ಗಂಗಾವತಿಯಲ್ಲಿ ಗೆಲ್ಲುವ ಕುದುರೆಗೆ ತಲಾಶ್‌

KannadaprabhaNewsNetwork |  
Published : Jun 08, 2025, 01:51 AM IST
45445 | Kannada Prabha

ಸಾರಾಂಶ

ಗಾಲಿ ಜನಾರ್ದನ ರೆಡ್ಡಿ ಜೈಲು ಶಿಕ್ಷೆಗೆ ಗುರಿಯಾಗಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಹೀಗಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ ಎಂದು ಸಿದ್ಧತೆ ಆರಂಭಿಸಿರುವ ಬಿಜೆಪಿ, ಕಾಂಗ್ರೆಸ್‌ ಗೆಲ್ಲುವ ಕುದುರೆಗೆ ಹುಡುಕಾಟ ನಡೆಸಿವೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಗಾಲಿ ಜನಾರ್ದನ ರೆಡ್ಡಿ ಜೈಲು ಶಿಕ್ಷೆಗೆ ಗುರಿಯಾಗಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಹೀಗಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ ಎಂದು ಸಿದ್ಧತೆ ಆರಂಭಿಸಿರುವ ಬಿಜೆಪಿ, ಕಾಂಗ್ರೆಸ್‌ ಗೆಲ್ಲುವ ಕುದುರೆಗೆ ಹುಡುಕಾಟ ನಡೆಸಿವೆ. ಈ ಕುರಿತು ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು ಯಾರನ್ನು ನಿಲ್ಲಿಸಿದರೆ ಸೂಕ್ತ ಎಂಬ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.

ಬಿಜೆಪಿ ಪಾಳೆಯಲ್ಲಿ ಅಷ್ಟೊಂದು ಚರ್ಚೆ ಶುರುವಾಗಿಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿರುವ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರನ್ನು ಅಖಾಡಕ್ಕೆ ಇಳಿಸಬೇಕಾ ಅಥವಾ ಹೊಸ ಮುಖಕ್ಕೆ ಮಣೆ ಹಾಕಬೇಕ ಎನ್ನುವುದಷ್ಟೇ ಚರ್ಚೆಯಾಗುತ್ತಿದೆ. ಜತೆಗೆ ಜನಾರ್ದನ ರೆಡ್ಡಿ ಅವರು ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸಿರುವ ಕುರಿತು ಸಹ ಚರ್ಚೆ ನಡೆಯುತ್ತಿದೆ.

ಅಭಿಪ್ರಾಯ ಸಂಗ್ರಹ:ಕಾಂಗ್ರೆಸ್‌ನಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಒಂದು ವೇಳೆ ಚುನಾವಣೆ ನಡೆದರೆ ಪಕ್ಷದಿಂದ ಯಾರಿಗೆ ಟಿಕೆಟ್‌ ನೀಡಿದರೆ ಒಳಿತು ಎಂದು ಹೈಕಮಾಂಡ್‌ ಅಭಿಪ್ರಾಯ ಸಂಗ್ರಹಿಸಲು ಶುರು ಮಾಡಿದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಮತ್ತೊಮ್ಮೆ ಮಣೆ ಹಾಕಬೇಕಾ ಅಥವಾ ಪರ್ಯಾಯ ಅಭ್ಯರ್ಥಿಗೆ ಹುಡುಕಾಟ ನಡೆಸಬೇಕಾ ಎನ್ನುವ ಕುರಿತು ಸಚಿವರು, ಶಾಸಕರು, ಪಕ್ಷದ ಮುಂಚೂಣಿ ನಾಯಕರು ಚರ್ಚಿಸುತ್ತಿದ್ದಾರೆ. ಅತ್ತ ಇಕ್ಬಾಲ್‌ ಅನ್ಸಾರಿ ಅವರಿಗೆ ಮತ್ತೊಮ್ಮೆ ಟಿಕೆಟ್‌ ನೀಡಬೇಕೆಂದು ಹೈಕಮಾಂಡ್‌ ಮುಂದೆ ಕೆಲವರು ಅಭಿಪ್ರಾಯ ಮಂಡಿಸಿದ್ದಾರೆ. ಇವರೊಂದಿಗೆ ಹಲವರ ಹೆಸರು ಸಹ ಕೇಳಿ ಬಂದಿದ್ದು ಹೈಕಮಾಂಡ್‌ ಸರ್ವೇ ಸಹ ನಡೆಸುತ್ತಿದೆ.

ಮುಸ್ಲಿಂ ಸಮುದಾಯಕ್ಕೆ ಟಿಕೆಟ್‌ ನೀಡಿ:

ಈ ಬಾರಿಯೂ ಮುಸ್ಲಿಂ ಸಮುದಾಯಕ್ಕೆ ಟಿಕೆಟ್‌ ನೀಡಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಇದೀಗ ಇಕ್ಬಾಲ್‌ ಅನ್ಸಾರಿ ಹೆಸರಿನೊಂದಿಗೆ ಯುವ ಕಾಂಗ್ರೆಸ್‌ನ ಆಸಿಫ್ ಖಾನ್, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೆಸರು ಕೇಳಿ ಬಂದಿವೆ. ಆದರೆ, ಅಮ್ಜದ್ ಪಟೇಲ್ ಪರ ಮತ್ತು ವಿರುದ್ಧವೂ ಅಭಿಪ್ರಾಯ ವ್ಯಕ್ತವಾಗಿದೆ.

ಕರಡಿ ಹೆಸರು ಪ್ರಸ್ತಾಪ:

ಮುಸ್ಲಿಂ ಸಮುದಾಯದ ಹೊರತಾಗಿ ಟಿಕೆಟ್ ನೀಡಬೇಕು ಎನ್ನುವುದಾದರೆ ಮಾಜಿ ಸಂಸದ ಸಂಗಣ್ಣ ಕರಡಿ ಅವರಿಗೆ ನೀಡಬೇಕು. ಪಕ್ಷಕ್ಕೆ ಬಂದ ಬಳಿಕ ಅವರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ. ಇದೀಗ ಗಂಗಾವತಿ ಕ್ಷೇತ್ರದ ಟಿಕೆಟ್‌ ನೀಡಬೇಕು ಎಂದು ಹಲವರು ಹೈಕಮಾಂಡ್‌ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇದರೊಂದಿಗೆ ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಅವರ ಹೆಸರು ಕೇಳಿ ಬರುತ್ತಿದೆ. ಕುರುಬ ಸಮುದಾಯಕ್ಕೆ ಕೊಡಬೇಕು ಎನ್ನುವುದಾದರೆ ಇವರು ಸೂಕ್ತ ಎಂದು ಕೆಲವರು ವಾದಿಸಿದರೆ, ಹಲವರು ಆಕ್ಷೇಪಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಟಿಕೆಟ್‌ ಪೈಪೋಟಿ ಹೆಚ್ಚಳವಾಗಿರುವುದರಿಮದ ಹೈಕಮಾಂಡ್‌ ಹಿರಿಯ ನಾಯಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪ್ರತ್ಯೇಕವಾಗಿಯೇ ತಮ್ಮದೇ ಮೂಲಗಳಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆಂದು ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು
ಸಿ.ಟಿ.ರವಿ ‘ಪಾಕ್‌ ನಾಲಿಗೆ’ ಹೇಳಿಕೆಗೆ ಸದನವೇ ಬಲಿ