್ಲಪ್ಪ, ಯಜಮಾನ ನಾಗರಾಜಪ್ಪ. ಗೌಡಿಕೆ ಗುರುಮಲ್ಲಪ್ಪ, ಮಾಜಿ ಯಜಮಾನರಾದ ಆರ್.ವಿ.ಮಹದೇವಸ್ವಾಮಿ, ಎಲ್.ಮಹದೇವಪ್ಪ, ಮಾಜಿ ಗೌಡಿಕೆ ನಾಗರಾಜು, ಆರ್. ಎನ್. ಸಿದ್ಧಲಿಂಗಸ್ವಾಮಿ, ಯುವ ಮುಖಂಡ ಆರ್.ಎನ್.ನವೀನ್ ಕುಮಾರ್ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.